ಜಿಲ್ಲೆ

ಸಿಲಿಂಡರ್ ಅಕ್ರಮ ಮಾರಾಟ ನಿಷೇಧಿಸಿ

ಚಿತ್ರದುರ್ಗ: ರಾಜ್ಯದ ಪ್ರತಿ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಹೆಗ್ಗಿಲ್ಲದೆ ಅಕ್ರಮವಾಗಿ ಓಮಿನಿ, ಆಟೋಗಳಿಗೆ ಅಡುಗೆ ಅನಿಲ ತುಂಬುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ನಿಷೇಧಿಸಬೇಕು ಎಂದು ಗ್ರಾಹಕ ದಕ್ಷತಾ ಕಲ್ಯಾಣ ಫೌಂಡೇಶನ್‌ನ ರಾಜ್ಯ ವಿಭಾಗದ ಮುಖ್ಯಸ್ಥ ಚೇತನ್‌ಕುಮಾರ್ ಸರ್ಕಾರಕ್ಕೆ ಒತ್ತಾಯಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಕ್ರಮವಾಗಿ ವಾಹನಗಳಿಗೆ ಸಿಲಿಂಡರ್ ತುಂಬುವ ದಂಧೆಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟ ಉಂಟಾಗುತ್ತಿದೆ ಎಂದರು.

ವಾಹನಗಳಿಗೆ ತುಂಬುವ ವೇಳೆ ಕಳೆದ ತಿಂಗಳು ಬೆಂಗಳೂರಿನಲ್ಲಿ, ಈ ತಿಂಗಳು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ, ಚಳ್ಳಕೆರೆಯಲ್ಲಿ ಪ್ರತ್ಯೇಕ ದುರಂತ ಸಂಭವಿಸಿದೆ. ಈ ರೀತಿ ಘಟನೆ ಹಲವೆಡೆ ನಡೆಯುತ್ತಲೇ ಇವೆ. ಸ್ಪೋಟದ ಅಪಾಯದಿಂದ ಸಾರ್ವಜನಿಕರ ಆಸ್ತಿ-ಪಾಸ್ತಿಗೆ ಮಾತ್ರವಲ್ಲ. ಜೀವಕ್ಕೂ ಹಾನಿ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಸರ್ಕಾರ ಎಚ್ಚೆತ್ತುಕೊಂಡು ಸಂಪೂರ್ಣ ಕಡಿವಾಣಕ್ಕೆ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

ಪ್ರತಿ ಅಡುಗೆ ಅನಿಲ ಖರೀದಿಸುವ ವೇಳೆ ಬಯೋಮೆಟ್ರಿಕ್, ಆಯಾ ಜಿಲ್ಲೆಯ ಹೆಸರು ಮತ್ತು ಏಜೆನ್ಸಿ ಸಮೇತ ಬಾರ್ ಕೋಡಿಂಗ್ ಸಿಸ್ಟಮ್ ಜಾರಿಗೆ ಸರ್ಕಾರ ಮುಂದಾಗಬೇಕು ಎಂದು ಕೋರಿದರು.

ಫೌಂಡೇಶನ್‌ನ ಆಡಳಿತಾಧಿಕಾರಿ ಪ್ರಶಾತ್ ಜಾಮಗಡೆ, ಪಿಆರ್‌ಒ ಮುಖ್ಯಸ್ಥರಾದ ಅರುಣ ಮಾನಗಾಂವೆ, ಯಶ್ ದೇಶಪಾಂಡೆ ಇದ್ದರು.