ಚಿಕ್ಕಮಗಳೂರು ತಾಲೂಕಿನ ಲಕ್ಯಾ ವಲಯದ ಸಿರಬಡಿಗೆ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಏರ್ಪಡಿಸಿದ್ದ ಕೃಷಿ ವಿಸ್ತರಣಾ ಕಾರ್ಯಕ್ರಮವನ್ನು ಗ್ರಾಮದ ಮುಖಂಡ ಶಿವರುದ್ರಪ್ಪ ಉದ್ಘಾಟಿಸಿದರು. ವಿಶಾಲಾ, ರೂಪಾ ಜೈನ್, ಉಮೇಶ್ ಮತ್ತಿತರರಿದ್ದರು. 
ಜಿಲ್ಲೆ

ಸಿರಿಧಾನ್ಯ ಬೆಳೆ ರೈತರಿಗೆ ಲಾಭದಾಯಕ ಕೃಷಿ

ನಿತ್ಯಾನಂದ ಎಸ್.ಎನ್.

ಚಿಕ್ಕಮಗಳೂರು: ಸಿರಿಧಾನ್ಯ ಬೆಳೆಯಿಂದ ಮಣ್ಣಿನ ಫಲವತ್ತತೆ ಹೆಚ್ಚುವುದರ ಜೊತೆಗೆ ಭೂಮಿಯ ಉಷ್ಠಾಂಶವನ್ನು ತಡೆಯಬಹುದಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿ ಉಮೇಶ್ ತಿಳಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಚಿಕ್ಕಮಗಳೂರು ತಾಲೂಕಿನ ಲಕ್ಯಾ ವಲಯದ ಸಿರಬಡಿಗೆ ಗ್ರಾಮದಲ್ಲಿ ಏರ್ಪಡಿಸಿದ್ದ ಕೃಷಿ ವಿಸ್ತರಣಾ ಕಾರ್ಯಕ್ರಮದಲ್ಲಿ ಸಿರಿಧಾನ್ಯ ಬೆಳೆ ಕುರಿತು ಮಾತನಾಡಿದ ಅವರು, ಸಿರಿಧಾನ್ಯ ಅಲ್ಪಾವಧಿ ಮತ್ತು ಮಳೆಯಾಶ್ರಿತ ಬೆಳೆಯಾಗಿವೆ. ತೃಣಧಾನ್ಯಗಳಾದ ರಾಗಿ, ನವಣೆ, ಸಜ್ಜೆ, ಸಾವೆ, ಅರ್ಕ, ಉದಲು, ಕೊರಲೆ ಮತ್ತು ಬರಗು ಇವುಗಳ ವಿಶೇಷ ಗುಣ ಹೊಂದಿವೆ. ಮನುಷ್ಯನಲ್ಲಿ ಬಿಪಿ, ಶುಗರ್ ಸೇರಿದಂತೆ ಕಾಣಿಸಿಕೊಳ್ಳುವ ಹಲವು ರೋಗಗಳಿಗೂ ಔಷಧಿಯಾಗಿರುವ ಸಿರಿಧಾನ್ಯ ಶ್ರೀಮಂತರ ಆರೋಗ್ಯದ ಸಿರಿ ಎನ್ನುವ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಮಿತ ಗೊಬ್ಬರ ಬಳಕೆ, ಇವುಗಳ ನಿರ್ವಹಣೆಯಿಂದ ರೈತರಿಗೆ ಸಿರಿಧಾನ್ಯ ಲಾಭದಾಯಕವೇ ಹೊರತು ನಷ್ಟವಲ್ಲ. ಸಿರಿಧಾನ್ಯಗಳನ್ನು ಬೆಳೆಯುವ ಮೊದಲು ಮಣ್ಣನ್ನು ಹದಗೊಳಿಸುವಿಕೆ, ಉತ್ತಮ ಗುಣಮಟ್ಟದ ಬೀಜಗಳ ಆಯ್ಕೆ, ಬೆಳೆಗಳ ನಿರ್ವಹಣೆಯಲ್ಲಿ ಕಳೆಗಳ ನಿರ್ವಹಣೆ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸುವುದು ಮತ್ತು ಮಾರುಕಟ್ಟೆ ವ್ಯವಸ್ಥೆ ಬಗ್ಗೆ ತಿಳಿದುಕೊಳ್ಳಬೇಕು. ಸಿರಿದಾನ್ಯಗಳ ಮೌಲ್ಯವರ್ಧನೆ ಮಾಡುವುದು ಹೆಚ್ಚು ಲಾಭದಾಯಕವಾಗಿರುವುದರಿಂದ ರೈತರು ಸಿರಿಧಾನ್ಯ ಬೆಳೆಯಲು ಹೆಚ್ಚು ಆಸಕ್ತಿ ವಹಿಸಬೇಕು ಎಂದು ಮನವಿ ಮಾಡಿದರು.

