ಎಚ್.ಡಿ.ಕೋಟೆ: ಸಿರಿಧಾನ್ಯಗಳ ಬಳಕೆಯಿಂದ ರಕ್ತ ಶುದ್ಧಿಯಾಗುವ ಜತೆಗೆ ಜೀರ್ಣಕ್ರಿಯೆ ಹಾಗೂ ಕೊಬ್ಬು ನಿವಾರಣೆಗೆ ಸಹಕಾರಿಯಾಗುತ್ತದೆ ಎಂದು ಉಪನ್ಯಾಸಕಿ ಪುಷ್ಪಲತಾ ತಿಳಿಸಿದರು.
ಪಟ್ಟಣದ ಕೃಷ್ಣಪುರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಮಲ್ಲಿಗೆ ಜ್ಞಾನ ವಿಕಾಸಕೇಂದ್ರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಿರಿಧಾನ್ಯಗಳ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಏಷ್ಯಾ ಹಾಗೂ ಆಫ್ರಿಕಾ ಖಂಡದಲ್ಲಿ ಅತಿ ಹೆಚ್ಚಾಗಿ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತದೆ. ವಾರದಲ್ಲಿ ಮೂರು ದಿನಗಳಾದರೂ ಮನೆಯಲ್ಲಿ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.
ತಾಲೂಕು ಯೋಜನಾಧಿಕಾರಿ ಶಶಿಧರ್ ಮಾತನಾಡಿ, ಬ್ಯಾಂಕ್ ಸಹಯೋಗದೊಂದಿಗೆ ಸುಮಾರು 600 ಕೋಟಿ ರೂ.ಸಾಲವನ್ನು ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡಲಾಗಿದೆ. ಸಂಘಗಳು ಸುಮಾರು 13 ಕೋಟಿ ರೂ.ಉಳಿತಾಯ ಮಾಡಿವೆ. ಲಾಭಾಂಶವನ್ನು ಕರೊನಾ ಸಂಕಷ್ಟ ಸಂದರ್ಭದಲ್ಲಿ ಸಂಘದ ಮಹಿಳಾ ಸದಸ್ಯರಿಗೆ ನೀಡಲಾಯಿತು ಎಂದು ತಿಳಿಸಿದರು.
ಜ್ಞಾನವಿಕಾಸ ಸಮನ್ವಯಾಧಿಕಾರಿ ಎಚ್.ಜಿ.ಅಶ್ವಿನಿ, ಸೇವಾಪ್ರತಿನಿಧಿ ಮಂಗಳಾ, ಕೇಂದ್ರದ ಸದಸ್ಯರಾದ ಮಂಜುಳಾ, ನಾಗಮ್ಮ, ಚವಲುವಮ್ಮ, ಸುನಂದಾ, ರಾಜೇಶ್ವರಿ ಭಾಗವಹಿಸಿದ್ದರು.