ಜಿಲ್ಲೆ

ಸೀತಾರಾಘವ ಬ್ಯಾಂಕ್‌ಗೆ 1.28 ಕೋಟಿ ರೂ. ಲಾಭ

ಹೊಸದುರ್ಗ: ಸೀತಾರಾಘವ ಬ್ಯಾಂಕ್ 2022-23ನೇ ಆರ್ಥಿಕ ವರ್ಷದಲ್ಲಿ 1.28 ಕೋಟಿ ರೂ. ಲಾಭಗಳಿಸಿ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಹಂಜಿ ಶಿವಸ್ವಾಮಿ ತಿಳಿಸಿದರು.
ಪಟ್ಟಣದ ಗಣೇಶ ಸದನದಲ್ಲಿ ಗುರುವಾರ ಆಯೋಜಿಸಿದ್ದ ಸೀತಾರಾಘವ ಸೌಹಾರ್ದ ಸಹಕಾರ ಬ್ಯಾಂಕಿನ 25ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳೆದ ವರ್ಷ ಕೋವಿಡ್‌ನಿಂದ ಸಹಕಾರಿ ಕ್ಷೇತ್ರದ ಬ್ಯಾಂಕ್‌ಗಳ ಆರ್ಥಿಕ ಚೇತರಿಕೆಗೆ ಹಿನ್ನಡೆಯಾಗಿತ್ತು. ಪ್ರಸಕ್ತ ಸಾಲಿನಲ್ಲಿ ಆರ್ಥಿಕ ಪುನಶ್ಚೇತನ ಮಂದಗತಿಯಲ್ಲಿ ಆರಂಭ ವಾಗಿದೆ ಎಂದರು.
ಇಂತಹ ಸಂಕಷ್ಟದ ನಡುವೆಯೂ ಬ್ಯಾಂಕ್ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ಪರಿಶ್ರಮದಿಂದ 2.86 ಕೋಟಿ ರೂ. ಲಾಭ ಗಳಿಸಿದೆ. ಆದಾಯ ತೆರಿಗೆ ಸೇರಿ ಮತ್ತಿತರ ತೆರಿಗೆ ಪಾವತಿಸಿದ ನಂತರ 1.28 ಕೋಟಿ ರೂ. ನಿವ್ವಳ ಲಾಭ ಆಗಲಿದೆ ಎಂದು ಮಾಹಿತಿ ನೀಡಿದರು.
63 ಸಾವಿರ ರೂ. ಮೂಲ ಬಂಡವಾಳದಿಂದ ಆರಂಭವಾದ ಬ್ಯಾಂಕ್ ಇದೀಗ 175.49 ಕೋಟಿ ದುಡಿಯುವ ಬಂಡಾವಳ ಹೊಂದಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ.11.31ರಷ್ಟು ಬಂಡವಾಳ ಹೆಚ್ಚಾಗಿದೆ. 111.61 ಕೋಟಿ ರೂ. ಸಾಲ ನೀಡಿದೆ. ಸಾಲ ಮರುಪಾವತಿಯಲ್ಲೂ ಮುಂದಿದೆ ಎಂದರು.