ಸಿರಿಧಾನ್ಯಗಳಲ್ಲಿ ಅತಿಹೆಚ್ಚು ಪ್ರೊಟೀನ್, ಕ್ಯಾಲ್ಸಿಯಂ, ನಾರಿನಾಂಶ ಮತ್ತು ಕಬ್ಬಿಣಾಂಶ ಇರುವುದರಿಂದ ನಮ್ಮ ದೇಹಕ್ಕೆ ಬೇಕಾದ ಸೂಕ್ತ ಆಹಾರ ಒದಗಿಸುತ್ತದೆ. ಸಿರಿಧಾನ್ಯ ಬೆಳೆಯುವುದು ಅತ್ಯಂತ ಅವಶ್ಯಕವಾಗಿದ್ದು, ಇದರಿಂದ ಬರುವ ಹುಲ್ಲು, ಜಾನುವಾರುಗಳಿಗೆ ಸೂಕ್ತವಾದ ಮೇವಾಗಲಿದೆ. ಜಾನುವಾರುಗಳು ಈ ಹುಲ್ಲನ್ನು ಸೇವಿಸುವುದರಿಂದ ಹಾಲಿನ ಗುಣಮಟ್ಟವೂ ಕೂಡ ಉತ್ಕೃಷ್ಟವಾಗುತ್ತದೆ ಎಂದು ಹೇಳಿದರು.

ಮಾರುಕಟ್ಟೆಯಲ್ಲಿ ಸಿರಿಧಾನ್ಯ ಬೆಳೆಗೆ ಅತಿಹೆಚ್ಚು ಬೇಡಿಕೆ ಇರುವುದರಿಂದ ರೈತರು ಸಿರಿಧಾನ್ಯವನ್ನು ಸರಿಯಾದ ಸಮಯದಲ್ಲಿ ಬೆಳೆದು ಉತ್ತಮ ಇಳುವರಿ ಜೊತೆಗೆ ಹೆಚ್ಚು ಲಾಭವನ್ನು ಪಡೆಯಬಹುದಾಗಿದೆ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಚಿಕ್ಕಮಗಳೂರು ತಾಲೂಕು ಯೋಜನಾಧಿಕಾರಿ ರೂಪ ಜೆ. ಜೈನ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿರುವ ಬಡವರ, ಮಹಿಳೆಯರ, ರೈತರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿ ಮತ್ತು ಸಬಲೀಕರಣಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಎಂಬ ಕಲ್ಪವೃಕ್ಷವನ್ನು ೧೯೮೨ರಲ್ಲಿ ಪೂಜ್ಯ ಖಾವಂದರು ನೆಟ್ಟು, ಬೆಳೆಸಿ ಪೋಷಿಸಿದರು. ಇಂದು ಈ ಕಲ್ಪವೃಕ್ಷ ವಿಶಾಲವಾಗಿ ಬೆಳೆದು ಹಳ್ಳಿ ಹಳ್ಳಿಗಳ ಬಡ ಕುಟುಂಬಗಳಿಗೆ ಬೆಳಕಾಗಿದೆ. ಸ್ವಸಹಾಯ ಸಂಘಗಳ ವಾರದ ಸಭೆ, ಉಳಿತಾಯ ಪ್ರಗತಿ ನಿಧಿ ವಿತರಣೆ, ಮರುಪಾವತಿ ಚೀಟಿ ಮತ್ತು ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳಾದ ಜ್ಞಾನದೀಪ ಶಾಲಾ ಶಿಕ್ಷಣ ಕಾರ್ಯಕ್ರಮ, ಶಾಲೆಗಳಿಗೆ ಪೀಠೋಪಕರಣಗಳ ಪೂರೈಕೆ, ಸುಜ್ಞಾನ ನಿಧಿ, ಶಿಷ್ಯವೇತನ, ಕಾರ್ಯಕ್ರಮ ಜನಮಂಗಳ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಗ್ರಾಮದ ಮುಖಂಡ ಶಿವರುದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಒಕ್ಕೂಟದ ಅಧ್ಯಕ್ಷೆ ವಿಶಾಲ, ಲಕ್ಕಮ್ಮನಹಳ್ಳಿ ಗ್ರಾಪಂ ಅಧ್ಯಕ್ಷೆ ಶಶಿಕಲಾ, ಸಿರಬಡಿಗೆ ಗ್ರಾಮದ ಮುಖಂಡರಾದ ಸೋಮಶೇಖರ್, ಎಸ್.ಬಿ.ರುದ್ರಪ್ಪ, ಚಂದ್ರಶೇಖರ್ ಹಾಗೂ ಜಯಂತಿ ಉಪಸ್ಥಿತರಿದ್ದರು.