ಬಾಗಲಕೋಟೆ: ಮುಧೋಳ ತಾಲೂಕಿನ ಬರಗಿ ಗ್ರಾಮದ ರೈತ ಮಹಿಳೆ ಮಹಾದೇವಿ ಹಣಮಂತ ಕೋಲುರ ಅವರು ಅಣಬೆ ಬೇಸಾಯ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ ಘಟಕದಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಿದ್ದು, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಮಂಗಳವಾರ ಮುಧೋಳ ತಾಲೂಕಿನ ಬರಗಿ ಗ್ರಾಮಕ್ಕೆ ಸಿಇಓ ಕುರೇರ ಭೇಟಿ ನೀಡಿದ ಸಂದರ್ಭದಲ್ಲಿ ಕೃಷಿ ಇಲಾಖೆಯ ನವೋದ್ಯಮ ಯೋಜನೆಯಡಿ ಸಹಾಯಧನಲ್ಲಿ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕಾ ಘಟಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವದನ್ನು ಕಂಡು ರೈತ ಮಹಿಳೆಗೆ ಪ್ರಶಂಸೆ ವ್ಯಕ್ತಪಡಿಸಿದರು. ಇನ್ನೋರ್ವ ಪ್ರಗತಿ ಪರ ರೈತರಾದ ಪ್ರಶಾಂತ ನಾಯಕ ಅವರು ನೈಸರ್ಗಿಕ ಕೃಷಿ ಪದ್ದತಿಯಲ್ಲಿ ಬೆಳೆದ ಮಾವು, ಪೇರು, ಸಿತಾಫಲ, ರಾಮಫಲ ಹಾಗೂ ವಿವಿಧ ಔಷಧಿ ಬೆಳೆಗಳನ್ನು ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ ಎಂದರು.
ನಂತರ ಬರಗಿ ಹಾಗೂ ಮೆಳ್ಳಿಗೇರಿ ಗ್ರಾಮದಲ್ಲಿ ಸಿರಿಧಾನ್ಯಗಳನ್ನು ಬೆಳೆದ ರೈತರ ತಾಕುಗಳಿಗೆ ಭೇಟಿ ನೀಡಿ ಬೆಳೆಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಅಧಿಕಾರಿಗಳಿಗೆ ಇವುಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲು ತಿಳಿಸಿದರು. ಆಹಾರ ಪೌಷ್ಠಿಕ ಭದ್ರತಾ ಯೋಜನೆಯಡಿ ನೀಡಲಾದ ಪ್ರಾತ್ಯಕ್ಷಿಕೆ ತಾಕುಗಳಿಗೆ ಭೇಟಿ ನೀಡಿದರು. ಹಲಗಲಿ ಗ್ರಾಮದಲ್ಲಿ ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಂಡಿರುವ ಆಡು, ಮೇಕೆ ಸಾಗಾಣಿಕೆ ಕೇಂದ್ರಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು. ಮೆಳ್ಳಿಗೇರಿಯಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿದರು.
ಜಮಖಂಡಿ ತಾಲೂಕಿನ ತೊದಲಬಾಗಿಯಲ್ಲಿ ಗ್ರಾಮೀಣ ಮತ್ತು ಕುಡಿಯುವ ನೀರಿನ ಕಾಮಗಾರಿ ವೀಕ್ಷಣೆ ಮಾಡಿ ತೊದಲಬಾಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಬಸವೇಶ್ವರ ದ್ರಾಕ್ಷಿ ಸಂರಕ್ಷಣ ಘಟಕ ಮತ್ತು ಸೀತಲ ಗೃಹ ವೀಕ್ಷಣೆ ಮಾಡಿದರು. ಚಿಕ್ಕಲಕಿ ಗ್ರಾಮದ ಪಾಂಡು ಕೆರಬಾ ಮಾಣಿಕ ಅವರ ತೋಟದಲ್ಲಿ ಕೃಷಿ ಹೊಂಡ, ತೊಗರಿ ಬೆಳಗಿಳಿಗೆ ಹನಿ ನೀರಾವರಿ ಅಳವಡಿಕೆ, ಸಮಗ್ರ ಕೃಷಿ ಪದ್ದತಿ ಮತ್ತು ಡ್ರೋಣ ಮುಖಾಂತರ ತೊಗರಿ ಬೆಳೆಗೆ ನ್ಯಾನೋ ಯೂರಿಯಾ ಸಿಂಪರಣೆ ಕಾರ್ಯ ವೀಕ್ಷಣೆ ಮಾಡಿದರು.
ಭೇಟಿ ಸಮಯದಲ್ಲಿ ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಕಳ್ಳೇನ್ನವರ, ಜಮಖಂಡಿ ವಿಭಾಗದ ಕೃಷಿ ಉಪನಿರ್ದೇಶಕ ಕೆ.ಎಸ್.ಅಗಸನಾಳ, ಸಹಾಯಕ ಕೃಷಿ ನಿರ್ದೇಶಕ ಎಚ್.ಬಿ.ದೊಡಮನಿ, ಕೃಷಿ ಅಧಿಕಾರಿಗಳಾದ ಲಕ್ಷ್ಮೀ ತೇಲಿ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.