ಜಿಲ್ಲೆ

ಸಿಬ್ಬಂದಿಯ ಕೆಟ್ಟ ವರ್ತನೆ ಖಂಡಿಸಿ ಅರಣ್ಯ ಇಲಾಖೆಗೆ ಬಹಿರಂಗ ಪತ್ರ

ಯಲ್ಲಾಪುರ: ಕಳೆದ ಕೆಲ ದಿವಸಗಳಿಂದ ಅರಣ್ಯ ಇಲಾಖೆಯ ಸಿಬ್ಬಂದಿಯ ವರ್ತನೆ ಸಾರ್ವಜನಿಕರಲ್ಲಿ ಅನೇಕ ಪ್ರಶ್ನೆ, ಗೊಂದಲಗಳು ಮೂಡುವಂತೆ ಮಾಡಿದೆ. ಅವುಗಳನ್ನು ನಿವಾರಿಸಲು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಅರಣ್ಯ ಇಲಾಖೆಗೆ ಕೆಲವು ಪ್ರಶ್ನೆಗಳನ್ನೊಳಗೊಂಡ ಬಹಿರಂಗ ಪತ್ರ ಬರೆದಿದೆ. ಇಲಾಖೆ ಮುಂದಿನ ಹತ್ತು ದಿನಗಳಲ್ಲಿ ಕಾನೂನಾತ್ಮಕ ಅಂಶಗಳೊಂದಿಗೆ ಸ್ಪಷ್ಟ ಉತ್ತರವನ್ನು ನೀಡಬೇಕೆಂದು ವೇದಿಕೆಯ ಅಧ್ಯಕ್ಷ ಎ.ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.

ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಬಹಿರಂಗ ಪತ್ರವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಅರಣ್ಯ ಸಿಬ್ಬಂದಿ ಅರಣ್ಯ ವಾಸಿಗಳಿಗೆ ಮಾನಸಿಕ ಹಾಗೂ ದೈಹಿಕ ದೌರ್ಜನ್ಯ, ಕಿರುಕುಳ, ಅರಣ್ಯ ವಾಸಿಗಳ ಹಕ್ಕಿಗೆ ಹಸ್ತಕ್ಷೇಪ ಮಾಡುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿ ವರ್ತನೆ ಸಂಶಯಾಸ್ಪದವಾಗಿದೆ. ಈ ಕುರಿತು ಸ್ಪಷ್ಟೀಕರಣ ನೀಡದಿರುವುದರಿಂದ, ವೇದಿಕೆಯು ಅರಣ್ಯ ಅಧಿಕಾರಿಗಳಿಗೆ ಸ್ಪಷ್ಟೀಕರಣ ಬಯಸಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪ್ರಶ್ನಾವಳಿಯ ಬಹಿರಂಗ ಪತ್ರವನ್ನು ಹಸ್ತಾಂತರಿಸಿದೆ ಎಂದರು.

ಕಚೇರಿಗೆ ಮುತ್ತಿಗೆ: ಅರಣ್ಯ ಇಲಾಖೆಯಿಂದ ನಿರ್ದಿಷ್ಟಪಡಿಸಿದ 10 ದಿವಸಗಳ ಕಾಲಾವಧಿಯಲ್ಲಿ ಉತ್ತರ ಬರದಿದ್ದಲ್ಲಿ ಅರಣ್ಯವಾಸಿ ಮತ್ತು ಸಾರ್ವಜನಿಕ ಹಿತಾಸಕ್ತಿಯಂದ ನೇರವಾಗಿ ಅರಣ್ಯವಾಸಿಗಳೊಂದಿಗೆ ಅರಣ್ಯಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರಶ್ನಿಸಲಾಗುವುದು ಎಂದು ಎಚ್ಚರಿಸಿದರು. ವೇದಿಕೆಯ ತಾಲೂಕಾಧ್ಯಕ್ಷ ಭೀಮ್ಸಿ ವಾಲ್ಮೀಕಿ, ನೂರು ಅಹ್ಮದ ಸೈಯದ್ ಸಾಬ, ಮುಜಾವರ ಸಿದ್ದಿ, ಅನಂತ ಗೌಡ, ಫಕರುಸಾಬ್ ಜುಮ್ಮಾಸಾಬ್ ಉಪಸ್ಥಿತರಿದ್ದರು.