ಹೊಸದುರ್ಗ, ಬೆಂಗಳೂರು, ಕಡೂರು, ಭದ್ರಾವತಿಯಲ್ಲಿ ಸುಸಜ್ಜಿತ, ಗ್ರಾಹಕ ಸ್ನೇಹಿ ಯಾದ ಸ್ವಂತ ಕಟ್ಟಡಗಳನ್ನು ಹೊಂದಲಾಗಿದೆ. ದಿನನಿತ್ಯದ ವ್ಯವಹಾರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಜತೆಗೆ ಆರ್‌ಟಿಜಿಎಸ್,ಎನ್‌ಇಎಫ್‌ಟಿ ಸೌಲಭ್ಯದ ಜತೆಗೆ ತನ್ನದೆ ಎಟಿಎಂ ವ್ಯವಸ್ಥೆ ಹೊಂದಿದೆ ಎಂದು ಹೇಳಿದರು.
ಉಪಾಧ್ಯಕ್ಷ ಡಿ.ಅದಿರಾಜಯ್ಯ ಮಾತನಾಡಿ, ಹಂಜಿ ಶಿವಸ್ವಾಮಿ ಅವರ ನಾಯಕತ್ವದ ಲ್ಲಿ ಬ್ಯಾಂಕ್ ರಾಷ್ಟ್ರೀಯ ಬ್ಯಾಂಕ್‌ಗಳಿಗೆ ಸಮನಾಗಿ ಬೆಳೆದಿದೆ. ಈ ಬೆಳವಣಿಗೆಯಲ್ಲಿ ಅವರ ಶ್ರಮ, ಬದ್ಧತೆ, ವ್ಯವಹಾರ ಚತುರತೆ ಇದೆ. ಮುಂದೆ ಇನ್ನಷ್ಟು ಜನರಿಗೆ ಆರ್ಥಿಕ ಚೈತನ್ಯ ನೀಡಲಿದೆ ಎಂದರು.
ಪ್ರಧಾನ ವ್ಯವಸ್ಥಾಪಕ ಎನ್.ಮಂಜನಾಥ್ ಮಾತನಾಡಿ,ಆಡಳಿತ ಮಂಡಳಿ, ಗ್ರಾಹಕರು,ಸಿಬ್ಬಂದಿ ಸಹಕಾರದಿಂದ ಮಧ್ಯ ಕರ್ನಾಟಕದ ಅಗ್ರಗಣ್ಯ ಬ್ಯಾಂಕ್ ಆಗಿ ಹೊರಹೊಮ್ಮಿದೆ.2023-24ನೇ ಆರ್ಥಿಕ ವರ್ಷದಲ್ಲಿ ಉತ್ತಮ ಸಾಧನೆಯ ವಿಶ್ವಾಸವಿದೆ ಎಂದು ಹೇಳಿದರು.
ನಿರ್ದೇಶಕರಾದ ಗಂಗಾಧರ ಗುಪ್ತಾ , ಟಿ.ಎನ್.ಗುರುಮೂರ್ತಿ, ಬಿ.ವಿ.ಕುಶ ಕುಮಾರ್, ಒ.ನಾಗೇಂದ್ರಯ್ಯ, ಒಬಯ್ಯ, ಬಾಹುಬಲಿ, ವೀಣಾ ಎಸ್.ರಾವ್, ಪಾರ್ವತಮ್ಮ, ಲಲಿತಾಂಬಾ, ನಾಗಲಾಂಬಿಕಾ ಕಲ್ಮಠ್, ಶ್ರೀನಿವಾಸಯ್ಯ ಇತರರಿದ್ದರು.

25ನೇ ವರ್ಷದ ಸರ್ವ ಸದಸ್ಯರ ಸಭೆ ಸಂದರ್ಭದಲ್ಲಿ ಗ್ರಾಹಕರಿಗೆ ಮೊಬೈಲ್ ಬ್ಯಾಂಕಿಗ್ ಸೇವೆಯನ್ನು ಪರಿಚಯಿಸಿದೆ. ಯಾವುದೇ ಬ್ಯಾಂಕಿನೊಂದಿಗೆ ಕ್ಷಣಾರ್ಧದಲ್ಲಿ ವಹಿವಾಟು ನಡೆಸಬಹುದಾಗಿದೆ. ಐಎಂಪಿಎಸ್, ಎನ್‌ಇಎಫ್‌ಟಿ, ಆರ್‌ಟಿಜಿಎಸ್ ಮೂಲಕ ಹಣ ಪಾವತಿಸಬಹುದಾಗಿದೆ.
ಹಂಜಿ ಶಿವಸ್ವಾಮಿ ಅಧ್ಯಕ್ಷ, ಸೀತಾರಾಘವ ಬ್ಯಾಂಕ್