ಶಿವಮೊಗ್ಗ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಲೋಕಸಭಾ ಸದಸ್ಯ ಡಿ.ಕೆ.ಸುರೇಶ್ ಮನೆಗಳ ಮೇಲಿನ ಸಿಬಿಐ ದಾಳಿ ರಾಜಕೀಯ ಪ್ರೇರಿತ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ ನಡೆಸಿದರೆ, ಮತ್ತೊಂದೆಡೆ ಕಪ್ಪುಪಟ್ಟಿ ಧರಿಸಿಕೊಂಡಿದ್ದ ಎನ್ಎಸ್ಯುುಐ ಕಾರ್ಯಕರ್ತರು ಸಿಎಂ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಕಾಂಗ್ರೆಸ್ ಕಚೇರಿ ಎದುರು ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು. ಕಾಂಗ್ರೆಸ್ ಮುಖಂಡರ ಮನೆಗಳ ಮೇಲೆ ರಾಜಕೀಯ ದುರುದ್ದೇಶದಿಂದ ಅಧಿಕಾರಿಗಳ ಮೂಲಕ ದಾಳಿ ನಡೆಸಲಾಗುತ್ತಿದೆ. ಇದು ಸರಿಯಲ್ಲ ಎಂದರು.
ಜಿಪಂ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಕೆ.ರಂಗನಾಥ, ಎಚ್.ಸಿ.ಯೋಗೀಶ್, ಎಚ್.ಎನ್.ಮಧು, ಅನಿತಾಕುಮಾರಿ, ಯಮುನಾ ರಂಗೇಗೌಡ, ಶ್ರೀನಿವಾಸ್ ಕರಿಯಣ್ಣ, ಜಿ.ಪಲ್ಲವಿ, ಸೌಗಂಧಿಕಾ, ಎನ್.ದೇವೇಂದ್ರಪ್ಪ, ವಿಶ್ವನಾಥ ಕಾಶಿ, ಚಿನ್ನಪ್ಪ, ಗಿರೀಶ್ ಇದ್ದರು.
25 ಕಾರ್ಯಕರ್ತರು ವಶಕ್ಕೆ: ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ವಿನೋಬನಗರದ ಮನೆಗೆ ಮುತ್ತಿಗೆ ಹಾಕಲು ಮುಂದಾಗಿದ್ದ 25ಕ್ಕೂ ಹೆಚ್ಚು ಎನ್ಎಸ್ಯುುಐ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಸಿಬಿಐ ಅಧಿಕಾರಿಗಳು ಕಾಂಗ್ರೆಸ್ ನಾಯಕರ ಮನೆಗಳ ಮೇಲೆ ದಾಳಿ ನಡೆಸಿದ್ದನ್ನು ಖಂಡಿಸಿದ ನೂರಾರು ಕಾರ್ಯಕರ್ತರು ಮಧ್ಯಾಹ್ನ ಸಿಎಂ ಮನೆಗೆ ಮುತ್ತಿಗೆ ಹಾಕಲು ಮುಂದಾದರು. ಈ ವೇಳೆ ಬ್ಯಾರಿಕೇಡ್ಗಳನ್ನಿಟ್ಟು ಪೊಲೀಸರು ತಡೆದರು. ಆದರೂ ಪ್ರತಿರೋಧವೊಡ್ಡಿದ್ದರಿಂದ ಎನ್ಎಸ್ಯುುಐನ ಮಧು, ಚೇತನ್ ಗೌಡ, ಬಾಲಾಜಿ, ಆರೀಫ್ ಸೇರಿ ಹಲವರನ್ನು ವಶಕ್ಕೆ ಪಡೆದರು.
ಮುತ್ತಿಗೆ ಹಾಕುವ ವಿಷಯ ತಿಳಿಯುತ್ತಲೇ ಪೊಲೀಸರು ಸಿಎಂ ಮನೆ ಮುಂದೆ ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು. ಸಿಎಂ ಮನೆಗೆ ಸಂರ್ಪಸುವ ಎಲ್ಲ ರಸ್ತೆಗಳನ್ನೂ ತಾತ್ಕಲಿಕವಾಗಿ ಬಂದ್ ಮಾಡಲಾಗಿತ್ತು. ಸ್ಥಳೀಯ ನಿವಾಸಿಗಳನ್ನು ಹೊರತುಪಡಿಸಿ ಇತರ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಲಾಗಿತ್ತು.