ಜಿಲ್ಲೆ

ಸೀಲ್​ಡೌನ್ ಪ್ರದೇಶ ನಿರ್ಬಂಧ ಬಿಗಿಗೊಳಿಸಿ

ಧಾರವಾಡ: ಕರೊನಾ ವೈರಾಣು ಹರಡದಂತೆ ಸೀಲ್​ಡೌನ್ ಮಾಡಿರುವ ಪ್ರದೇಶಗಳಿಂದ ಅನುಮತಿ ಪಡೆಯದೆ ಮತ್ತು ಅನಗತ್ಯವಾಗಿ ಹೊರ ಬರುವವರ ವಿರುದ್ಧ ಪ್ರಕರಣ ದಾಖಲಿಸಿ, ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಆರೋಗ್ಯ ಕಾರ್ಯಪಡೆ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಸೀಲ್​ಡೌನ್ ಪ್ರದೇಶಗಳಲ್ಲಿ ಕಟ್ಟುನಿಟ್ಟಾಗಿ ನಿಯಮಗಳ ಪಾಲನೆ ಆಗುತ್ತಿಲ್ಲ. ಅದರಲ್ಲೂ ವಿಶೇಷವಾಗಿ ಮೊರಬ ಗ್ರಾಮದಲ್ಲಿ ಸೀಲ್​ಡೌನ್ ನಿಯಮ ಬಿಗಿಗೊಳಿಸಿ, ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳನ್ನು ಸಂಪೂರ್ಣ ಬಂದ್ ಮಾಡಬೇಕು. ಪೊಲೀಸ್, ಆರೋಗ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು 24 ಗಂಟೆ ಸ್ಥಳದಲ್ಲಿದ್ದು, ಕಾವಲು ಕಾಯಬೇಕು. ಸೀಲ್​ಡೌನ್ ಪ್ರದೇಶದಲ್ಲಿ ಮನೆ ಮನೆಗೆ ಹೋಗಿ ಆರೋಗ್ಯ ಕಾರ್ಯಕರ್ತರು ಸಮೀಕ್ಷೆ ಮಾಡಿ ಮಾಹಿತಿ ಸಂಗ್ರಹಿಸಬೇಕು. ಮಾಹಿತಿ ನೀಡದ, ದುರ್ವರ್ತನೆ ತೋರುವವರ ವಿರುದ್ಧ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಬೇಕು ಎಂದರು.

ಕಂಟೇನ್ಮೆಂಟ್ ಪ್ರದೇಶದ ಜನರ ಮನೆ ಬಾಗಿಲಿಗೆ ತರಕಾರಿ, ಪಡಿತರ, ಆರೋಗ್ಯ ಸೇವೆಗಳನ್ನು ತಲುಪಿಸಲು ವ್ಯವಸ್ಥೆ ಮಾಡಲಾಗಿದೆ. ಆದಾಗ್ಯೂ ಕೆಲವರು ಅನಗತ್ಯವಾಗಿ ಹೊರಗೆ ಸಂಚರಿಸುತ್ತಿದ್ದಾರೆ. ಮಾಸ್ಕ್ ಧರಿಸಲು ಹಾಗೂ ಪರಸ್ಪರ ಅಂತರ ಪಾಲನೆ ಮಾಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಹೀಗಾಗಿ ಸೀಲ್​ಡೌನ್, ಕಂಟೇನ್ಮೆಂಟ್ ಪ್ರದೇಶಗಳಲ್ಲಿ ವಿಶೇಷ ಕಾರ್ಯಚರಣೆ ಮಾಡಿ, ನಿಯಮ ಪಾಲಿಸದವರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಸೂಲು ಮಾಡಬೇಕು. ಪುನಃ ಪುನಃ ಮಾಡುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಸೂಚಿಸಿದರು.

ಎಪಿಎಂಸಿ, ಬಸ್​ನಿಲ್ದಾಣ ಸೇರಿ ಸಾರ್ವಜನಿಕರು ಹೆಚ್ಚು ಸೇರುವ ಸ್ಥಳಗಳಲ್ಲಿ ಮತ್ತು ಮಾಸ್ಕ್ ಧರಿಸದೆ ಸಂಚರಿಸುವವರ ವಿರುದ್ಧ ಕಾರ್ಯಾಚರಣೆ ಮಾಡಿ ದಂಡ ವಿಧಿಸಿ ಎಚ್ಚರಿಕೆ ನೀಡಬೇಕು. ಸೀಲ್​ಡೌನ್ ಪ್ರದೇಶದಲ್ಲಿ ಸಂಪೂರ್ಣ ನಿಯಮ ಪಾಲನೆ ಆಗದಿದ್ದರೆ ಸಂಬಂಧಿಸಿದ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡಿ ಕ್ರಮ ಜರುಗಿಸುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಡಿವೈಎಸ್​ಪಿ ರಾಮನಗೌಡ ಹಟ್ಟಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಿವಕುಮಾರ ಮಾನಕರ, ಪಾಲಿಕೆ ಜಂಟಿ ಆಯುಕ್ತ ಅಜೀಜ್ ದೇಸಾಯಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯಶವಂತ ಮದೀನಕರ, ನವಲಗುಂದ ತಹಸೀಲ್ದಾರ್ ನವೀನ ಹುಲ್ಲೂರ, ಆರ್​ಸಿಎಚ್​ಒ ಡಾ. ಎಸ್.ಎಂ. ಹೊನಕೇರಿ, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ಸುಜಾತಾ ಹಸವಿಮಠ, ಆರೋಗ್ಯ ಇಲಾಖೆ ಅಧಿಕಾರಿಗಳಾದ ಡಾ. ಶಶಿ ಪಾಟೀಲ, ಡಾ.ಕೆ.ಎನ್. ತನುಜಾ, ಡಾ. ಎಸ್.ಬಿ. ನಿಂಬಣ್ಣವರ, ಇತರರು ಇದ್ದರು.

13 ಜನ ಚೇತರಿಕೆ, ಬಿಡುಗಡೆ

ಕೋವಿಡ್​ನಿಂದ ಚೇತರಿಸಿಕೊಂಡ 13 ಜನರನ್ನು ಹುಬ್ಬಳ್ಳಿಯ ಕಿಮ್ಸ್​ನಿಂದ ಬಿಡುಗಡೆ ಮಾಡಲಾಗಿದೆ. 27, 28, 75 ವರ್ಷದ ಮಹಿಳೆಯರು, 59, 83, 57, 49, 55, 34, 33 ವರ್ಷದ ಪುರುಷರು, 12 ವರ್ಷದ ಇಬ್ಬರು ಬಾಲಕರು ಹಾಗೂ 10 ವರ್ಷದ ಬಾಲಕಿಗೆ ಗುಣವಾಗಿದ್ದು, ಮನೆಗೆ ಕಳುಹಿಸಿಕೊಡಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 155 ಜನರು ಕರೊನಾದಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

723 ಶಂಕಿತರು ಪತ್ತೆ

ಧಾರವಾಡ: ಜಿಲ್ಲೆಯಲ್ಲಿ ಶುಕ್ರವಾರ ಸಂಜೆಯಿಂದ 24 ಗಂಟೆ ಅವಧಿಯಲ್ಲಿ 723 ಶಂಕಿತರು ಪತ್ತೆಯಾಗಿದ್ದು, ಅವರ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಶಂಕಿತರ ಜತೆಗೆ ನಿಗಾವಹಿಸಿದವರ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಗುರುವಾರ ಇದ್ದ 24,266 ನಿಗಾವಹಿಸಿದವರ ಸಂಖ್ಯೆ ಶುಕ್ರವಾರ 24,998ಕ್ಕೆ ಏರಿಕೆಯಾಗಿದೆ.

