ಚಾಮರಾಜನಗರ: ಜಿಲ್ಲೆಯ ಬಡ ಮತ್ತು ಮಧ್ಯಮ ವರ್ಗದ ರೋಗಿಗಳಿಗೆ ಚಿಕಿತ್ಸೆ ನೀಡುವ ಸಿಮ್ಸ್ ಆಸ್ಪತ್ರೆಯ ಮುಂಭಾಗ ಅವ್ಯವಸ್ಥೆ ತಾಂಡವವಾಡುತ್ತಿದ್ದು, ಕುಡುಕರ ತಾಣವಾಗಿ ಮಾರ್ಪಟ್ಟಿದೆ.
ನಗರದ ಯಡಬೆಟ್ಟ ಸಮೀಪದಲ್ಲಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧನಾ ಆಸ್ಪತ್ರೆಗೆ ವಿವಿಧ ರೀತಿಯ ಚಿಕಿತ್ಸೆಯನ್ನು ಪಡೆದುಕೊಳ್ಳಲು ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ರೋಗಿಗಳು ಹಾಗೂ ಸಾರ್ವಜನಿಕರು ಭೇಟಿ ನೀಡುತ್ತಾರೆ. ನೂರಾರು ರೋಗಿಗಳು ಚಿಕಿತ್ಸೆ ಪಡೆದುಕೊಳ್ಳಲು ಒಳರೋಗಿಗಳಾಗಿ ದಾಖಲಾಗುತ್ತಾರೆ. ಅಂತವರನ್ನು ನೋಡಿಕೊಳ್ಳುವ ಸಲುವಾಗಿ ಸಂಬಂಧಿಕರು ಆಸ್ಪತ್ರೆಗೆ ಬರುತ್ತಾರೆ. ಆದರೆ ಉತ್ತಮ ಆರೋಗ್ಯವನ್ನು ಕಲ್ಪಿಸಬೇಕಾದ ಸಿಮ್ಸ್ ಆಸ್ಪತ್ರೆಯ ಮುಂಭಾಗದ ಸರ್ಕಾರಿ ಜಾಗದಲ್ಲಿ ಹತ್ತಾರು ಸಂಖ್ಯೆಯಲ್ಲಿ ಗೂಡಂಗಡಿಗಳು ತಲೆ ಎತ್ತಿದ್ದು, ಕೆಲವು ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡಲಾಗುತ್ತಿದೆ. ಟಿ, ಕಾಫಿ, ತಿಂಡಿ, ಊಟದ ಹೋಟೆಲ್‌ಗಳಲ್ಲಿ ಅಶುಚಿತ್ವ ತಾಂಡವವಾಡುತ್ತಿದ್ದು, ಯಾರು ಕೂಡ ಸ್ವಚ್ಛತೆಗೆ ಆದ್ಯತೆಯನ್ನು ನೀಡುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಅಂಗಡಿ ಮುಂಗಟ್ಟುಗಳು ಇರುವ ಎರಡು ಬದಿಯಲ್ಲೂ ರಾಶಿ ರಾಶಿ ಕಸ ಸಂಗ್ರಹವಾಗಿದ್ದು, ಮದ್ಯದ ಪೌಚ್‌ಗಳು ಇನ್ನಿತರೆ ಕಸ ಕೊಳೆತು ನಾರುತ್ತಿದೆ. ಸಿಮ್ಸ್ ಮುಂಭಾಗದ ರಸ್ತೆಯಲ್ಲೇ ನೀರು ನಿಲ್ಲುತ್ತಿದ್ದು, ಸಾರ್ವಜನಿಕರು ಸಮಸ್ಯೆ ಅನುಭವಿಸುವಂತಾಗಿದೆ. ಈ ನಿಟ್ಟಿನಲ್ಲಿ ಹಲವಾರು ಬಾರಿ ಸಾರ್ವಜನಿಕರು ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಸಿಮ್ಸ್ ಆಡಳಿತ ಮಂಡಳಿಗೆ ದೂರು ನೀಡಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಸಿಮ್ಸ್ ಮುಂಭಾಗ ಅವ್ಯವಸ್ಥೆ ಮುಂದುವರಿಯುತ್ತಲೇ ಇದ್ದು, ಸಂಬಂಧಪಟ್ಟವರು ಸೂಕ್ತ ಕ್ರಮವಹಿಸಬೇಕು ಎಂದು ಸಾರ್ವಜನಿಕರು ಈ ಮೂಲಕ ಒತ್ತಾಯಿಸಿದ್ದಾರೆ.
