ಬೇಲೂರು: ತಾಲೂಕಿನ ಗಿಣ್ಣನಮನೆ ಗ್ರಾಮದಲ್ಲಿ ಸಿಮೆಂಟ್ ಇಟ್ಟಿಗೆ ತಯಾರಿಕೆ, ಹಸು, ಕುರಿ, ಕೋಳಿ ಸಾಕಣೆ ಫಾರ್ಮ್‌ಗೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದಿರುವವರ ವಿರುದ್ಧ ಸೆಸ್ಕ್ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಅನಾಹುತ ತಪ್ಪಿಸಲು ಮುಂದಾಗಬೇಕು. ಇಲ್ಲದಿದ್ದಲ್ಲಿ ಹೋರಾಟ ಅನಿವಾರ್ಯವಾಗಲಿದೆ ಎಂದು ಸಾಮಾಜಿಕ ಕಾರ್ಯಕರ್ತ ಗಂಗಾಧರ್ ಬಹುಜನ್ ಹೇಳಿದರು.
ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿರುವ ಸ್ಥಳವನ್ನು ಬುಧವಾರ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಒಂದು ಕಿಲೋ ಮೀಟರ್ ದೂರದಲ್ಲಿರುವ ಜಮೀನಿನಲ್ಲಿ ನಡೆಸುತ್ತಿರುವ ಸಿಮೆಂಟ್ ಇಟ್ಟಿಗೆ ತಯಾರಿಕೆ, ಹಸು, ಕುರಿ, ಕೋಳಿ ಸಾಕಣೆಗೆ ಸ್ಥಳೀಯರನ್ನು ಹೆದರಿಸಿ ಅಕ್ರಮವಾಗಿ ಎರಡು ವರ್ಷದಿಂದ ವಿದ್ಯುತ್ ಸಂಪರ್ಕ ಪಡೆದಿದ್ದಾರೆ ಎಂದು ದೂರಿದರು.
ವಿದ್ಯುತ್ ಕಂಬಗಳನ್ನು ಬಳಸದೆ ವಿದ್ಯುತ್ ವೈರ್‌ಗಳನ್ನು ಹಸಿ ಮರಗಳಿಗೆ ಕಟ್ಟಿದ್ದಾರೆ. ವೈರ್ ಕೆಲವು ಕಡೆ ಜೋತು ಬಿದ್ದಿದ್ದರೆ ಮತ್ತೆ ಕೆಲವೆಡೆ ನೆಲದ ಮೇಲೆ ಬಿದ್ದಿರುತ್ತದೆ. ಜನರು ಓಡಾಡಲು ಭಯಪಡುವಂತಾಗಿದೆ. ಜಾನುವಾರುಗಳು ತುಳಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಪಕ್ಕದಲ್ಲಿರುವ ಹುಲ್ಲಿನ ಬಣವೆಗಳಿಗೆ ತಗುಲಿದರೆ ಭಾರಿ ಅಪಾಯ ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಗ್ರಾಮಸ್ಥರು ಅನೇಕ ಬಾರಿ ಸೆಸ್ಕ್ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಪರಿಶೀಲನೆಗೆ ಬಂದ ಅಧಿಕಾರಿಗಳು ನೋಡಿ ಸುಮ್ಮನೆ ಹೋಗುವುದು ನೋಡಿದರೆ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ಅನುಮಾನ ಬರುತ್ತದೆ. ಅಕ್ರಮ ವಿದ್ಯುತ್ ಸಂಪರ್ಕವನ್ನು ಸಂಬಂಧಿಸಿದ ಅಧಿಕಾರಿಗಳು ಕಡಿತ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಬಿಎಸ್‌ಪಿ ತಾಲೂಕು ಅಧ್ಯಕ್ಷ ಕೆಸಗೋಡು ಪ್ರಕಾಶ್ ಮಾತನಾಡಿ, ಸೆಸ್ಕ್ ಅಧಿಕಾರಿಗಳು ಕೇವಲ ಒಂದು ತಿಂಗಳ ವಿದ್ಯುತ್ ಬಿಲ್ ಪಾವತಿ ಮಾಡಲು ವಿಳಂಬವಾದರೆ ಸಂಪರ್ಕ ಕಡಿತ ಮಾಡುತ್ತಾರೆ. ಅದರೆ, ಎರಡು ವರ್ಷಗಳಿಂದ ಈ ರೀತಿ ಅಕ್ರಮ ವಿದ್ಯುತ್ ಸಂಪರ್ಕ ಪಡೆದು ಸರ್ಕಾರಕ್ಕೆ ಲಕ್ಷಾಂತರ ರೂ.ನಷ್ಟ ಮಾಡುತಿದ್ದರೂ ಮೌನ ವಹಿಸಲು ಕಾರಣವೇನು? ಅಕ್ರಮದಲ್ಲಿ ಸೆಸ್ಕ್ ಅಧಿಕಾರಿಗಳೂ ಶಾಮೀಲಾಗಿದ್ದಾರೆಯೇ ಎಂಬ ಬಗ್ಗೆ ಮೇಲಧಿಕಾರಿಗಳು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಜತೆಗೆ ಗ್ರಾಮಸ್ಥರ ಮೇಲೆ ನೆಡೆಯುತ್ತಿರುವ ದೌರ್ಜನ್ಯ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಗ್ರಾಮಸ್ಥರಾದ ದನಪಾಲಕ್ಷ, ತಿಮ್ಮಯ್ಯ ಇದ್ದರು.