ಜಿಲ್ಲೆ

ಸೀಲ್​ಡೌನ್ ಪ್ರದೇಶಕ್ಕೆ ಸಚಿವರ ಭೇಟಿ

ಶಿಗ್ಗಾಂವಿ: ಮುಂಬೈಗೆ ಹೋಗಿ ಬಂದ ಮಾವಿನ ಹಣ್ಣಿನ ವ್ಯಾಪಾರಿಗೆ ಕರೊನಾ ಸೋಂಕು ತಗುಲಿದ ಕಾರಣ ಸೀಲ್​ಡೌನ್ ಆಗಿರುವ ತಾಲೂಕಿನ ಅಂದಲಗಿ ಗ್ರಾಮಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಂಗಳವಾರ ಭೇಟಿ ನೀಡಿ ಸ್ಥಳೀಯ ಜನರಿಗೆ ಕಲ್ಪಿಸಿರುವ ಮೂಲ ಸೌಕರ್ಯಗಳ ವಿವರಣೆ ಪಡೆದರು.

ಜನರ ಸಮಸ್ಯೆಗಳನ್ನು ಆಲಿಸಿದ ಸಚಿವರು, ಕೋವಿಡ್ ಗಂಭೀರವಾಗಿದೆ. ಇದನ್ನು ನಿರ್ಲಕ್ಷ್ಯ ಮಾಡಬೇಡಿ. ಎಲ್ಲರೂ ಜಿಲ್ಲಾಡಳಿತದೊಂದಿಗೆ ಸಹಕರಿಸಿ. ಆಹಾರ ಕಿಟ್, ತರಕಾರಿ ಸೇರಿ ಎಲ್ಲ ವ್ಯವಸ್ಥೆಯನ್ನು ಮನೆ ಬಾಗಿಲಿಗೆ ತಲುಪುವಂತೆ ಅಧಿಕಾರಿಗಳು ಕ್ರಮವಹಿಸಿದ್ದಾರೆ. ಮನೆಮನೆಗೆ ವೈದ್ಯರು ಬಂದು ನಿಮ್ಮ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಎಲ್ಲರೂ ಸಹಕರಿಸಿ. ಶೀಘ್ರ ಲಾಕ್​ಡೌನ್ ಸಡಿಲಿಸಿ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು. ನಿಮ್ಮೆಲ್ಲರ ಸಹಕಾರದಿಂದ ಜಿಲ್ಲೆ ಮತ್ತೆ ಹಸಿರು ವಲಯವಾಗಿ ಪರಿವರ್ತನೆಗೊಳ್ಳಲಿದೆ ಎಂದು ಹೇಳಿದರು.

ನಿಮಗೆ ಯಾವುದೇ ಸಮಸ್ಯೆಗಳಿದ್ದಲ್ಲಿ ನನಗೆ ನೇರವಾಗಿ ತಿಳಿಸಿ. ಆತ್ಮವಿಶ್ವಾಸ ಕಳೆದುಕೊಳ್ಳದೆ ಧೈರ್ಯದಿಂದ ಪರಿಸ್ಥಿತಿ ಎದುರಿಸಿ ಎಂದರು.

ಜಿಲ್ಲಾಧಿಕಾರಿ ಕೃಷ್ಣ ಬಾಜಪೈ, ಎಸ್​ಪಿ ಕೆ.ಜಿ. ದೇವರಾಜ, ಜಿ.ಪಂ. ಸಿಇಒ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಎಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ, ಎಸಿ ಅನ್ನಪೂರ್ಣ ಮುದಕಮ್ಮನವರ, ತಹಸೀಲ್ದಾರ್ ಪ್ರಕಾಶ ಕುದರಿ, ಮಾಜಿ ಸಂಸದ ಮಂಜುನಾಥ ಕುನ್ನೂರ, ಗ್ರಾ.ಪಂ. ಸದಸ್ಯರಾದ ರಾಮು, ಸುಭಾಸ, ಶಂಭು ಮುರಗಣ್ಣನವರ ಇತರರಿದ್ದರು.