ಚಿತ್ರದುರ್ಗ: ಉತ್ತಮ ಪೋಷಕಾಂಶಗಳಿರುವ ಸಿರಿಧಾನ್ಯ ಆಹಾರದ ಸೇವನೆ ಆರೋಗ್ಯ ವೃದ್ಧಿಗೆ ಸಹಕಾರಿ ಎಂದು ಜಿಪಂ ಸಿಇಒ ಎಸ್.ಜೆ. ಸೋಮಶೇಖರ್ ಹೇಳಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ಸಿರಿಧಾನ್ಯಗಳ ಹಾಗೂ ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ರಾಸಾಯನಿಕ ಯುಕ್ತ ಗೊಬ್ಬರದ ಬಳಕೆಯಿಂದ ಆಹಾರ ಪದಾರ್ಥಗಳು ಕಲುಷಿತಗೊಂಡಿದ್ದು, ಈ ನಿಟ್ಟಿನಲ್ಲಿ ಸಿರಿಧಾನ್ಯಗಳ ಬಳಕೆ ಆರೋಗ್ಯ ರಕ್ಷಣೆಗೆ ಸಹಕಾರಿಯಾಗಲಿದೆ. ಸಿರಿಧಾನ್ಯಗಳ ಸಂಸ್ಕರಣೆ, ಮೌಲ್ಯವರ್ಧನೆ ಹಾಗೂ ಮಾರುಕಟ್ಟೆಗೆ ಸೂಕ್ತ ವೇದಿಕೆ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದರು.
ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್ ಮಾತನಾಡಿ, 2017ರಿಂದ ಜಿಲ್ಲಾ, ರಾಜ್ಯ ಮಟ್ಟದಲ್ಲಿ ಈ ಸ್ಪರ್ಧೆ ಆಯೋಜನೆ ಮಾಡಲಾಗುತ್ತಿದೆ. ಜಿಲ್ಲಾ ಮಟ್ಟದ ಸಿರಿಧಾನ್ಯಗಳ ಪಾಕ ಸ್ಪರ್ಧೆಯನ್ನು ಸಿಹಿ, ಖಾರ ಹಾಗೂ ಮರೆತುಹೋದ ಖಾದ್ಯಗಳೆಂಬ ಮೂರು ವಿಭಾಗಗಳಲ್ಲಿ ಆಯೋಜಿಸಲಾಗಿದೆ.
ಪ್ರತಿ ವಿಭಾಗದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಎಂದು ಆಯ್ಕೆ ಮಾಡಿ, ಮೂರು ವಿಭಾಗಳಿಂದ 9 ವಿಜೇತರಿಗೆ ಪ್ರಶಸ್ತಿ ಹಾಗೂ 5000 ರೂ., 3000 ರೂ. ಹಾಗೂ 2000 ರೂ. ನಗದು ಪುರಸ್ಕಾರ ನೀಡಲಾಗುವುದು.
ರಾಜ್ಯಮಟ್ಟದ ಸ್ಪರ್ಧೆಯನ್ನು ಡಿಸೆಂಬರ್ ಅಥವಾ 2025 ಜನವರಿಯಲ್ಲಿ ಬೆಂಗಳೂರಿನಲ್ಲಿ ಏರ್ಪಡಿಸಲಾಗುತ್ತದೆ. ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದ ಪ್ರಥಮ ಬಹುಮಾನ ವಿಜೇತರು ಸ್ವತಃ ತಿನಿಸು ತಯಾರಿಸಲು ಅಗತ್ಯ ಸಾಮಗ್ರಿಗಳೊಂದಿಗೆ ಸಿದ್ಧರಿರಬೇಕೆಂದರು. ಎಎಸ್‌ಪಿ ಎಸ್.ಜೆ. ಕುಮಾರಸ್ವಾಮಿ ಮಾತನಾಡಿದರು.
