ಜಿಲ್ಲೆ

ಸಿಬಿಸಿಎಸ್ ಪದ್ಧತಿ ಕೈ ಬಿಡಲು ಆಗ್ರಹ

ಧಾರವಾಡ: ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಜಾರಿಗೆ ತಂದಿರುವ ಚಾಯ್್ಸ ಬೇಸ್ಡ್ ಕ್ರೆಡಿಟ್ ಸಿಸ್ಟಂ (ಸಿಬಿಸಿಎಸ್) ಶಿಕ್ಷಣ ಪದ್ಧತಿ ಕೈ ಬಿಟ್ಟು ಹಳೇ ಪದ್ಧತಿ ಮುಂದುವರಿಸುವಂತೆ ಆಗ್ರಹಿಸಿ ಕವಿವಿ ವ್ಯಾಪ್ತಿಯ ಕನ್ನಡ ಅಧ್ಯಾಪಕರ ಪರಿಷತ್ ವತಿಯಿಂದ ವಿವಿ ಆಡಳಿತ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಮೌಲ್ಯಮಾಪನ ಬಹಿಷ್ಕರಿಸಿ ಕನ್ನಡ ಅಧ್ಯಯನ ಪೀಠದಿಂದ ಮೆರವಣಿಗೆ ಮೂಲಕ ಆಗಮಿಸಿದ ಅಧ್ಯಾಪಕರು ಕೆಲ ಹೊತ್ತು ಪ್ರತಿಭಟನೆ ನಡೆಸಿ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.

ಈ ಮೊದಲಿನಂತೆ ಬಿಎ ವಿಭಾಗದ ಎಲ್ಲ ಸೆಮಿಸ್ಟರ್​ಗಳಿಗೆ ಹಾಗೂ ಬಿಎಸ್​ಸಿ, ಬಿಕಾಂ ವಿಭಾಗಗಳಲ್ಲಿ 4 ಸೆಮಿಸ್ಟರ್​ಗಳಿಗೆ ಕನ್ನಡ ವಿಷಯ ಕಡ್ಡಾಯ ಮಾಡಬೇಕು. ಕನ್ನಡೇತರರಿಗೆ ಕನ್ನಡ ಕಲಿ-ನಲಿ ಮಾದರಿಯ ಪ್ರಾಥಮಿಕ ಪಠ್ಯ ನಿಗದಿಪಡಿಸಬೇಕು. ನಾಡು ನುಡಿ ಎಂಬ ಕಾರಣಕ್ಕೆ ಕನ್ನಡ ಅವಶ್ಯಕ ವಿಷಯದ ಬೋಧನಾ ಕಾರ್ಯಭಾರವನ್ನು 3ರ ಬದಲು 5 ಗಂಟೆಗೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

ನಂತರ ಕವಿವಿ ಕುಲಪತಿ, ಕುಲಸಚಿವರಿಗೆ ಮನವಿಪತ್ರ ನೀಡಿದರು. ಪರಿಷತ್ ಕಾರ್ಯಾಧ್ಯಕ್ಷ ಡಾ. ಶ್ರೀಶೈಲ ಹುದ್ದಾರ, ಉಪಾಧ್ಯಕ್ಷ ಜಿನದತ್ತ ಹಡಗಲಿ, ಡಾ. ವೈ.ಎಂ. ಬಜಂತ್ರಿ, ಡಾ. ಶಿವಪ್ಪ ಕೋರಿ, ಡಾ. ಜಿ.ಎಂ. ಹೆಗಡೆ, ಡಾ. ಗುರುಲಿಂಗ ಕಾಪಸೆ, ಡಾ. ಡಿ.ಎಂ. ಹಿರೇಮಠ, ಡಾ. ಜೆ.ಎಂ. ನಾಗಯ್ಯ, ಪ್ರಕಾಶ ಉಡಿಕೇರಿ, ಡಾ. ವಿ.ಎಲ್. ಪಾಟೀಲ, ಡಾ. ಧನವಂತ ಹಾಜವಗೋಳ, ಡಾ. ಪುಷ್ಪಾ ಬಸನಗೌಡರ, ಡಾ. ವಿಜಯಶ್ರೀ ಹಿರೇಮಠ, ಡಾ. ಸಾವಿತ್ರಿ ಪವಾರ, ಡಾ. ಎಂ.ಡಿ. ವಕ್ಕುಂದ, ವಿನಯಾ ವಕ್ಕುಂದ, ಇತರರು ಇದ್ದರು.