ಜಿಲ್ಲೆ

ಸಿಸಿ ಹೆದ್ದಾರಿಯಲ್ಲಿ ಸರಣಿ ಬಿರುಕು!

ಸ.ದಾ. ಜೋಶಿ ಬೀದರ್

ನಗರದ ಹೊರವಲಯದ ನೌಬಾದ್ ನಿಂದ ಕಮಲನಗರ ಸಮೀಪದ ಮಹಾರಾಷ್ಟ್ರ ಗಡಿವರೆಗೆ ನಿರ್ಮಾಣವಾಗುತ್ತಿರುವ ಜಿಲ್ಲೆಯ ಮೊದಲ ಸಿಮೆಂಟ್-ಕಾಂಕ್ರೀಟ್ (ಸಿಸಿ)ದ್ವಿಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಬಿರುಕುಗಳು ಕಾಣಿಸಿವೆ. ಹೀಗಾಗಿ ಒಂದೆಡೆ ಹೆದ್ದಾರಿ ಕೆಲಸ ಪ್ರಗತಿಯಲ್ಲಿದ್ದರೆ ಇನ್ನೊಂದು ಕಡೆ ಹಾಳಾದ ಸ್ಥಳಗಳಲ್ಲೆಲ್ಲ ದುರಸ್ತಿ ಕಾರ್ಯ ಕೈಗೆತ್ತಿಕೊಂಡಿದ್ದು, ಕಾಮಗಾರಿ ಗುಣಮಟ್ಟದ ಮೇಲೆ ಪ್ರಶ್ನೆ ಮೂಡಿದೆ.

54.37 ಕಿಲೋಮೀಟರ್ ಉದ್ದದ ಈ ಹೆದ್ದಾರಿಗೆ ಸುಮಾರು 396 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಇದರಲ್ಲಿ ಭಾಲ್ಕಿ ತಾಲೂಕಿನ ಅಂಬೇಸಾಂಗ್ವಿ ಕ್ರಾಸ್, ಹುಣಜಿ ಹತ್ತಿರ ಮೇಲ್ಸೇತುವೆ, ಭೂಸ್ವಾಧೀನ ಪರಿಹಾರ, ಹಲಬರ್ಗಾ, ಖಾನಾಪುರ ಸೇರಿ ಕೆಲ ಗ್ರಾಮಗಳಲ್ಲಿ ಚತುಷ್ಪಥ ಕೆಲಸ ಸಹ ಸೇರಿದೆ. ಗುಜರಾತ್ ಮೂಲದ ಕಂಪನಿ ಗುತ್ತಿಗೆ ವಹಿಸಿಕೊಂಡಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಉಸ್ತುವಾರಿ ನೋಡಿಕೊಳ್ಳುತ್ತಿದೆ. ಮೂಲಗಳ ಪ್ರಕಾರ 1 ಕಿಮೀ ಉದ್ದದ ಕಾಮಗಾರಿಗೆ ಸುಮಾರು 5 ಕೋಟಿ ರೂ. ವ್ಯಯಿಸಲಾಗುತ್ತಿದೆ. ಇಷ್ಟಾದರೂ ಉದ್ಘಾಟನೆ ಮುನ್ನವೇ ಅಲ್ಲಲ್ಲಿ ಹೆದ್ದಾರಿ ಹಾಳಾಗಿ ರಿಪೇರಿ ಮಾಡುವ ಹಂತಕ್ಕೆ ಬಂದಿರುವುದು ಸಹಜವೇ ಅಕ್ರಮದ ವಾಸನೆ ಬರಲಾರಂಭಿಸಿದ್ದು, ಹಲವು ಸಂಶಯಗಳಿಗೆ ಎಡೆಮಾಡಿದೆ.