ಸ್ಪರ್ಧೆಯಲ್ಲಿ ಭಾಗವಹಿಸಿದ್ದ 41 ಸ್ಪರ್ಧಿಗಳು ರಾಗಿ ಪೇಡ, ಬಿಸ್ಕತ್, ನವಣಕ್ಕಿ ಉಪ್ಪಿಟ್ಟು, ಪಲಾವ್, ಒತ್ತುಶಾವಿಗೆ, ಕಾಯಿರಸ, ಸಜ್ಜೆರೊಟ್ಟಿ ಇತ್ಯಾದಿ ಆಹಾರ ಪದಾರ್ಥಗಳನ್ನು ಪ್ರದರ್ಶಿಸಿದರು.
ಕೃಷಿ ಇಲಾಖೆ ಉಪ ನಿರ್ದೇಶಕ ಪ್ರಭಾಕರ್, ಸಹಾಯಕ ನಿರ್ದೇಶಕ ಪ್ರವೀಣ್ ಚೌಧರಿ, ರೇಷ್ಮೆ ಇಲಾಖೆ ಉಪ ನಿರ್ದೇಶಕ ಮಾರಪ್ಪ,ಪಶು ವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ಎನ್. ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಭಾರತಿ ಆರ್.ಬಣಕಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಪವಿತ್ರಾ, ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದ ಸರಸ್ವತಿ, ರೈತ ಪ್ರತಿನಿಧಿ ಶೋಭಾ, ಪ್ರಗತಿಪರ ರೈತರಾದ ಮಹಾವೀರ ಜೈನ್, ರಂಗಣ್ಣ ಮತ್ತಿತರರು ಇದ್ದರು.
ಬಹುಮಾನ ವಿಜೇತರು
ಸಿಹಿ ಖಾದ್ಯ: ರಾಮಗಿರಿಯ ಜಿ.ಓಂಕಾರಮ್ಮ-(ಸಿರಿಧಾನ್ಯದ ಉಂಡೆ) ಪ್ರಥಮ, ಚಿಕ್ಕತೇಕಲವಟ್ಟಿಯ ಡಿ.ಅಂಬುಜಾ-(ಬರಗು ಬೇಸನ್ ಉಂಡೆ) ದ್ವೀತಿಯ, ಎಚ್.ಜಿ.ಹಳ್ಳಿಯ ಎನ್.ಮಂಜುಳಾ- (ಸಿರಿಧಾನ್ಯದ ಕೇಕ್) ತೃತೀಯ.
ಖಾರ ಖಾದ್ಯ: ಹೊಸದುರ್ಗದ ಪಿ.ಸವಿತಾ-(ಬರಗು ಚಕ್ಲಿ) ಪ್ರಥಮ, ಚಿತ್ರದುರ್ಗದ ಮೈನಾದೇವಿ-(ಸಜ್ಜೆ ದೋಕಲಾ) ದ್ವಿತೀಯ, ನೇರ‌್ಲಹಳ್ಳಿಯ ಎಸ್.ಪಿ.ಸಂಗೀತಾ, ಚಿತ್ರದುರ್ಗದ ಅನಿತಾಲಕ್ಷ್ಮೀ-ತೃತೀಯ.
ಮರೆತುಹೋದ ಖಾದ್ಯ: ಚಿತ್ರದುರ್ಗದ ರಾಜೇಶ್ವರಿ ಬಡಿಗೆರೆ-(ಸಜ್ಜೆ ಮಾಲ್ದಿ ಮತ್ತು ಲಡ್ಡು) ಪ್ರಥಮ, ಕಿಟ್ಟಿದಾಳ್‌ನ ಪುಷ್ಪಲತಾ-(ನವಣೆ ಮಾಲ್ದಿ) ದ್ವಿತೀಯ, ಓಬವ್ವನಾಗತಿಹಳ್ಳಿಯ ಬಿ.ಎಸ್.ಅನಿತಾ-(ಕುಂಬಳಕಾಯಿ ಕಡಬು) ತೃತೀಯ.