ಗುತ್ತಲ: ಮಹಿಳೆಯೊಬ್ಬರಿಗೆ ಕರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಸೀಲ್ಡೌನ್ಗೆ ಒಳಗಾಗಿದ್ದ ಕಲಾಲ ಪ್ಲಾಟ್ ನಿವಾಸಿಗಳು ಆಹಾರ ಕಿಟ್, ತರಕಾರಿ, ಹಾಲು ಹಾಗೂ ಜಾನುವಾರುಗಳಿಗೆ ಮೇವು ವಿತರಣೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಗುರುವಾರ ಪ್ರತಿಭಟನೆ ನಡೆಸಿದರು.
ಸೀಲ್ ಡೌನ್ ಮಾಡಿ 6 ದಿನಗಳಾದರೂ ಯಾವುದೇ ಜನಪ್ರತಿನಿಧಿಗಳು ಇಲ್ಲಿಗೆ ಭೇಟಿ ನೀಡಿಲ್ಲ. ನಮ್ಮ ಕಷ್ಟವನ್ನು ಆಲಿಸಿಲ್ಲ. ನಿತ್ಯದ ಆಹಾರಕ್ಕೆ ಪರದಾಡುವಂತಾಗಿದೆ. ಕಳೆದ 2-3 ದಿನಗಳ ಹಿಂದೆ ನೀಡಿದ್ದ ಕಿಟ್ನಲ್ಲಿ ಸಮರ್ಪಕ ನಿತ್ಯದ ಆಹಾರ ಇಲ್ಲ. ಕೆಲವರಿಗೆ ಅಡುಗೆ ಎಣ್ಣೆ ನೀಡಿಲ್ಲ. ಜನರಲ್ ಕಿಟ್ನಲ್ಲಿ ಇರಬೇಕಾದ ವಸ್ತುಗಳೂ ಇಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕಲಾಲ ಪ್ಲಾಟ್ ನಿವಾಸಿ ಶೇಖಪ್ಪ ಕಾಯಕದ ಮಾತನಾಡಿ, ನಮ್ಮ ಜಾನುವಾರುಗಳಿಗೆ ಮೇವಿಲ್ಲ. ಅವುಗಳನ್ನು ಮೇಯಿಸಲು ಹೊರಗೆ ಕರೆದುಕೊಂಡು ತೆರಳಲು ಆಗುತ್ತಿಲ್ಲ. ಇಲ್ಲಿನ ಅನೇಕ ಮನೆಗಳಿಗೆೆ ಶೌಚಗೃಹಗಳಿಲ್ಲ. ಈ ಬಗ್ಗೆ ಅಧಿಕಾರಿಗಳು ಇಲ್ಲಿಗೆ ಆಗಮಿಸಿ ಸಮಸ್ಯೆಗೆ ಪರಿಹಾರ ಒದಗಿಸಬೇಕು. ಇಲ್ಲದಿದ್ದರೆ ಪಂಚಾಯಿತಿಗೆ ತೆರಳುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಆಗಮಿಸಿದ ಉಪತಹಸೀಲ್ದಾರ್ ಎಂ.ಡಿ. ಕಿಚಡೇರ ಪ್ರತಿಭಟನಾನಿರತರ ಸಮಸ್ಯೆ ಆಲಿಸಿ, ಪಡಿತರ ಆಹಾರವನ್ನು ಶುಕ್ರವಾರ ಇಲ್ಲಿಯೇ ವಿತರಿಸುವ ಭರವಸೆ ನೀಡಿದರು. ಇತರ ಬೇಡಿಕೆಗಳ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಹನುಮಂತಪ್ಪ ಬಾಣಿ, ವಿನೋದ ಗುತ್ತಲ, ಆರ್.ಟಿ. ಲಮಾಣಿ, ಹುಲ್ಲಪ್ಪ ರಿತ್ತಿ, ರಾಜಪ್ಪ ಕಾಯಕದ, ಮಲ್ಲನಗೌಡ ಪಾಟೀಲ, ಫಕೀರಪ್ಪ ಭಾಣಿ, ಚನ್ನಬಸವ ಚಂದಾಪುರ, ಹೊನ್ನಪ್ಪ ದಾವಣಗೇರಿ, ಚಿನ್ನಮ್ಮ ಕಾಯಕದ, ವಿದ್ಯಾ ಬೆನ್ನೂರ, ಅಕ್ಕಮ್ಮ ಗೊಲ್ಲರ, ಪ್ರೇಮಾ ಲಮಾಣಿ, ಪ್ರೇಮಾ ಗಣಾಚಾರಿ, ಲಕ್ಷ್ಮವ್ವ ಇಟಗಿ, ಕವಿತಾ ಬೆನ್ನೂರ ಇತರರಿದ್ದರು.
ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಯನ್ನು ಸೀಲ್ಡೌನ್ ಪ್ರದೇಶದಲ್ಲಿ ನಿಯೋಜಿಸಲಾಗಿತ್ತು. ಪಿಎಸ್ಐ ಎಂ.ಇ. ಮಣ್ಣಣ್ಣನವರ, ಡಿಆರ್ ಎಎಸ್ಐ ಸಿ.ಎಸ್. ಹೇಮಗಿರಿಮಠ, ಗ್ರಾಮಲೆಕ್ಕಿಗ ಫಕೀರೇಶ ರ್ಬಾ ಸ್ಥಳದಲ್ಲಿದ್ದರು.