ನೌಬಾದ್-ಕಮಲನಗರ ಮಾರ್ಗದ ಕಾಮಗಾರಿಗೆ 2018ರ ಫೆಬ್ರುವರಿ 20ರಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಚಾಲನೆ ನೀಡಿದ್ದರು. ಆಗ ಮಾಡಿದ ಘೋಷಣೆಯ ಪ್ರಕಾರ 18 ತಿಂಗಳೊಳಗೆ ಕೆಲಸ ಮುಗಿಯಬೇಕಾಗಿತ್ತು. ಆದರೆ 30 ತಿಂಗಳಾದರೂ ಇನ್ನೂ ಶೇ. 25ರಷ್ಟು ಕೆಲಸ ಬಾಕಿ ಉಳಿದಿದೆ. ಈಗಷ್ಟೇ ಮಾಡಿದ ಹೆದ್ದಾರಿಯ ಅಲ್ಲಲ್ಲಿ ಸಾಕಷ್ಟು ದೊಡ್ಡ ಹಾಗೂ ಉದ್ದವಾದ ಬಿರುಕುಗಳು ಕಾಣಿಸಿಕೊಂಡಿವೆ. ಕೆಲವೆಡೆ ರಸ್ತೆ ಮೇಲ್ಪದರ ಕಿತ್ತುತ್ತಿದ್ದರೆ, ಮತ್ತೆ ಕೆಲವು ಕಡೆ ರಸ್ತೆ ಕೆಳಗಿಳಿದು ಸಮತಟ್ಟು ಇಲ್ಲದಾಗಿದೆ. ನೂರಾರು ಕೋಟಿ ರೂ. ಖರ್ಚು ಮಾಡಿದ ಹೆದ್ದಾರಿ ಈ ತರಹ ಏಕಾಗಿದೆ ಎಂದು ಇಲ್ಲಿ ಸಂಚರಿಸುವ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಅತಿವಾಳ ಕ್ರಾಸ್ ಹತ್ತಿರ ನಡೆಯುತ್ತಿದ್ದ ರಿಪೇರಿ ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರಿಗೆ ಸಂಪರ್ಕಿಸಿದಾಗ, `ರೋಡ್ ಖರಾಬ್ ಹೋಗಯಾ ಹೈ, ಮಷಿನ್ಸೆ ನೀಚೇಸೆ ಕಾಟ್ ಕರ್ ರಿಪೇರ್ ಕರ್ ರಹೇ ಹೈ. ಜಗಾ ಜಗಾ ಐಸಾ ಪ್ರಾಬ್ಲಮ್ ಹುವಾ ಹೈ' (ರಸ್ತೆ ಹಾಳಾಗಿದ್ದು, ಕೆಳಗಿನಿಂದ ಯಂತ್ರದ ಮೂಲಕ ಕಟ್ ಮಾಡಿ ದುರಸ್ತಿ ಮಾಡುತ್ತಿದ್ದೇವೆ. ಅಲ್ಲಲ್ಲಿ ಈ ತರಹ ಸಮಸ್ಯೆ ಆಗಿದೆ)ಎಂದು ಉತ್ತರಿಸಿದರು. ಹಿಂದೆ ಇದ್ದ ರಸ್ತೆ ಅಗೆದು ಹೆದ್ದಾರಿ ನಿರ್ಮಿಸಲಾಗುತ್ತಿದೆ. ಹೀಗಾಗಿ ಕೆಳಗಿನ ಭಾಗ ಸಾಕಷ್ಟು ಗಟ್ಟಿಯಾಗಿಯೇ ಇದೆ. ಇಂಥ ಸ್ಥಳದಲ್ಲಿನ ರಸ್ತೆ ಮೇಲೆ ಬಿರುಕು ಬಿಡುವುದಾದರೆ, ಸಮತಟ್ಟು ಇಲ್ಲದಾಗಿದ್ದರೆ ಕಾಮಗಾರಿ ಸಮರ್ಪಕ ನಡೆದಿಲ್ಲ ಹಾಗೂ ನಿಗದಿತ ಪ್ರಮಾಣದಲ್ಲಿ ಸಿಮೆಂಟ್, ಕಾಂಕ್ರೀಟ್, ಉಸುಕು ಬೆರೆಸಿಲ್ಲ ಎಂಬುದು ತೋರಿಸಿಕೊಡುತ್ತದೆ ಎಂದು ಪರಿಣತ ಸಿವಿಲ್ ಇಂಜಿನಿಯರ್ ಹೇಳುತ್ತಾರೆ.

