ಜಿಲ್ಲೆ

ಸಿರಿಧಾನ್ಯ ಬೆಳೆದರೆ 10 ಸಾವಿರ ಪ್ರೋತ್ಸಾಹ ಧನ

ಜಿಲ್ಲಾಧಿಕಾರಿ ಶುಭಕಲ್ಯಾಣ್​ ಘೋಷಣೆ, ಜಿಲ್ಲಾಮಟ್ಟದ ಹಬ್ಬ, ಸಾವಯವ ಮೇಳ-

ತುಮಕೂರು:ಸಿರಿಧಾನ್ಯ ಬೆಳೆಯಲು ಪ್ರೋತ್ಸಾಹಿಸುವ ಸಲುವಾಗಿ ರಾಜ್ಯದಲ್ಲಿ ಒಂದು ಹೆಕ್ಟೇರ್​ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಯುವ ರೈತರಿಗೆ 10,000 ರೂಪಾಯಿಗಳ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್​ ಹೇಳಿದರು.

ನಗರದಲ್ಲಿ ಜಿಲ್ಲಾಡಳಿತ, ಜಿಪಂ, ಕೃಷಿ ಇಲಾಖೆ ಸಹಯೋಗದಲ್ಲಿ ಶನಿವಾರ ಜಿಲ್ಲಾ ಮಟ್ಟದ ಸಿರಿಧಾನ್ಯಹಬ್ಬ ಹಾಗೂ ಸಾವಯವ ಮೇಳ- 2025ರ ಅಂಗವಾಗಿ ಹಮ್ಮಿಕೊಂಡಿದ್ದ "ಸಿರಿಧಾನ್ಯ ನಡಿಗೆ' (ಮಿಲ್ಲೆಟ್​ ವಾಕಥಾನ್​)ಗೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 2,500 ಹೆಕ್ಟೇರ್​ ಪ್ರದೇಶದಲ್ಲಿ ಬೆಳೆಯುತ್ತಿರುವ ಸಿರಿಧಾನ್ಯ ಪ್ರದೇಶವನ್ನು 10,000 ಹೆಕ್ಟೇರ್​ಗೆ ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಹೋಬಳಿ, ತಾಲೂಕುಮಟ್ಟದಲ್ಲಿಹೆಚ್ಚು ಶ್ರಮಪಡುವಂತೆ ಸಲಹೆಯಿತ್ತರು.

ವಿಶ್ವದಾದ್ಯಂತ ಸಿರಿಧಾನ್ಯ ಬಳಕೆ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ. ಸಿರಿಧಾನ್ಯ ಬಳಕೆ ಹೆಚ್ಚಾದಾಗ ಮಾತ್ರ ಬೇಡಿಕೆ ಹೆಚ್ಚಾಗುತ್ತದೆ. ನಗರ ಪ್ರದೇಶಗಳಲ್ಲದೆ, ವಿದೇಶಗಳಲ್ಲು ಸಿರಿಧಾನ್ಯಕ್ಕೆ ಬೇಡಿಕೆ ಇದೆ. ನಮ್ಮ ಹಿರಿಯರು ಹೆಚ್ಚು ಸಿರಿಧಾನ್ಯವನ್ನು ಬಳಕೆ ಮಾಡುತ್ತಿದ್ದುದರಿಂದ ಉತ್ತಮ ಆರೋಗ್ಯವನ್ನು ಹೊಂದಿದ್ದರು. ಸಿರಿಧಾನ್ಯದಲ್ಲಿ ಅಧಿಕ ನಾರಿನಂಶ ಇರುವುದರಿಂದ ಆರೋಗ್ಯದಾಯಕ. ಆರೋಗ್ಯದ ಹಿತದೃಷ್ಟಿಯಿಂದ ಸಿರಿಧಾನ್ಯವನ್ನು ಹೆಚ್ಚು ಹೆಚ್ಚು ಬಳಸಿ ಆರೋಗ್ಯವಂತರಾಗಬೇಕು. ನೀರಿನ ಸಮಸ್ಯೆ ಇರುವ ಪ್ರದೇಶದಲ್ಲಿಯೂ ಸಿರಿಧಾನ್ಯವನ್ನು ಬೆಳೆಯಬಹುದು. ಹಾಗಾಗಿ ರೈತರು ಮಳೆಯಾಶ್ರಿತ ಪ್ರದೇಶದಲ್ಲಿ ಸಿರಿಧಾನ್ಯವನ್ನು ಬೆಳೆಯಲು ಮುಂದಾಗಬೇಕು ಎಂದು ತಿಳಿಸಿದರು. 2024&-25ನೇ ಸಾಲಿನಲ್ಲಿ ಸಿರಿಧಾನ್ಯ ಬೆಳೆಯುವ ರೈತರು ಮತ್ತು ಗ್ರಾಹಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಾಕ್​ಥಾನ್​ ಹಮ್ಮಿಕೊಳ್ಳಲಾಗಿದೆ. ಸಿರಿಧಾನ್ಯಗಳ ಬಗ್ಗೆ ಅರಿವು ಮೂಡಿಸಲು ನಗರದ ಸರ್ಕಾರಿ ಜೂನಿಯರ್​ ಕಾಲೇಜು ಮೈದಾನದಲ್ಲಿ ಜ.13 ಮತ್ತು 14ರಂದು ಜಿಲ್ಲಾಮಟ್ಟದ ಸಿರಿಧಾನ್ಯ ಮೇಳವನ್ನು ಏರ್ಪಡಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮೇಳದ ಪ್ರಯೋಜನ ಪಡೆಯುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ರಮೇಶ್​ ಹೇಳಿದರು.

