ಕೊಪ್ಪಳ: ಸಂಸದ ಸಂಗಣ್ಣ ಕರಡಿ ಜಿಲ್ಲೆ ಕಂಡ ನಿಷ್ಪಕ್ಷಪಾತ, ಜಾತ್ಯಾತೀತ ನಾಯ. ಅವರ ಬಗ್ಗೆ ಮಾತನಾಡುವ ನೈತಿಕತೆ ಸಿ.ವಿ.ಚಂದ್ರಶೇಖರ್‌ಗೆ ಇಲ್ಲವೆಂದು ಬಿಜೆಪಿ ಪರಾಜಿತ ಅಭ್ಯರ್ಥಿ ಮಂಜುಳಾ ಕರಡಿ ಕಿಡಿಕಾರಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ್ದು, ಸಂಸದ ಸಂಗಣ್ಣ ಕರಡಿ ಬ್ಲಾಕ್ ಮೇಲ್ ಮಾಡಿ ಟಿಕೆಟ್ ಪಡೆಯುತ್ತಾರೆ ಎಂದು ಹೇಳುವ ಸಿವಿಸಿಗೆ ನೈತಿಕತೆ ಇಲ್ಲ. ಬಿಜೆಪಿ ಅವರಿಗೆ ಎಂಎಲ್‌ಸಿ ಟಿಕೆಟ್, ರಾಷ್ಟ್ರೀಯ ಪರಿಷತ್ ಸ್ಥಾನ ನೀಡಿದೆ. ಮುಂದೆಯೂ ಸೂಕ್ತ ಸ್ಥಾನ ನೀಡಲು ಸಿದ್ಧವಿತ್ತು. ಆದರೆ, ಬಿಜೆಪಿಯಿಂದ ಹೊರ ಹೋಗಿ ಜೆಡಿಎಸ್ ಸೇರಿ ಉಂಡ ಮನೆಗೆ ಕನ್ನ ಹಾಕಿದ್ದಾರೆ. ಇಂಥವರು ಸಂಸದರ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ. 2013, 2018ರಲ್ಲಿ ಬಿಜೆಪಿಗೆ ಸೋಲಾಗಲು ಸಿವಿಸಿ ಪರೋಕ್ಷ ಕಾರಣ. ಸಂಗಣ್ಣ ನಾಲ್ಕು ಬಾರಿ ಶಾಸಕರಾಗಿ, ಎರಡು ಬಾರಿ ಸಂಸದರಾಗಿ ಕ್ಷೇತ್ರ ಅಭಿವೃದ್ಧಿ ಮಾಡಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದಾರೆ. ನಮ್ಮ ಕುಟುಂಬದವರು ಚುನಾವಣೆಯಲ್ಲಿ ಪರಾಭವಗೊಂಡರು ಸಕ್ರಿಯವಾಗಿ ಪಕ್ಷ ಕಟ್ಟುತ್ತಿದ್ದಾರೆ. ಕ್ಷೇತ್ರದಲ್ಲಿ ನಮ್ಮ ಸಾಂಪ್ರದಾಯಿಕ ಎದುರಾಳಿ ಹಿಟ್ನಾಳ್ ಕುಟುಂಬದೊಂದಿಗೆ 1994ರಿಂದ ಸ್ಪರ್ಧೆ ಇದೆ. ಕೊಪ್ಪಳದಲ್ಲಿ ಹಿಟ್ನಾಳ್-ಕರಡಿ ಕುಟುಂಬದ ನಡುವೆ ಸ್ಪರ್ಧೆ ಇದ್ದು, ನಿನ್ನೆ ಮೊನ್ನೆ ಬಂದವರೊಂದಿಗಲ್ಲ. ಸಂಸದರ ಬಗ್ಗೆ ಮಾತನಾಡುವಾಗ ಹಿಡಿತವಿರಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಸದರು ಬಿಜೆಪಿ ಬಿಡುವುದಿಲ್ಲವೆಂದು ರಕ್ತದಲ್ಲಿ ಬರೆದು ಕೊಡುವುದಾಗಿ ಹೇಳಿದ್ದಾರೆ. ಸಿವಿಸಿಗೆ ಧೈರ್ಯ ಇದ್ದರೆ ಅವರು ಜೆಡಿಎಸ್ ಬಿಡುವುದಿಲ್ಲವೆಂದು ರಕ್ತದಲ್ಲಿ ಬರೆದುಕೊಡಲಿ. ಸಂಗಣ್ಣ ಅಭಿವೃದ್ಧಿ, ಪಕ್ಷ ನಿಷ್ಠೆ ಬಗ್ಗೆ ಜಿಲ್ಲೆಯ ಜನತೆಗೆ ಗೊತ್ತಿದೆ ಎಂದು ತಿರುಗೇಟು ನೀಡಿದ್ದಾರೆ.