ಕಾಮಗಾರಿ ಸರಿಯಾಗಿ ಆಗುತ್ತಿಲ್ಲ ಎಂಬ ದೂರುಗಳ ನಡುವೆಯೇ ಹೆದ್ದಾರಿ ಗುಣಮಟ್ಟ ನಿಯಂತ್ರಕರು (ಕ್ವಾಲಿಟಿ ಕಂಟ್ರೋಲರ್) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಲ್ಲಲ್ಲಿ ಹಾಳಾಗಿರುವುದು ಕಂಡು ಅತೃಪ್ತಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಅವರ ನಿರ್ದೇಶನದಂತೆ ಹಾಳಾದ ಸ್ಥಳಗಳಲ್ಲಿ ರಸ್ತೆ ಕಟಿಂಗ್ ಮಾಡಿ, ಆ ಭಾಗವನ್ನು ಹೊಸದಾಗಿ ನಿರ್ಮಿಸಲಾಗುತ್ತಿದೆ. ಅನೇಕ ಕಡೆಗಳಲ್ಲಿ ಹೆದ್ದಾರಿ ಮೇಲೆ ಬಿಟ್ಟ ಬಿರುಕುಗಳಲ್ಲಿ ಸಿಮೆಂಟ್ ರಾಡಿ ಸುರಿದು ಮುಚ್ಚುವ (ತೇಪೆ ಹಚ್ಚುವ) ಕೆಲಸವೂ ನಡೆದಿದೆ. ಆದರೆ ಸಿಮೆಂಟ್ ಸುರಿದ ಸ್ಥಳದಲ್ಲಿ ಮತ್ತೆ ಬಿರುಕು ಮೂಡುತ್ತಿವೆ. ಇದೆಲ್ಲ ಗಮನಿಸಿದರೆ ಅಲ್ಲಲ್ಲಿ ಕಾಮಗಾರಿ ಕಳಪೆ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತಿದ್ದರೂ, ಸದಾ ಪಾರದರ್ಶಕತೆ ಮಂತ್ರ ಪಠಿಸುವ ಜನಪ್ರತಿನಿಧಿಗಳು ಮಾತ್ರ ಏನೂ ಆಗಿಲ್ಲ ಎಂಬಂತೆ ತೆಪ್ಪಗೆ ಕುಳಿತಿರುವುದು ವಿಚಿತ್ರವೆನಿಸಿದೆ.

200 ವರ್ಷ ಬಾಳಿಕೆ
ಎಂದಿದ್ದರು ಗಡ್ಕರಿ !
2018ರ ಫೆಬ್ರುವರಿ 20ರಂದು ಭಾಲ್ಕಿ ಪಟ್ಟಣದ ಚನ್ನಬಸವಾಶ್ರಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು 3000 ಕೋಟಿ ರೂ.ವೆಚ್ಚದ ವಿವಿಧ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ್ದರು. ಇದರಲ್ಲಿ ನೌಬಾದ್-ಕಮಲನಗರ ಸಿಸಿ ಹೈವೇ ಚಾಲನೆಯೂ ಸೇರಿತ್ತು. ಆಗ ಮಾತನಾಡಿದ ಗಡ್ಕರಿ ಅವರು, ನಮ್ಮ ಸರ್ಕಾರ ಗುಣಮಟ್ಟದ ಕೆಲಸ ಹಾಗೂ ಪಾರದರ್ಶಕತೆಗೆ ಆದ್ಯತೆ ನೀಡಿದೆ. ಹತ್ತಿಪ್ಪತ್ತಲ್ಲ ಸುಮಾರು 200 ವರ್ಷ ಬಾಳಿಕೆ ಬರುವಷ್ಟು ಉತ್ಕ್ರಷ್ಟ ಗುಣಮಟ್ಟದ ಹೆದ್ದಾರಿ ನಿರ್ಮಿಸಲಾಗುತ್ತಿದೆ ಎಂದಿದ್ದರು. ವಿಚತ್ರವೆಂದರೆ ಅವರು ಅಡಿಗಲ್ಲು ನೆರವೇರಿಸಿದ ವ್ಯಾಪ್ತಿಯಲ್ಲಿನ ಈ ಹೆದ್ದಾರಿ ಕೇವಲ ಎರಡು ವರ್ಷದೊಳಗಾಗಿ ಅಲ್ಲಲ್ಲಿ ಹಾಳಾಗುತ್ತಿದೆ. ಉದ್ಘಾಟನೆ ಮುನ್ನ ದುರಸ್ತಿ ಆರಂಭಿಸಲಾಗಿದೆ. ಹೀಗಾಗಿ ಸ್ಥಳೀಯರು ಗಡ್ಕರಿ ಅವರ ಅಂದಿನ ಭಾಷಣ ನೆನಪಿಸಿ, ನೋಡ ಬನ್ನಿ ಈ ಹೆದ್ದಾರಿ ಎಂದು ಚಚ್ಚುತ್ತಿದ್ದಾರೆ. ದೀರ್ಘಕಾಲ ಬಾಳಿಕೆ ಬರಬೇಕು, ಅತಿವೃಷ್ಟಿಯಾದರೂ ಹಾಳಾಗಬಾರದು ಹಾಗೂ ಮೇಲಿಂದ ಮೇಲೆ ನಿರ್ವಹಣೆ ಮಾಡುವುದು ತಪ್ಪಬೇಕೆಂಬ ಧ್ಯೇಯದಿಂದಲೇ ಕೇಂದ್ರ ಸರ್ಕಾರ ಜಾಸ್ತಿ ಖರ್ಚಿದ್ದರೂ ಸಿಸಿ ಹೆದ್ದಾರಿ ಯೋಜನೆ ರೂಪಿಸಿದೆ. ಆದರೆ ಅದು ಸಮರ್ಪಕ ಕಾರ್ಯರೂಪಕ್ಕೆ ಬರಬೇಕಾದರೆ ಸ್ಥಳೀಯ ಅಧಿಕಾರಿ-ಜನಪ್ರತಿನಿಧಿಗಳ ಮೇಲೆ ದೊಡ್ಡ ಹೊಣೆ ಇರುತ್ತದೆ.

