ಜಿಲ್ಲೆ

ಸಿಬಿಐ ತನಿಖೆಗೆ ಎಎಪಿ ಆಗ್ರಹ

ಚಿತ್ರದುರ್ಗ: ಕವಾಡಿಗರಹಟ್ಟಿ ಪ್ರಕರಣ ಮುಚ್ಚಿಹಾಕಲು ಸರ್ಕಾರ ಯತ್ನಿಸುತ್ತಿದ್ದು, ನೊಂದವರಿಗೆ ನ್ಯಾಯ ಸಿಗಬೇಕಾದರೆ ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಮ್‌ ಆದ್ಮಿ ಪಾರ್ಟಿಯ ಎಸ್ಸಿ, ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಪುರುಷೋತ್ತಮ ಆಗ್ರಹಿಸಿದರು.

ಹಟ್ಟಿಯ ದಲಿತ ಕಾಲನಿಗೆ ಗುರುವಾರ ಭೇಟಿ ನೀಡಿ ಮೃತ ಕುಟುಂಬದವರೊಂದಿಗೆ ಚರ್ಚಿಸಿದರು. ನೀರಗಂಟಿ ಹಾಗೂ ಈ ಭಾಗದ ನಗರಸಭೆ ಸದಸ್ಯ ಘಟನೆ ಬಳಿಕ ಕಾಣೆಯಾಗಿರುವುದನ್ನು ಗಮನಿಸಿದರೆ ಮೇಲ್ನೋಟಕ್ಕೆ ತಪ್ಪು ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ. ಆದ್ದರಿಂದ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಪ್ರಕರಣ ಸಂಬಂಧ ಐದಾರು ಮಂದಿ ಮೃತಪಟ್ಟಿದ್ದಾರೆ. ಆದರೆ, ಈವರೆಗೂ ಸಮಾಜ ಕಲ್ಯಾಣ ಸಚಿವರು ಭೇಟಿ ನೀಡಿಲ್ಲ. ಸ್ವಾತಂತ್ರ್ಯ ಬಂದು 77 ವರ್ಷವಾದರೂ ಮೂಲಸೌಕರ್ಯ ಇಲ್ಲದೆಯೇ ಈ ಭಾಗದ ಜನ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಇದಕ್ಕೆ ಸರ್ಕಾರದ ವೈಫಲ್ಯವೇ ಕಾರಣ ಎಂದು ದೂರಿದರು.

ಘಟಕದ ಉಪಾಧ್ಯಕ್ಷ ಶಿವಪ್ಪ ಮಾತನಾಡಿ, ಸಚಿವರಾದ ಎಚ್‌.ಸಿ.ಮಹದೇವಪ್ಪ, ಜಿ.ಪರಮೇಶ್ವರ್‌ ಇಬ್ಬರೂ ಸೌಜನ್ಯಕ್ಕಾದರೂ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿಲ್ಲ. ದಲಿತ ಸಮುದಾಯದವರ ಮತ ಬೇಕು. ಆದರೆ, ಸಾವು-ನೋವಿಗೆ ಸ್ಪಂದಿಸಿಲ್ಲ. ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ನಿರ್ಲಕ್ಷೆ ತೋರಿದರೆ ಜನರೇ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸಲಿದ್ದಾರೆ ಎಂದರು.

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶ್‌ ಮಾತನಾಡಿ, ಮೃತ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ಸಾಕಾಗದು. ಕನಿಷ್ಟ ತಲಾ 25 ಲಕ್ಷ ರೂ., ಕುಟುಂಬ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವ ಮೂಲಕ ಆರ್ಥಿಕ ಬಲ ತುಂಬಬೇಕು ಎಂದು ಒತ್ತಾಯಿಸಿದರು.

ಕಾರ್ಯದರ್ಶಿ ಗಂಗಪ್ಪ, ಎಸ್ಟಿ ಘಟಕದ ಅಧ್ಯಕ್ಷ ಮಹಾಂತೇಶ್‌, ಮುಖಂಡರಾದ ರವಿ, ಗುರು, ಸುಭಾಷ್‌ ಇತರರಿದ್ದರು.