ಜಿಲ್ಲೆ

ಸಿರಿಧಾನ್ಯ ಹೆಚ್ಚಾಗಿ ಬೆಳೆಯುವ ರಾಜ್ಯ ಕರ್ನಾಟಕ

ನಾಗಮಂಗಲ: ಆಹಾರ ಮತ್ತು ಪೌಷ್ಟಿಕ ಭದ್ರತೆ, ನ್ಯೂಟ್ರಿ ಸಿರಿಧಾನ್ಯ ಯೋಜನೆ ಮತ್ತು ತಾಲೂಕು ಕೃಷಿ ಇಲಾಖೆ ಸಂಯುಕ್ತವಾಗಿ ಶನಿವಾರ ಪಟ್ಟಣದಲ್ಲಿ ಆಯೋಜಿಸಿದ್ದ ‘ಸಿರಿಧಾನ್ಯ ನಡಿಗೆ’ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.


ಪಟ್ಟಣದ ತಾಲೂಕು ಆಡಳಿತ ಕಚೇರಿ ಮುಂಭಾಗ ತಹಸೀಲ್ದಾರ್ ನಯೀಂ ಉನ್ನೀಸಾ ಹಸಿರು ನಿಶಾನೆ ತೋರುವ ಮೂಲಕ ಸಿರಿಧಾನ್ಯ ನಡಿಗೆಗೆ ಚಾಲನೆ ನೀಡಿದರು.


ಈ ವೇಳೆ ಮಾತನಾಡಿದ ಪಾಂಡವಪುರ ಉಪವಿಭಾಗದ ಕೃಷಿ ಇಲಾಖೆ ಉಪ ನಿರ್ದೇಶಕಿ ಮಮತಾ, ವಿಶ್ವ ಆರೋಗ್ಯ ಸಂಸ್ಥೆ 2023-24ನೇ ಸಾಲನ್ನು ಸಿರಿಧಾನ್ಯ ವರ್ಷವಾಗಿ ಘೋಷಿಸಿದೆ. ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಸಿರಿಧಾನ್ಯವನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಇದಕ್ಕೆ ಪೂರಕವಾಗಿ 28ರಂದು ಮಂಡ್ಯದ ರಾಜ್‌ಕುಮಾರ್ ಬಡಾವಣೆಯ ವಸ್ತುಪ್ರದರ್ಶನ ಮೈದಾನದಲ್ಲಿ ಸಿರಿಧಾನ್ಯಗಳ ಮೇಳ ಹಾಗೂ ಅದರ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಲಾಗಿದೆ. ಇದರೊಟ್ಟಿಗೆ ಜಿಲ್ಲೆಯ ಉತ್ಕೃಷ್ಟವಾದ ಬೆಲ್ಲದ ಪರಿಷೆಯನ್ನು ಏರ್ಪಡಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರ ಮಂಡ್ಯ ಮತ್ತು ತಾಲೂಕು ಕೇಂದ್ರ ನಾಗಮಂಗಲದಲ್ಲಿ ‘ಸಿರಿಧಾನ್ಯ ನಡಿಗೆ’ ಕಾರ್ಯಕ್ರಮವನ್ನು ಕಂದಾಯ ಇಲಾಖೆ, ಕೃಷಿ ಇಲಾಖೆ ಮತ್ತು ಶಿಕ್ಷಣ ಇಲಾಖೆ ಹಾಗೂ ಕೃಷಿ ಉಪಕರಣಗಳ ಮಾರಾಟಗಾರರು ಸಂಯುಕ್ತವಾಗಿ ಹಮ್ಮಿಕೊಂಡಿದ್ದೇವೆ ಎಂದರು.
28 ರ ಸೋಮವಾರದಂದು ರೈತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಿರಿಧಾನ್ಯ ಮೇಳ ಮತ್ತು ಬೆಲ್ಲದ ಪರಿಷೆಯಲ್ಲಿ ಪಾಲ್ಗೊಂಡು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.


ಸಿರಿಧಾನ್ಯದ ವಿವಿಧ ಬೆಳೆಗಳ ಬಗ್ಗೆ ಪ್ರಭಾರ ಸಹಾಯಕ ಕೃಷಿ ನಿರ್ದೇಶಕಿ ಪ್ರತಿಭಾ ಮಾಹಿತಿ ನೀಡಿದರು. ಸಿರಿಧಾನ್ಯ ನಡಿಗೆಯು ತಾಲೂಕು ಆಡಳಿತಸೌಧದಿಂದ ಆರಂಭವಾಗಿ ಬೀದರ್-ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಟಿ.ಬಿ. ಬಡಾವಣೆಯ ಬಿಜಿಎಸ್ ವೃತ್ತದಲ್ಲಿ ಅಂತ್ಯಗೊಂಡಿತು.
ಮಾದರಿ ಬಾಲಿಕಾ ಪ್ರೌಢಶಾಲೆಯ ವಿದ್ಯಾರ್ಥಿಗಳ ಬ್ಯಾಂಡ್ ಸೆಟ್ ನಡಿಗೆಗೆ ಮೆರುಗು ನೀಡಿತು. ಸಿರಿಧಾನ್ಯದ ಘೋಷವಾಕ್ಯಗಳನ್ನು ಕೃಷಿ ಇಲಾಖಾ ಸಿಬ್ಬಂದಿ ಕೈಯಲ್ಲಿ ಹಿಡಿದು ಪ್ರದರ್ಶಿಸಿದರು. ಎಲ್ಲರೂ ಬಿಳಿ ಬಣ್ಣದ ಟೀ ಶರ್ಟ್ ಧರಿಸಿದ್ದು ನಡಿಗೆಗೆ ಮೆರುಗು ನೀಡಿತು.

ಕೃಷಿ ಅಧಿಕಾರಿ ಯುವರಾಜು, ಸಪ್ತಗಿರಿ ರಮೇಶ್, ಲಕ್ಷ್ಮಣ್ ಸೇರಿದಂತೆ ಇತರರಿದ್ದರು.