ಬಾರ್ಡರ್ ಟು ಹುಮನಾಬಾದ್
ಸಿಸಿ ಹೆದ್ದಾರಿಯು ಮಹಾರಾಷ್ಟ್ರದ ಗಡಿಯಿಂದ ಶುರುವಾಗಿ ಕಮಲನಗರ, ಡಿಗ್ಗಿ, ಹೊಳಸಮುದ್ರ, ಸಾವಳಿ, ಸಂಗಮ್, ಎಂಜಿಎಸ್ಎಸ್ಕೆ, ಅಂಬೇಸಾಂಗವಿ ಕ್ರಾಸ್, ಹುಪಳಾ, ಅಹ್ಮದಾಬಾದ್, ತೇಗಂಪೂರ, ಹಲಬರ್ಗಾ, ಧನ್ನೂರ ತಾಂಡಾ, ಖಾನಾಪುರ (ಮೈಲಾರ) ಮೂಲಕ ನೌಬಾದ್ ಗೆ ಸಂಪರ್ಕಿಸಲಿದೆ. ಈ ಹೆದ್ದಾರಿ ಜತೆಗೆ ನೌಬಾದ್ ನಿಂದ ಹುಮನಾಬಾದ್ ನಡುವಿನ 47 ಕಿಲೋಮೀಟರ್ ಉದ್ದದ ರಾಷ್ಟ್ರೀಯ ಹೆದ್ದಾರಿ ಕೆಲಸ ಸಹ ನಡೆಯಬೇಕಿತ್ತು. ಆದರೆ ಗುತ್ತಿಗೆ ಕಂಪನಿಯೇ ಬಂದ್ ಆಗಿದ್ದರಿಂದ ಕೆಲಸ ನನೆಗುದಿಗೆ ಬಿದ್ದಿದೆ. ಸುಮಾರು 350 ಕೋಟಿ ರೂ. ವೆಚ್ಚದ ಈ ಕಾಮಗಾರಿ ಇದೀಗ ಟೆಂಡರ್ ಪ್ರಕ್ರಿಯೆ ಹಂತದಲ್ಲಿದ್ದು, ಬೇಗ ಶುರುವಾಗಲಿದೆ. ಈ ಹೆದ್ದಾರಿಯು ನೌಬಾದ್, ಕೋಳಾರ್, ಆಣದೂರ, ಹಾಲಹಳ್ಳಿ, ಬ್ಯಾಲಹಳ್ಳಿ (ಕೆ), ಸಿಂದಬಂದಗಿ, ಬಿ.ಎಸ್.ಎಸ್.ಕೆ- ಹಳ್ಳಿಖೇಡ್(ಬಿ), ಧುಮ್ಮನಸೂರ ಮೂಲಕ ಹುಮನಾಬಾದ್ಗೆ ಸಂಪರ್ಕಿಸಲಿದೆ.

