ಜಿಲ್ಲೆ

ಸೀಲ್​ಡೌನ್ ಪ್ರದೇಶದಲ್ಲಿ ನೀರವ ಮೌನ

ಹುಬ್ಬಳ್ಳಿ: ಹೊರಬಂದು ಓಡಾಡಿಕೊಂಡಿರಬೇಕು ಎಂದಿದ್ದವರಿಗೆ ಬರ ಸಿಡಿಲಿನಂತೆ ಬಂದೆರಗಿರುವ ಕರೊನಾ ಸೋಂಕು, ಸೀಲ್​ಡೌನ್​ನೊಳಗೆ ಕೂಡಿಹಾಕಿದೆ.

ನೂರು ಮೀಟರ್ ನಿಷೇಧಿತ ಪ್ರದೇಶದಲ್ಲಿ ಇಲ್ಲಿಯ ಕರಾಡಿ ಹಾಗೂ ಮುಲ್ಲಾ ಓಣಿಯ ಜನರು ಬಂಧಿಗಳಾಗಿದ್ದಾರೆ. ಓಡಾಡುವ ಪ್ರಶ್ನೆಯೇ ಇಲ್ಲ. ಮಾತುಕತೆಗಳೆಲ್ಲ ಮನೆಯೊಳಗೆ ಸೀಮಿತವಾಗಿವೆ. ಆಗಾಗ ಬರುವ ತರಕಾರಿ, ಹಣ್ಣು ಹಾಗೂ ದಿನಸಿಗಳನ್ನು ತರಲು ಮನೆಯೊಳಗಿನ ಒಬ್ಬರು ಮಾತ್ರ ಹೊರಗೆ ಬರಬಹುದು. ಇಬ್ಬರು ಬಂದರೆ ಪೆಟ್ಟು ಬೀಳುವ ಭಯ!

ಮುಲ್ಲಾ ಓಣಿಯ ಐವರು ಹಾಗೂ ಕರಾಡಿ ಓಣಿಯ ಒಬ್ಬರಿಗೆ ಕರೊನಾ ಸೋಂಕು ತಗುಲಿದ ಬಳಿಕ 3 ಕಿ.ಮೀ. ಸುತ್ತಳತೆಯ ಪ್ರದೇಶವನ್ನು ಕಂಟೈನ್​ವೆುಂಟ್ ಏರಿಯಾ ಎಂದು ಘೊಷಿಸಲಾಗಿದೆ. 100 ಮೀ. ಸುತ್ತಳತೆ ಪ್ರದೇಶವನ್ನು ಸೀಲ್​ಡೌನ್ ಮಾಡಲಾಗಿದೆ. ಸೀಲ್​ಡೌನ್ ಆದೇಶ ಸ್ಥಳೀಯರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಅನಿವಾರ್ಯವಾಗಿದೆ. ಇಲ್ಲದಿದ್ದರೆ ಮತ್ತಷ್ಟು ಜನರು ಹಾಗೂ ಪ್ರದೇಶಗಳಿಗೆ ಸೋಂಕು ಹರಡಿ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚೆಂದು ಜಿಲ್ಲಾಡಳಿತ ಭಾವಿಸಿದೆ.