ಮದ್ಯದ ಪೌಚ್‌ಗಳ ರಾಶಿ:
ಸಿಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿರುವ ಕೆಲವು ಗೂಡಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟವನ್ನು ಮಾಡುತ್ತಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಡುತ್ತಿದೆ. ಇದರಿಂದಾಗಿ ರಸ್ತೆ ಇಕ್ಕೆಲಗಳಲ್ಲಿ ಮದ್ಯದ ೌಚ್‌ಗಳ ರಾಶಿಯೇ ಕಂಡುಬಂರುತ್ತಿದೆ. ಪ್ಲಾಸ್ಟಿಕ್ ಮತ್ತು ಪೇಪರ್ ಲೋಟಗಳ ಗುಡ್ಡೆಗಳು ಸಾಮಾನ್ಯವಾಗಿದೆ. ಇತ್ತೀಚೆಗೆ ನಿರ್ಮಾಣ ಮಾಡಿರುವ ಬಸ್ ತಂಗುದಾಣದ ಒಳಭಾಗದಲ್ಲೂ ಮದ್ಯದ ಪೌಚ್ ಹಾಗೂ ಪ್ಲಾಸ್ಟಿಕ್ ಲೋಟಗಳು ಬಿದ್ದಿದ್ದು, ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಇನ್ನು ಆಸ್ಪತ್ರೆಗೆ ಬರುವವರು, ಹೊರಗುತ್ತಿಗೆ ನೌಕರರು ಹಾಗೂ ನರ್ಸಿಂಗ್ ವಿದ್ಯಾರ್ಥಿಗಳಿಗೆ ಮುಂಭಾಗದಲ್ಲಿರುವ ಹೋಟೆಲ್‌ಗಳೇ ಆಧಾರವಾಗಿದೆ. ಆದರೇ ಯಾವ ಹೋಟೆಲ್‌ಗಳಲ್ಲೂ ಕೂಡ ಸ್ವಚ್ಛತೆಗೆ ಆದ್ಯತೆಯನ್ನು ನೀಡುತ್ತಿಲ್ಲ. ಆಗಾಗಿ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಅಗತ್ಯಕ್ರಮವನ್ನು ಕೈಗೊಳ್ಳಬೇಕು. ಬೀದಿಬದಿಯ ವ್ಯಾಪಾರಿಗಳಿಗೆ ಸೂಕ್ತ ಅವಕಾಶವನ್ನು ಮಾಡಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ:
ಸಿಮ್ಸ್ ಮುಂಭಾಗದ ಸರ್ಕಾರಿ ಜಾಗದಲ್ಲಿ ಇರುವ ಕೆಲವು ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯಮಾರಾಟ ಮಾಡಲಾಗುತ್ತಿದೆ ಎಂದು ಹಲವಾರು ಬಾರಿ ಶಿವಪುರ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ದೂರು ನೀಡಿದ್ದರೂ ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದಾರೆ. ಆಗಾಗಿ ಇದು ದಿನೇದಿನೇ ಹೆಚ್ಚಾಗುತ್ತಿದ್ದು, ಅನೈತಿಕ ಚಟುವಟಿಕೆಗಳಿಕೆ ಮತ್ತಷ್ಟು ಅವಕಾಶ ಮಾಡಿಕೊಟ್ಟಂತಾಗುತ್ತಿದೆ. ಕೆಲವರು ಅಂಗಡಿಗಳನ್ನು ಮತ್ತೊಬ್ಬರಿಗೆ ಬಾಡಿಗೆಗೆ ಕೊಟ್ಟು, 4-5 ಸಾವಿರ ರೂ, ಗಳವರೆಗೂ ಬಾಡಿಗೆಯನ್ನು ವಸೂಲಿ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅದಾಗ್ಯೂ ಗ್ರಾಮ ಪಂಚಾಯಿತಿ ಈ ವರೆಗೂ ಯಾವುದೇ ಕ್ರಮವನ್ನು ವಹಿಸಿಲ್ಲ. ಬೀದಿಬದಿಯ ವ್ಯಾಪಾರಿಗಳಿಗೆ ಸೂಕ್ತವಾದ ಸ್ಥಳಾವಕಾಶವನ್ನು ಕಲ್ಪಿಸಿ, ಸ್ವಚ್ಛತೆಗೆ ಆದ್ಯತೆ ನೀಡಬೇಕಾದ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ಧೋರಣೆ ಇದಕ್ಕೆ ಕಾರಣ ಎಂದು ಸ್ಥಳೀಯರಾದ ಎಂ.ಪ್ರಸಾದ್ ಆರೋಪಿಸಿದ್ದಾರೆ.
