ಹಾಸನ: ತೆಲಂಗಾಣದ ಬೇಕರಿಯಲ್ಲಿ ಉಂಟಾದ ಸಿಲಿಂಡರ್ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡ ಅನಾಥ ಯುವಕ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಸಕಲೇಶಪುರ ಮೂಲದ ಅಭಿ (23) ಎಂಬ ಯುವ ಗಂಭೀರವಾಗಿ ಗಾಯಗೊಂಡ ಯುವಕ.
ಬೇಲೂರು ತಾಲ್ಲೂಕಿನ ಹಾಲ್ತೋರೆ ಗ್ರಾಮದ ನಿವಾಸಿಯೊಬ್ಬರು ತೆಲಂಗಾಣದಲ್ಲಿ ಬೇಕರಿ ನಡೆಸುತ್ತಿದ್ದು, ಅಲ್ಲಿಗೆ ಅಭಿಯನ್ನು ಕೆಲಸಕ್ಕೆ ಕರೆದುಕೊಂಡು ಹೋಗಿದ್ದರು. ಜೂ.2 ರಂದು ಬೆಳಿಗ್ಗೆ ಅಭಿ ಬೇಕರಿ ಬಾಗಿಲು ತೆಗೆದ ವೇಳೆ ಸಿಲಿಂಡರ್ ಸ್ಫೋಟಗೊಂಡು ತೀವ್ರವಾಗಿ ಗಾಯಗೊಂಡಿದ್ದ. ಸುಟ್ಟ ಗಾಯಗಳಿಂದ ನರಳುತ್ತಿದ್ದ ಅಭಿಯನ್ನು ಅಕ್ಕಪಕ್ಕದ ಅಂಗಡಿಯವರು ಹಾಗು ಸಾರ್ವಜನಿಕರು ತೆಲಂಗಾಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಆಸ್ಪತ್ರೆಗೆ ಭೇಟಿ ನೀಡಿದ್ದ ಬೇಕರಿ ಮಾಲೀಕ ಐದು ಸಾವಿರ ರೂ. ಹಣ ನೀಡಿ ಊರಿಗೆ ವಾಪಸ್ ತೆರಳುವಂತೆ ಹೇಳಿ ಹೋಗಿದ್ದ.
ಗಂಭೀರವಾಗಿ ಗಾಯಗೊಂಡಿದ್ದರೂ ಅಭಿ ಬಸ್ಸಿನಲ್ಲೇ ಪ್ರಯಾಣ ಮಾಡಿ ಹಾಸನದ ಜಿಲ್ಲಾಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಯಾರ ಆರೈಕೆ ಇಲ್ಲದೆ ಅನಾಥ ಯುವಕ ಪರದಾಡುತ್ತಿದ್ದು, ದೂರವಾಣಿ ಕರೆ ಮಾಡಿದರೂ ಬೇಕರಿ ಮಾಲೀಕ ಕರೆ ಸ್ವೀಕರಿಸುತ್ತಿಲ್ಲ. ಪದೇಪದೆ ಫೋನ್ ಮಾಡುತ್ತಿದ್ದರಿಂದ ಪ್ರತಾಪ್‌ಗೌಡ ತನ್ನ ಸಂಬಂಧಿಕರನ್ನು ಆಸ್ಪತ್ರೆಗೆ ಹೋಗಿ ಆರೋಗ್ಯ ವಿಚಾರಿಸುವಂತೆ ತಿಳಿಸಿದ್ದು, ಅದರಂತೆ ಆಸ್ಪತ್ರೆಗೆ ಬಂದು ಆರೋಗ್ಯ ವಿಚಾರಿಸಿ ಹೋಗಿದ್ದಾರೆ ಹೊರತು ಯಾವುದೇ ರೀತಿಯ ಸಹಾಯ ಮಾಡಿಲ್ಲ. ಇದಲ್ಲದೆ ಅಭಿ ಕೆಲಸ ಮಾಡಿರುವ ಎರಡು ತಿಂಗಳ ಸಂಬಳವನ್ನು ನೀಡಿಲ್ಲ.
ತಂದೆ-ತಾಯಿ ಇಲ್ಲದೆ ಅನಾಥನಾಗಿರುವ ಯುವಕ ಕಳೆದ ಎಂಟು ವರ್ಷಗಳಿಂದ ನಗರದ ಬಾಲಕರ ಬಾಲ ಮಂದಿರದಲ್ಲಿ ಆಶ್ರಯ ಪಡೆದಿದ್ದ. ಇದೀಗ ದುಡಿದು ಮಾಡಿ ಬದುಕು ಕಟ್ಟಿಕೊಳ್ಳಬೇಕೆಂದು ತೆಲಂಗಾಣದಲ್ಲಿ ಬೇಕರಿಗೆ ಸೇರಿದ್ದ. ಆದರೆ, ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡು ಯಾರ ನೆರವಿಲ್ಲದೆ ಆಸ್ಪತ್ರೆಯಲ್ಲಿ ನರಳಾಡುವಂತಾಗಿದೆ.