ವಾಕಥಾನ್​: ತುಮಕೂರು ವಿವಿ ಮುಂಭಾಗದಿಂದ ಆರಂಭವಾದ ಸಿರಿಧಾನ್ಯ ನಡಿಗೆಯು ಬಿಎಚ್​ ರಸ್ತೆ ಮೂಲಕ ಎಸ್​ಐಟಿ ಬಳಿ ಬಲಕ್ಕೆ ತಿರುವು ಪಡೆದು ಗಂಗೋತ್ರಿ ನಗರ, ಎಸ್​ಐಟಿ ಮುಖ್ಯರಸ್ತೆ, ಎಸ್​ಎಸ್​ ಪುರಂ ಮಾರ್ಗವಾಗಿ ಸರ್ಕಾರಿ ಜೂನಿಯರ್​ ಕಾಲೇಜು ಮೈದಾನದಲ್ಲಿ ಸಂಪನ್ನಗೊಂಡಿತು. ಇದೇ ವೇಳೆ ಸಿರಿಧಾನ್ಯದಿಂದ ಸಿದ್ಧಪಡಿಸಿದ್ದ ಆಹಾರವನ್ನು ಸಿರಿಧಾನ್ಯ ನಡಿಗೆಯಲ್ಲಿ ಪಾಲ್ಗೊಂಡಿದ್ದವರಿಗೆ ಉಣಬಡಿಸಲಾಯಿತು. ರೈತರಿಗೆ ಉತ್ತಮ ಬೆಲೆ ದೊರಕಿಸಿ ಕೊಡುವ ಸಲುವಾಗಿ ಜ.23, 24, 25ರಂದು ಬೆಂಗಳೂರಲ್ಲಿ ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳದ ಪೂರ್ವಭಾವಿಯಾಗಿ ಜಿಲ್ಲಾ ಕೇಂದ್ರದಲ್ಲಿ ಸಿರಿಧಾನ್ಯ ನಡಿಗೆ, ಸಿರಿಧಾನ್ಯ ಮೇಳವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.ಉಪ ಕೃಷಿ ನಿರ್ದೇಶಕರಾದ ಡಾ. ಎಚ್​.ಎಲ್​. ಚಂದ್ರಕುಮಾರ್​, ಹುಲಿರಾಜ್​, ಲೀಡ್​ ಬ್ಯಾಂಕ್​ ವ್ಯವಸ್ಥಾಪಕ ಚೈತನ್ಯ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ತ್ಯಾಗರಾಜು, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಶಿವಶಂಕರ್​, ಬಿಸಿಎಂ ಇಲಾಖೆಯ ರಂಗಸ್ವಾಮಿ, ಪ್ರದಿಪ್​ ಸೇರಿದಂತೆ ಎಲ್ಲಾ ತಾಲೂಕುಗಳ ಸಹಾಯಕ ಕೃಷಿ ನಿರ್ದೇಶಕರು ಹಾಗೂ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಭಾಗಿಯಾಗಿದ್ದರು.