ಸಿಮ್ಸ್ ವೈಲ್ಯ:
ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧನಾ ಆಸ್ಪತ್ರೆಯ ವೈಲ್ಯವೂ ಇದರಲ್ಲಿ ಎದ್ದು ಕಾಣುತ್ತಿದೆ. ಸಿಮ್ಸ್ ಆಸ್ಪತ್ರೆಯ ಮುಂಭಾಗದಲ್ಲೇ ಇಂತಹ ಅವ್ಯವಸ್ಥೆ ನಿತ್ಯವೂ ಕಂಡು ಬಂದರೂ ಸಿಮ್ಸ್ ಆಡಳಿತ ಮಂಡಳಿ ಕಂಡರೂ ಕಾಣದಂತೆ ಇದೆ. ಇದನ್ನು ಗ್ರಾಮ ಪಂಚಾಯಿತಿಯ ಅಧಿಕಾರಿಗಳು ನಿರ್ವಹಣೆ ಮಾಡಬೇಕು ಎಂದು ಆರೋಪಿಸುತ್ತಾ, ಆಸ್ಪತ್ರೆಯ ಮುಂಭಾಗವೇ ಸ್ವಚ್ಛತೆಗೆ ಆದ್ಯತೆಯನ್ನು ನೀಡದಂತಾಗಿದೆ. ಈ ನಿಟ್ಟಿನಲ್ಲಿ ಹಲವಾರು ಸ್ಥಳೀಯರು ಸಿಮ್ಸ್ ಆಡಳಿತ ಮಂಡಳಿಯ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿರುವ ಅಂಗಡಿಗಳು ಗ್ರಾ.ಪಂ ಅನುಮತಿಯನ್ನು ಪಡೆದುಕೊಂಡಿಲ್ಲ. ಅದಾಗ್ಯೂ ಈ ಹಿಂದೆ ಅಂಗಡಿಗಳಿಗೆ ನೋಟಿಸ್ ನೀಡಲಾಗಿತ್ತು. ಅಂಗಡಿಗಳಿಂದ ಬಾಡಿಗೆ ವಸೂಲಿ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದರೇ ಕ್ರಮವಹಿಸುತ್ತೇನೆ. ಕೂಡಲೇ ಕಸ ವಿಲೇವಾರಿ ಮಾಡಿಸುತ್ತೇವೆ.
-ರವಿ. ಅಭಿವೃದ್ಧಿ ಅಧಿಕಾರಿ, ಶಿವಪುರ ಗ್ರಾಮ ಪಂಚಾಯಿತಿ, ಚಾಮರಾಜನಗರ
ಸಿಮ್ಸ್ ಆಸ್ಪತ್ರೆಯ ಮುಂಭಾಗದ ಅವ್ಯವಸ್ಥೆಯ ವಿರುದ್ಧ ಶಾಸಕರು, ಜಿಲ್ಲಾಧಿಕಾರಿ, ತಹಸೀಲ್ದಾರ್ ಹಾಗೂ ಶಿವಪುರ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೂ ದೂರು ನೀಡಿದ್ದೇವೆ. ನಾವು ಕೇಳಲು ಹೋದರೆ ಪ್ರತಿಭಟನೆಗೆ ಮುಂದಾಗುತ್ತಾರೆ. ಆಗಾಗಿ ಪಂಚಾಯಿತಿ ಅಧಿಕಾರಿಗಳು ಕ್ರಮವಹಿಸಬೇಕು.
-ಮಂಜುನಾಥ್, ಡೀನ್ ಮತ್ತು ನಿರ್ದೇಶಕ, ಸಿಮ್ಸ್, ಚಾಮರಾಜನಗರ
ಈ ಮೊದಲು ಅಂಗಡಿಗಳಲ್ಲಿ ಸ್ವಚ್ಛತೆ ಕಪಾಡುವಂತೆ ನೋಟಿಸ್ ನೀಡಲಾಗಿತ್ತು. ಆದರೆ ಈಗಿನ ಸಿಮ್ಸ್ ಡೀನ್ ಮತ್ತು ಪಂಚಾಯಿತಿ ಅಧಿಕಾರಿಗಳ ಮುಸುಕಿನ ಗುದ್ದಾಟದಿಂದ ಸಿಮ್ಸ್ ಮುಂಭಾಗ ಅವ್ಯವಸ್ಥೆ ತಾಂಡವವಾಡುತ್ತಿದೆ. ಅಕ್ರಮವಾಗಿ ಮದ್ಯಮಾರಾಟವಾಗುತ್ತಿದ್ದು, ಸಂಬಂಧಪಟ್ಟವರು ಗಮನಹರಿಸಿ ಕ್ರಮವಹಿಸಬೇಕು.
-ಎಂ.ಪ್ರಸಾದ್, ಸ್ಥಳೀಯ ವ್ಯಾಪಾರಿ, ಚಾಮರಾಜನಗರ