ರಾಮನಗರ : ರಾಜ್ಯದಲ್ಲಿ ಸುಮಾರು 6,400 ಟನ್ ಸಿಲ್ಕ್ ವೇಸ್ಟ್ ಬೈ ಪ್ರಾಡೆಕ್ಟ್‌ಗೆ ರ‌್ತಾಗುತ್ತಿದೆ. ಮತ್ತೆ ಅಲ್ಲಿಂದ ಹೊಸ ಉತ್ಪನ್ನದ ಮೂಲಕ ಹೆಚ್ಚಿನ ದರದದಲ್ಲಿ ವಾಪಸ್ ಬರುತ್ತಿದೆ. ಇದರಿಂದ ಬೇರೆಯವರಿಗೆ ಹೆಚ್ಚು ಲಾಭ ಸಿಗುತ್ತಿದೆ ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ತಿಳಿಸಿದರು.
ನಗರದಲ್ಲಿ ಸೋಮವಾರ ನಡೆದ ಶ್ರೀರಾಮ ದೇವರ ರಥೋತ್ಸವಕ್ಕೆ ಆಗಮಿಸಿ ಶ್ರೀರಾಮ ದೇವರ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಪಂಚದಲ್ಲಿ ಭಾರತ ರೇಷ್ಮೆ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಪ್ರಮುಖವಾಗಿ ರಾಮನಗರ ಮತ್ತು ಶಿಡ್ಲಘಟ್ಟ ಭಾಗಗಳಲ್ಲಿ ಹೆಚ್ಚು ಉತ್ಪಾದನಾ ಕ್ಷೇತ್ರ ಹೊಂದಿದೆ ಎಂದರು.
ಆಧುನಿಕ ಉತ್ಪನ್ನ ಘಟಕವನ್ನು ನಮ್ಮಲ್ಲೇ ತೆರೆದರೆ ಹೆಚ್ಚು ಲಾಭ ನಮಗೆ ಸಿಗುತ್ತದೆ. ಆ ದಿಶೆಯಲ್ಲಿ ಕೇಂದ್ರ ಮಂತ್ರಿಗಳ ಗಮನ ಸೆಳೆಯಲಾಗಿದೆ. ರೇಷ್ಮೆ ಮ್ಯೂಸಿಯಂ ಮಾಡಲು ಒತ್ತಾಯಿಸಲಾಗಿದೆ. ಇದರಿಂದ ರೈತ ಉತ್ಪಾದನೆ ನಡೆಸುವುದು ಹೇಗೆ? ಮಾರುಕಟ್ಟೆ ಉತ್ಪನ್ನ ಎಲ್ಲವೂ ಜನರಿಗೆ ತಿಳಿಯಲಿದೆ. ಅಧ್ಯಯನಕ್ಕೂ ಉಪಯೋಗವಾಗುತ್ತದೆ ಎಂದರು.
ಚನ್ನಪಟ್ಟಣ ಬೊಂಬೆಗಳನ್ನು ಉತ್ತೇಜಿಸಲು ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ಕಾರಿಡಾರ್‌ನಲ್ಲಿ ಟಾಯ್ಸಪಾರ್ಕ್ ನಿರ್ಮಿಸಿ ಸ್ಥಳೀಯ ಬೊಂಬೆ ತಯಾರಿಕರಿಗೆ ಉತ್ತೇಜನ ನೀಡಬೇಕು ಎಂದು ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಲ್ಲಿ ಮನವಿ ಮಾಡಿದ್ದೇನೆ. ಸಾವಿರಾರು ಕುಟುಂಬಗಳು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬೊಂಬೆ ಉದ್ಯಮದ ಮೇಲೆ ಅವಲಂಬಿತವಾಗಿವೆ ಎಂದು ತಿಳಿಸಿದರು.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಕಾರಿಡಾರ್ ನಿರ್ಮಾಣದ ನಂತರ ಚನ್ನಪಟ್ಟಣಕ್ಕೆ ಬರುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಇದರಿಂದಾಗಿ ಈ ಉದ್ಯಮದ ಮೇಲೆ ಅವಲಂಬಿತವಾಗಿರುವವರ ಸ್ಥಿತಿ ಶೋಚನೀಯವಾಗಿದೆ. ಟಾಯ್ಸಪಾರ್ಕ್ ನಿರ್ಮಿಸಿದರೆ ಬೊಂಬೆ ತಯಾರಕರಿಗೆ ಅನುಕೂಲವಾಗಲಿದೆ. ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ ಎಂದರು.
ರಾಜ್ಯ ಸರ್ಕಾರದ ಬೆಲೆ ಏರಿಕೆ ವಿರುದ್ಧ ಬಿಜೆಪಿ-ಜೆಡಿಎಸ್ ಪಕ್ಷಗಳು ಹೈಕಮಾಂಡ್ ಸೂಚನೆಯಂತೆ ಪ್ರತಿಭಟನೆ ಮಾಡಲಿವೆ. ನಗರದಲ್ಲಿ ನಡೆಯುತ್ತಿರುವ ಶ್ರೀರಾಮ ದೇವರ ರಥೋತ್ಸವವನ್ನು ಜನತೆ ಭಾವಾನಾತ್ಮಕವಾಗಿ ಸಾಂಪ್ರದಾಯಿಕವಾಗಿ ಆಚರಣೆ ಮಾಡಲಾಗುತ್ತಿದ್ದು, ಶ್ರೀರಾಮ ಎನ್ನುವುದು ಒಂದೇ ಆದರ್ಶ ಎಂದರು.