ಜಿಲ್ಲೆ

ಸಿಮ್ಸ್‌ನಲ್ಲಿ ದೊರೆಯುತ್ತಿಲ್ಲ ಉಚಿತ ಔಷಧ

ಚಾಮರಾಜನಗರ: ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಡ ಜನರೇ ಹೆಚ್ಚಾಗಿ ಅವಲಂಬಿಸಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಬೋಧನಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉಚಿತವಾಗಿ ನೀಡುವ ಔಷಧಗಳು ದೊರೆಯದೇ ಸಮಸ್ಯೆ ಅನುಭವಿಸುವಂತಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿತು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಎಸ್ಸಿ, ಎಸ್ಟಿ ಮುಖಂಡರ ಕುಂದುಕೊರತೆ ಸಭೆಯಲ್ಲಿ ದಲಿತ ಸಂಘರ್ಷ ಸಮಿತಿಯ ಸಂಚಾಲಕ ನಿಂಗರಾಜು ಮಾತನಾಡಿ, ಈ ಕುರಿತು ದೂರಿದರು. ಜಿಲ್ಲೆಯಲ್ಲಿ ಎಸ್ಸಿ, ಎಸ್ಟಿ ಸಮುದಾಯದವರು ಹೆಚ್ಚಾಗಿ ವಾಸಿಸುತ್ತಿದ್ದು, ಈ ಸಮುದಾಯಗಳ ಬಡ ಮತ್ತು ಮಧ್ಯಮ ವರ್ಗದ ರೋಗಿಗಳು ಹೆಚ್ಚಾಗಿ ಸಿಮ್ಸ್ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ. ಎಸ್ಸಿ, ಎಸ್ಟಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಲಾಗುತ್ತದೆ. ಆದರೇ ತುರ್ತು ಘಟಕದಲ್ಲಿರುವ ಎಸ್ಸಿ, ಎಸ್ಟಿ ಸಮುದಾಯದ ರೋಗಿಗಳಿಗೆ ಉಚಿತವಾದ ಔಷಧಗಳು ದೊರೆಯುತ್ತಿಲ್ಲ. ವೈದ್ಯರು ಖಾಸಗಿ ಮೆಡಿಕಲ್‌ಗಳಿಗೆ ಕಳುಹಿಸುತ್ತಿದ್ದು, ಬಡ ಕುಟುಂಬಗಳು ಔಷಧಕ್ಕಾಗಿ ಸುಮಾರು 5-6 ಸಾವಿರ ರೂ, ಖರ್ಚು ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಸಿಮ್ಸ್ ಆಸ್ಪತ್ರೆಯಲ್ಲಿ ಔಷಧಗಳ ಖರೀದಿಗೆ ಕೋಟ್ಯಾಂತರ ರೂ, ಅನುದಾನ ಸರ್ಕಾರದಿಂದ ಬಿಡುಗಡೆಯಾಗುತ್ತದೆ. ಆದರೆ ನೆಗಡಿ, ಕೆಮ್ಮು ಮತ್ತು ಇನ್ನಿತರೆ ಸಣ್ಣಪುಟ್ಟ ಸಮಸ್ಯೆಗಳಿಗೂ ಔಷಧ ದೊರೆಯುತ್ತಿಲ್ಲ. ಈ ಕುರಿತು ಅಗತ್ಯ ಕ್ರಮವಹಿಸಬೇಕು ಎಂದು ಮನವಿ ಮಾಡಿದರು. ಗುಂಡ್ಲುಪೇಟೆ ತಾಲೂಕಿನ ಮಂಗಲ ಗ್ರಾಮದ ಬಸವರಾಜು ಮಾತನಾಡಿ, ನಮ್ಮ ಜಮೀನಿನ ಸಮಸ್ಯೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ದೂರು ನೀಡಲು ಬಂದರೇ ನಮ್ಮಿಂದ ದೂರು ತೆಗೆದುಕೊಂಡಿಲ್ಲ. ಆದರೆ ನಮ್ಮ ಜಮೀನನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲು ಮುಂದಾಗಿರುವವರು ಠಾಣೆಯ ಬಳಿ ಬರದಿದ್ದರೂ, ಅವರಿಂದ ದೂರು ಪಡೆದುಕೊಂಡಿದ್ದಾರೆ ಎಂದು ದೂರಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಪ್ರತಿಕ್ರಿಯಿಸಿ, ಪೊಲೀಸ್ ಠಾಣೆಗೆ ಇನ್ಸ್‌ಪೆಕ್ಟರ್ ಅವರನ್ನು ಯಾಕೇ ದೂರು ಸ್ವೀಕರಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಕೂಡಲೇ ಈ ಸಂಬಂಧ ಮಾಹಿತಿ ಸಂಗ್ರಹಿಸಿ ಕ್ರಮವಹಿಸಲಾಗುವುದು ಎಂದರು.

