ಬಾಗಲಕೋಟೆ: ಪುರಾಣದ ಐತಿಹ್ಯವುಳ್ಳ ತಾಲೂಕಿನ ಸೀತಿಮನಿಯ ಸೀತಾಚಲವಾಸ ವೆಂಕಟೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವಕ್ಕೆ ಚಾಲನೆ ದೊರೆತಿದ್ದು, ನಿತ್ಯವು ವಿಶೇಷ ಪೂಜೆ, ಅಲಂಕಾರ ನಡೆಯುತ್ತಿದೆ.
ದೇವಸ್ಥಾನವು ವಿದ್ಯುತ್ ದೀಪಾಲಾಂಕರದಿಂದ ಕಂಗಗೊಳಿಸುತ್ತಿದೆ. ಪ್ರತಿ ದಿನ ವೆಂಕಟೇಶ್ವರನಿಗೆ ಸುಪ್ರಭಾತ, ಕಕ್ಕಡಾರತಿ, ಪಂಚಾಮೃತ ಅಭಿಷೇಕ, ಪುಷ್ಪಾರ್ಚನೆ ಜರುಗುತ್ತಿದೆ. ರಾಯಚೂರಿನ ಸರ್ವೋತ್ತಮ ಆಚಾರ್ಯ ಜೋಶಿ ಅವರ ಶ್ರೀ ವೆಂಕಟೇಶ ಮಹಾತ್ಮ ಪುರಾಣಕ್ಕೆ ಭಕ್ತ ಸಾಗರ ಹರಿದು ಬರುತ್ತಿದೆ. ನಿತ್ಯ ಮಾಧ್ಯಹ್ನಾ ನೈವೇದ್ಯ, ಅನ್ನ ಪ್ರಸಾದ ವಿತರಣೆಯಲ್ಲಿ ನೂರಾರು ಜನ ಭಾಗವಹಿಸಿ ಸ್ವೀಕರಿಸುತ್ತಿದ್ದಾರೆ.
ಭಾನುವಾರ ಶ್ಯಾಮ ಆಲೂರ ಅವರಿಂದ ಗಾಯನ, ಸೋಮವಾರ ಸಂಜೆ ರಘೋತ್ತಮಾಚಾರ್ಯ ನಾಗಸಂಪಗಿ ಅವರಿಂದ ಪ್ರವಚನ, ಜಯತೀರ್ಥ ತಾಸಗಾಂವ ಅವರಿಂದ ಗಾಯನ ನಡೆಯಿತು. ದೇವಸ್ಥಾನ ಸೇವಾ ಸಮಿತಿಯ ಕಾರ್ಯದರ್ಶಿ ನರಸಿಂಹ ಆಲೂರ, ಗೋಪಾಲ ಆಲೂರ ನೇತೃತ್ವದಲ್ಲಿ ಧಾರ್ಮಿಕ, ಪೂಜಾ ಕೈಂಕರ್ಯಗಳು ಜರುಗುತ್ತಿವೆ.