ಸಿಸಿ ಹೆದ್ದಾರಿ ಕಾಮಗಾರಿ ಗುಣಮಟ್ಟದಿಂದ ಮಾಡಲು ಗುತ್ತಿಗೆದಾರರಿಗೆ ತಾಕೀತು ಮಾಡಲಾಗಿದೆ. ವಿವಿಧೆಡೆ ಬಂದ ಪ್ಯಾನಲ್ ಗಳ ಜಾಗದಲ್ಲಿ ಈ ಹಿಂದೆಯೇ ತಪಾಸಣೆ ವೇಳೆ ಅಧಿಕಾರಿಗಳು ದೋಷ ಕಂಡಿದ್ದು, ಅದನ್ನು ಸರಿಪಡಿಸಲು ಸೂಚಿಸಿದ್ದಾರೆ. ಕೆಲಸ ಸರಿಯಾಗಿ, ಸಮರ್ಪಕ ಮಾಡಿದರೆ ಮಾತ್ರ ಗುತ್ತಿಗೆದಾರರಿಗೆ ಹಣ ಪಾವತಿಯಾಗಲಿದೆ. ಕಳಪೆ ಕೆಲಸ ನಡೆದರೆ ಅಗತ್ಯ ಕ್ರಮದ ಜತೆಗೆ ಬಿಲ್ ಸಹ ತಡೆಹಿಡಿಯಲಾಗುತ್ತದೆ.| ಭಗವಂತ ಖೂಬಾ, ಸಂಸದ
ಲಾಲಬಾಗ್, ಖಾನಾಪುರ ಹತ್ತಿರದ ಅರಣ್ಯ ಇಲಾಖೆ ಭೂಮಿ ಸ್ವಾಧೀನ ಪ್ರಕ್ರಿಯೆಯಲ್ಲಾದ ವಿಳಂಬದಿಂದ ಸುಮಾರು 6.7 ಕಿಮೀನಷ್ಟು ಹೆದ್ದಾರಿ ಕಾಮಗಾರಿ ಬಾಕಿ ಉಳಿದಿದೆ. ಇದೀಗ ಈ ಸಮಸ್ಯೆ ಬಗೆಹರಿದಿದ್ದು, ಮಾರ್ಚ್ ಅಂತ್ಯದೊಳಗೆ ಕೆಲಸ ಮುಗಿಯಲಿದೆ. ನವದೆಹಲಿಯಿಂದ ಬಂದಿದ್ದ ಕ್ವಾಲಿಟಿ ಕಂಟ್ರೋಲರ್ ಪರಿಶೀಲನೆ ವೇಳೆ ಕೆಲವೆಡೆ ಕೆಲಸ ಸರಿಯಾಗಿ ಆಗದಿರುವುದು ಕಂಡಿದ್ದು, ಅವರು ಮಾಕ್೯ ಮಾಡಿದಂತೆ ಸರಿಪಡಿಸುವ ಕೆಲಸ ನಡೆದಿದೆ. ಏನೇ ಆದರೂ 5 ವರ್ಷ ಗುತ್ತಿಗೆ ಕಂಪನಿ ನಿರ್ವಹಣೆ ನೋಡಿಕೊಳ್ಳಲಿದೆ. | ಶಿವಪ್ರಸಾದ, ಎಇಇ ರಾಷ್ಟ್ರೀಯ ಹೆದ್ದಾರಿ ವಿಭಾಗ
ನೌಬಾದ್-ಕಮಲನಗರ ಅಂತಾರಾಜ್ಯ ಸಂಪರ್ಕದ ಮಹತ್ವದ ಸಿಸಿ ಹೆದ್ದಾರಿ ಕಾಮಗಾರಿಯು ಕಳಪೆ ಗುಣಮಟ್ಟದಿಂದ ಕೂಡಿದೆ. ಅಧಿಕಾರಿ, ಜನಪ್ರತಿನಿಧಿಗಳ ನಿರ್ಲಕ್ಷೃದಿಂದ ಜನರ ಹಣ ಲೂಟಿ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಬಗ್ಗೆ ಸಿಬಿಐ ತನಿಖೆಗೆ ಕೋರಿ ಶೀಘ್ರ ಹೈಕೋಟ್೯ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಎಲ್ಐ) ಸಲ್ಲಿಸುತ್ತಿದ್ದೇನೆ. ಕಳಪೆ ಕಾಮಗಾರಿ ವಿರುದ್ಧ ನ್ಯಾಯಿಕ ಸಮರ ನಡೆಸುವೆ.| ಗುರುನಾಥ ವಡ್ಡೆ, ಸಾಮಾಜಿಕ ಹೋರಾಟಗಾರ