ಬನ್ನಿಸಾರಿಗೆ ಗ್ರಾಮದ ಎಸ್.ನಾಗೇಶ್ ಮಾತನಾಡಿ, ನಮ್ಮ ಗ್ರಾಮದಲ್ಲಿ 100 ಕ್ಕಿಂತಲೂ ಹೆಚ್ಚು ಎಸ್ಟಿ ಕುಟುಂಬಗಳು ವಾಸಮಾಡುತ್ತಿದ್ದ, ಸರ್ವೇ ನಂ.102/1 ರಲ್ಲಿ ಇರುವ ನಮ್ಮ ಸಮುದಾಯದ ಜಾಗವನ್ನು ಉಪ್ಪಾರ ಸಮುದಾಯದವರು ನಮ್ಮದು ಎನ್ನುತ್ತಿದ್ದಾರೆ. ಈ ವಿಚಾರದಲ್ಲಿ ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಹೇಳಿದರು. ಈ ಕುರಿತು ಕ್ರಮವಹಿಸುವುದಾಗಿ ಎಸ್ಪಿ ಡಾ.ಬಿ.ಟಿ.ಕವಿತಾ ಭರವಸೆ ನೀಡಿದರು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಬಿಂದ್ಯಾ, ಡಿವೈಎಸ್ಪಿ ಲಕ್ಷ್ಮಯ್ಯ, ಪವನ್ ಕುಮಾರ್, ಕೊಳ್ಳೇಗಾಲ ಡಿವೈಎಸ್ಪಿ ಧರ್ಮೇದ್ರ ಹಾಗೂ ದಲಿತ ಮುಖಂಡರು ಹಾಜರಿದ್ದರು.

ಕಣ್ಣೀರಿಟ್ಟ ದಲಿತ ಮಹಿಳೆ:

ನಾನು ಹೆಗ್ಗೋಠಾರ ಗ್ರಾಮದ ನನ್ನ ತಂದೆ ಮನೆಯಲ್ಲೇ ವಾಸವಾಗಿದ್ದು, ನನ್ನ ಮೊದಲ ಪತಿ ಮೃತಪಟ್ಟಿರುವುದರಿಂದ ಎರಡನೇ ಮದುವೆಯಾಗಿರುತ್ತೇನೆ. ನನಗೆ ಇಬ್ಬರು ಮಕ್ಕಳು ಇದ್ದಾರೆ. ಹೆಗ್ಗೋಠಾರ ಗ್ರಾಮದ ರಾಮಯ್ಯ ಎಂಬಾತ ನಿತ್ಯವೂ ನನ್ನ ಜತೆಗೆ ಅಸಭ್ಯವಾಗಿ ವರ್ತನೆ ಮಾಡುತ್ತಾನೆ. ಅದಲ್ಲದೇ ಅಪ್ರಾಪ್ತ ಬಾಲಕಿಯಾಗಿರುವ ನನ್ನ ಮಗಳ ಮೇಲೂ ಲೈಂಗಿಕ ದೌರ್ಜನ್ಯ ಎಸಗಲು ಯತ್ನ ಮಾಡುತ್ತಿದ್ದಾನೆ. ನಾನು ಜೀವನ ನಡೆಸಲು ಕಷ್ಟವಾಗುತ್ತಿದೆ ಎಂದು ಲಕ್ಷ್ಮಮ್ಮ ಎಂಬ ಮಹಿಳೆಯಲ್ಲಿ ಸಭೆಯಲ್ಲಿ ಕಣ್ಣೀರಿಟ್ಟರು. ಎಸ್ಪಿ ಡಾ.ಬಿ.ಟಿ.ಕವಿತಾ ಪ್ರತಿಕ್ರಿಯಿಸಿ, ಕೂಡಲೇ ಆತನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ದೂರು ದಾಖಲಿಸಿ ಎಂದು ಪೊಲೀಸರಿಗೆ ಸೂಚನೆ ನೀಡಿದರು.