ಈವರೆಗೆ ಜಿಲ್ಲೆಯಲ್ಲಿ 23,797 ಶಂಕಿತ ವ್ಯಕ್ತಿಗಳ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, 22,863 ಜನರ ವರದಿ ನೆಗೆಟಿವ್ ಬಂದಿವೆ. 274 ಪ್ರಕರಣಗಳು ಪಾಸಿಟಿವ್ ಬಂದಿದ್ದು, 115 ಜನರಿಗೆ ಕಿಮ್್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 155 ಜನರು ಚೇತರಿಕೆಯಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಇನ್ನೂ 815 ವರದಿಗಳು ಬರಬೇಕಿದೆ.

ಹೊರ ಆವರಣದಲ್ಲೇ ಬೆಂಡಿಗೇರಿ ಠಾಣೆ

ಹುಬ್ಬಳ್ಳಿ: ಇಬ್ಬರು ಹೋಂ ಗಾರ್ಡ್​ಗಳಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಇಲ್ಲಿನ ಬೆಂಡಿಗೇರಿ ಪೊಲೀಸ್ ಠಾಣೆ ಒಳಗೆ ಪ್ರವೇಶ ನಿಷೇಧಿಸಿದ್ದು, ಶುಕ್ರವಾರ ಠಾಣೆಯನ್ನು ಹೊರ ಠಾಣೆಯನ್ನಾಗಿ ಮಾರ್ಪಡಿಸಲಾಗಿದೆ.

ಠಾಣೆ ಕಟ್ಟಡವನ್ನು ಎರಡು ಬಾರಿ ಸ್ಯಾನಿಟೈಸೇಷನ್ ಮಾಡಲಾಗಿದ್ದು, ಠಾಣೆ ಒಳಗೆ ಯಾರೂ ಹೋಗುವಂತಿಲ್ಲ. ಅಧಿಕಾರಿಗಳು ಮತ್ತು ಸಿಬ್ಬಂದಿ ಠಾಣೆ ಹೊರ ಆವರಣದಲ್ಲಿ ಟೇಬಲ್, ಕುರ್ಚಿ ಹಾಕಿಕೊಂಡು ಅಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದ 7 ಸಿಬ್ಬಂದಿಯನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪೊಲೀಸ್ ಕ್ವಾರ್ಟ್​ಸ್ನಲ್ಲಿ ಆತಂಕ

ಧಾರವಾಡ: ಪೊಲೀಸ್ ಕ್ವಾರ್ಟ್​ಸ್ನ ಬಾಲಕನಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪೊಲೀಸರಲ್ಲಿ ಆತಂಕ ಮನೆ ಮಾಡಿದೆ.

ಇಲ್ಲಿನ ಶಹರ ಪೊಲೀಸ್ ಠಾಣೆ ಬಳಿಯ ಪೊಲೀಸ್ ವಸತಿಗೃಹ ಸಂಕೀರ್ಣದಲ್ಲಿ ಕೆಮ್ಮು, ನೆಗಡಿ ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದ 9 ವರ್ಷದ ಬಾಲಕನಿಗೆ ಸೋಂಕು ದೃಢಪಟ್ಟಿದೆ. ಈ ಬಾಲಕ ಪೊಲೀಸ್ ಸಿಬ್ಬಂದಿಯೊಬ್ಬರ ಸಮೀಪದ ಸಂಬಂಧಿಯ ಮಗ ಎಂದು ಹೇಳಲಾಗುತ್ತಿದೆ. ಈ ಪ್ರಕರಣದಿಂದ ಬಾಲಕನ ಕುಟುಂಬ ಅಲ್ಲದೆ, ಇಡೀ ಪೊಲೀಸ್ ಸಿಬ್ಬಂದಿಯಲ್ಲಿ ಆತಂಕ ಹೆಚ್ಚಿಸಿದೆ. ಈಗಾಗಲೇ ಕ್ವಾರ್ಟ್​ಸ್ಅನ್ನು ಭಾಗಶಃ ಸೀಲ್​ಡೌನ್ ಮಾಡಲಾಗಿದೆ.