ಪೊಲೀಸ್ ಇಲಾಖೆ ಈಗಾಗಲೇ ಸರ್ಪಗಾವಲು ಹಾಕಿದೆ. ಯಾರೊಬ್ಬರೂ ಈ ಪ್ರದೇಶದೊಳಗೆ ಬರುವಂತಿಲ್ಲ, ಹೊರಗಡೆ ಹೋಗುವಂತಿಲ್ಲ. ಬಂದವರಿಗೆ ಪೊಲೀಸರೇ ಬಿಸಿ ಮುಟ್ಟಿಸುತ್ತಿದ್ದಾರೆ. ಇಲ್ಲಿ ಆರೋಗ್ಯ ಕಾರ್ಯಕರ್ತೆಯರು, ಪಾಲಿಕೆ ಸಿಬ್ಬಂದಿ, ಅಧಿಕೃತ ಪಾಸ್ ಪಡೆದು ದಿನಸಿ ಮಾರಾಟ ಮಾಡುವ ಸೀಮಿತ ಸಂಖ್ಯೆಯ ಜನರು ಮಾತ್ರ ಅಲ್ಲಿಗೆ ಬರುತ್ತಾರೆ. ಅವರೆಲ್ಲ ಅತ್ತಿಂದಿತ್ತ ಓಡಾಡಿ ಮನೆಯಿಂದ ಯಾರೂ ಹೊರಗಡೆ ಬಾರದಂತೆ ಕಣ್ಗಾವಲಿಟ್ಟಿದ್ದಾರೆ ಎಂದು ಪಾಲಿಕೆ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ಡ್ರೋಣ್ ಹಾರಾಟ ಏಕಿಲ್ಲ?: ಸೀಲ್​ಡೌನ್ ಪ್ರದೇಶದಲ್ಲಿ ಯಾರೂ ಹೊರಗೆ ಬಾರದಂತೆ ನೋಡಿಕೊಳ್ಳಲು ಡ್ರೋಣ್ ಕ್ಯಾಮರಾಗಳನ್ನೂ ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿತ್ತು. ಆದರೆ, ನಿರ್ದಿಷ್ಟ ಪ್ರದೇಶದಲ್ಲಿ ಒಮ್ಮೆ ಕೂಡ ಡ್ರೋನ್ ಬಳಕೆ ಮಾಡಿಲ್ಲ. ಬೇರೆ ಜಿಲ್ಲೆಗಳಲ್ಲಿ ಲಾಕ್​ಡೌನ್ ಪರಿಶೀಲನೆಗೇ ಡ್ರೋಣ್ ಕ್ಯಾಮರಾ ಬಳಕೆಯಾಗುತ್ತಿದೆ. ಹುಬ್ಬಳ್ಳಿಯಲ್ಲಿ ಮಾತ್ರ ಏಕೆ ಬಳಸಿಲ್ಲ ಎಂಬ ಪ್ರಶ್ನೆ ಕೇಳಿಬರುತ್ತಿದೆ. ಈ ಕುರಿತು ಕೇಳಿದಾಗ ಅಧಿಕಾರಿಯೊಬ್ಬರು, ಪೊಲೀಸ್ ಠಾಣೆ ಸ್ಥಳಾಂತರ ಸೇರಿ ಕಮಿಷನರೇಟ್ ವ್ಯಾಪ್ತಿಯಲ್ಲಿ ವಿವಿಧ ಕೆಲಸಗಳು ಇದ್ದವು... ಎಂದಷ್ಟೇ ಹೇಳಿದರು.

ದ್ವೀಪದಂತಾಗಿರುವ ಓಣಿಗಳು: ಕರೊನಾ ಸೋಂಕಿತರು ಮುಲ್ಲಾ ಹಾಗೂ ಕರಾಡಿ ಓಣಿಯಲ್ಲಿ ಪತ್ತೆಯಾಗುತ್ತಿದ್ದಂತೆ ಇಡೀ ಪ್ರದೇಶವೀಗ ಹುಬ್ಬಳ್ಳಿಯಿಂದ ಬೇರ್ಪಟ್ಟಂತಿದೆ. ಈ ಪ್ರದೇಶದಲ್ಲಿ ಜನರು ಓಡಾಡದಂತಾಗಿದ್ದು, ದ್ವೀಪದಂತಾಗಿ ಮಾರ್ಪಟ್ಟಿದೆ. ಸಂಪರ್ಕ ಕಳೆದುಕೊಂಡಂತಿದ್ದರೂ ಇಲ್ಲಿನ ಜನರಿಗೆ ಅಗತ್ಯ ಸೇವೆ ಒದಗಿಸಲು ಜಿಲ್ಲಾಡಳಿತ ಹಗಲಿರುಳು ಶ್ರಮಿಸುತ್ತಿದೆ. ಮಹಾನಗರ ಪಾಲಿಕೆಯಿಂದ ಕರೊನಾ ಕಂಟ್ರೋಲ್ ರೂಂ ಸ್ಥಾಪಿಸಿದ್ದು, ಸಂರ್ಪಸಲು ದೂರವಾಣಿ ಸಂಖ್ಯೆ ನೀಡಲಾಗಿದೆ. ಅಲ್ಲಿಗೆ ಕರೆ ಮಾಡುವ ಇಲ್ಲಿನ ಜನರು ಅಗತ್ಯ ಸೇವೆ ಕಲ್ಪಿಸುವಂತೆ ಕೋರುತ್ತಾರೆ. ಪಾಲಿಕೆ ಸಿಬ್ಬಂದಿ ವರ್ಗದವರೂ ಕೂಡಲೆ ತೆರಳಿ ಸೇವೆ ಒದಗಿಸುತ್ತಿದ್ದಾರೆ ಎನ್ನಲಾಗಿದೆ.

ಯಥಾಸ್ಥಿಯಲ್ಲಿ ಜನ ಸಂಚಾರ: ಲಾಕ್​ಡೌನ್ ಮುಂದುವರಿಕೆಯಾಗಿದ್ದರೂ ಧಾರವಾಡ, ಹುಬ್ಬಳ್ಳಿ ಅವಳಿ ನಗರದಲ್ಲಿ ಹಲವರು ತಮಗೆ ಸರ್ಕಾರದ ಯಾವ ಆದೇಶವೂ ಸಂಬಂಧ ಇಲ್ಲ ಎನ್ನುವಂತೆ ಎಂದಿನಂತೆ ಸಂಚಾರ ನಡೆಸಿದ್ದು ಬುಧವಾರವೂ ಕಂಡುಬಂತು. 2ನೇ ಅವಧಿಯ ಲಾಕ್​ಡೌನ್ ಪ್ರಾರಂಭವಾಗುತ್ತಿದ್ದಂತೆ ಪೊಲೀಸ್ ಇಲಾಖೆ ನಗರದಲ್ಲಿ ಕೆಲ ದಿನಗಳ ಕಾಲ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿತ್ತು. ಆದರೆ ಜನರು ಮಾತ್ರ ಅವರ ಮಾತುಗಳಿಗೆ ಕ್ಯಾರೆ ಎನ್ನದೆ ಅಗತ್ಯ ವಸ್ತುಗಳ ಹೆಸರಿನಲ್ಲೇ ನಗರ ಪ್ರದಕ್ಷಿಣೆ ಹಾಕುವ ಕೆಲಸ ಮುಂದುವರಿದಿದೆ. ಕರೊನಾ ತಡೆಗಟ್ಟುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜಿಲ್ಲೆಯನ್ನು ಹಾಟ್​ಸ್ಪಾಟ್ ಎಂದು ಘೊಷಣೆ ಮಾಡಿದ್ದರೂ ಅನೇಕರಲ್ಲಿ ಗಂಭೀರತೆ ಕಾಣುತ್ತಿಲ್ಲ. ಏನಾದರೂ ಮಾಡಿ ಜನ ಸಂಚಾರ ನಿಯಂತ್ರಣ ಮಾಡಬೇಕು ಎಂಬ ನಿಟ್ಟಿನಲ್ಲಿ ಪೊಲೀಸರು ಬೈಕ್ ಜಪ್ತಿ, ಬಸ್ಕಿ ಹೊಡೆಸುವುದು, ಕಸ ಗುಡಿಸುವುದು ಸೇರಿ ಬೇರೆ ಬೇರೆ ಉಪಕ್ರಮ ಕೈಗೊಂಡರೂ ಗಮನಾರ್ಹ ಪ್ರಯೋಜನ ಕಂಡುಬಂದಿಲ್ಲ.