ಕುದೇರು ಪಿಎಸ್‌ಐ ವರ್ಗಾವಣೆಗೆ ಆಗ್ರಹ:

ತಾಲೂಕಿನ ಕುದೇರು ಪೊಲೀಸ್ ಠಾಣೆಯ ಪಿಎಸ್‌ಐ ಕುಮುದಾ ಅವರು ಠಾಣೆ ವ್ಯಾಪ್ತಿಯಲ್ಲಿ ನಡೆಸುವ ಕುಂದುಕೊರತೆ ಸಭೆಯಲ್ಲಿ ಅನ್ಯ ಸಮುದಾಯದವರನ್ನು ಕೂರಿಸಿ ಪೋಟೋ ತೆಗೆಸಿದ್ದಾರೆ. ದಲಿತ ಮುಖಂಡನಾದ ನನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಇವರನ್ನು ವರ್ಗಾವಣೆ ಮಾಡಿ ಎಂದು ಜನ್ನೂರು ಗ್ರಾಮದ ಮುಖಂಡ ನಾಗರಾಜು ದೂರಿದರು. ಇದಕ್ಕೆ ದಸಂಸ ಸಂಚಾಲಕ ಬೆಳ್ಳಿಯಪ್ಪ ಧ್ವನಿಗೂಡಿಸಿ, ಕುದೇರು ಪೊಲೀಸ್ ಠಾಣೆಯಲ್ಲಿ ಎಸ್ಸಿ, ಎಸ್ಟಿ ಕುಂದುಕೊರತೆ ಸಭೆಯನ್ನೇ ಮಾಡುವುದಿಲ್ಲ. ಮಾಡಿದರೂ ಮುಖಂಡರ ಗಮನಕ್ಕೆ ತರುವುದಿಲ್ಲ. ಅಧಿಕಾರಿಗಳಿಗೆ ದಲಿತ ಮುಖಂಡರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಸೂಚನೆ ನೀಡಿ ಎಂದು ಮನವಿ ಮಾಡಿದರು. ಎಸ್ಪಿ ಡಾ.ಬಿ.ಟಿ.ಕವಿತಾ ಪ್ರತಿಕ್ರಿಯಿಸಿ, ಹೆಸರಿಗೆ ಮಾತ್ರ ಸಭೆ ಮಾಡುವುದಾದರೇ ಮಾಡಲೇಬೇಡಿ ಎಂದು ಕುದೇರು ಪಿಎಸ್‌ಐ ಅವರನ್ನು ತರಾಟೆಗೆ ತೆಗೆದುಕೊಂಡರು.

ಹಲವಾರು ಸಮಸ್ಯೆಗಳ ಅನಾವರಣ:

ನಗರದಲ್ಲಿರುವ ಪ್ರತಿಷ್ಠಿತ ಮಳಿಗೆಯೊಂದರಲ್ಲಿ ದಲಿತ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಜೂನಿಯರ್ ಕಾಲೇಜು ಆವರಣದಲ್ಲಿ ಅನೇಕ ಪುಂಡರು ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದಾರೆ. ಈ ಕುರಿತು ಪೊಲೀಸರು ಗಮನಹರಿಸಬೇಕು ಎಂದು ಅಮಚವಾಡಿ ಗ್ರಾಮದ ಶಿವಶಂಕರ್ ಮನವಿ ಮಾಡಿದರು. ಕೋಡಿಉಗನೆ ಗ್ರಾಮದ ಅಲೋಕ್ ಮಾತನಾಡಿ, ಕೋಡಿಉಗನೆ ಮತ್ತು ಬೇವಿನತಾಳಪುರ ಗ್ರಾಮದಲ್ಲಿ ದಲಿತರು ಮಾತ್ರ ವಾಸವಾಗಿದ್ದಾರೆ. ಜನರು ವ್ಯವಸಾಯ ಮತ್ತು ಹೈನುಗಾರಿಕೆಯನ್ನು ಮಾತ್ರ ನಂಬಿಕೊಂಡಿದ್ದಾರೆ. ಆದರೆ ಗ್ರಾಮದ ಸಮೀಪದಲ್ಲೇ ಕೆಲವರು ಕ್ವಾರಿ ಮತ್ತು ಕ್ರಷರ್ ನಡೆಸಲು ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ಜನರು ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಬಸವಾಪುರ ಗ್ರಾಮದ ನಾಗರಾಜು ಮಾತನಾಡಿ, ವಿವಿದೋದ್ದೇಶ ಸಹಕಾರ ಸಂಘವೊಂದರಲ್ಲಿ ಎಸ್ಸಿ, ಎಸ್ಟಿ ಸಸಮುದಾಯದವರು ನಿರ್ದೇಶಕರಾಗಲು ಅವಕಾಶ ನೀಡುತ್ತಿಲ್ಲ ಎಂದು ದೂರಿದರು. ಗುಂಡೇಗಾಲ ಗ್ರಾಮದ ಭಜಂಗ ಮಾತನಾಡಿ, ನ್ಯಾಯಾಲಯದ ಆದೇಶವಿದ್ದರೂ ಜಮೀನನ್ನು ಖಾತೆಮಾಡಿಕೊಡಲು ಗ್ರಾಮ ಲೆಕ್ಕಾಧಿಕಾರಿ ಹಿಂದೇಟು ಹಾಕುತ್ತಿದ್ದಾರೆ ಎಂದು ದೂರು ಸಲ್ಲಿಸಿದರು. ಕೊಳ್ಳೇಗಾಲ ರಾಜಶೇಖರ್ ಮಾತನಾಡಿ, ನಮ್ಮ ಭಾಗದಲ್ಲಿ ಅಕ್ರಮವಾಗಿ ಮರಳನ್ನು ಲೂಟಿ ಮಾಡುತ್ತಿದ್ದಾರೆ ಎಂದು ದೂರಿದರು.

ಸಮಾಜಕಲ್ಯಾಣ ಇಲಾಖೆ ವತಿಯಿಂದ ನಡೆಸುವ ಜಾಗೃತಿ ಕಾರ್ಯಕ್ರಮಗಳು ದುರುಪಯೋಗವಾಗುತ್ತಿದೆ. ಆಗಾಗಿ ಇಂದಿಗೂ ಹಲವಾರು ಗ್ರಾಮದಲ್ಲಿ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಸೂಕ್ತ ರೀತಿಯಲ್ಲಿ ಅರಿವು ಮೂಡಿಸಬೇಕು.

-ಸಿ.ಕೆ.ಮಂಜುನಾಥ್, ದಲಿತ ಮುಖಂಡ, ಚಾಮರಾಜನಗರ

ಜಿಲ್ಲೆಯಲ್ಲಿ ಎಸ್ಸಿ, ಎಸ್ಟಿ ಸಮುದಾಯದವರ ಸಮಸ್ಯೆಗಳನ್ನು ಬಗೆಹರಿಸುವ ಉದ್ದೇಶದಿಂದಲೇ ಕುಂದುಕೊರತೆ ಸಭೆ ನಡೆಸಲಾಗುತ್ತಿದೆ. ಆದರೆ ಠಾಣೆ ಮಟ್ಟದಲ್ಲಿ ಸಭೆಗಳನ್ನು ನಡೆಸುತ್ತಿಲ್ಲ ಎಂಬುದು ಖಂಡನೀಯ. ಈ ಸಂಬಂಧ ಠಾಣೆಗಳಿಗೆ ನಾನೇ ಖುದ್ದು ಭೇಟಿ ನೀಡಿ ಕ್ರಮವಹಿಸುತ್ತೇನೆ.

-ಡಾ.ಬಿ.ಟಿ.ಕವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಾಮರಾಜನಗರ