ಜಿಲ್ಲೆ

ಸಿಬಿಐ ತನಿಖೆ ಅಗತ್ಯವಿಲ್ಲ, ಪರಮೇಶ್ವರ್

ಚಿತ್ರದುರ್ಗ: ಹತ್ಯೆಗೀಡಾದ ರೇಣುಕಸ್ವಾಮಿ ಮನೆಗೆ ಮಂಗಳವಾರ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಭೇಟಿ ನೀಡಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದರು. ರೇಣುಕಸ್ವಾಮಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪಾಲಕರ ನೋವಿನ ನುಡಿಗಳನ್ನು ಸಮಾಧಾನವಾಗಿ ಆಲಿಸಿದರು. ನ್ಯಾಯ ಕೊಡಿಸಲು ಸರ್ಕಾರ ಕ್ರಮ ತೆಗೆದುಕೊಂಡಿದೆ. ಆತಂಕ ಬೇಡ, ಧೈರ್ಯವಾಗಿರಿ ಎಂದರು.
ಚಿತ್ರಹಿಂಸೆ ನೀಡಿ ಕೊಲೆಗೈದಿರುವುದು ತೀವ್ರ ನೋವಾಗಿದೆ ಎಂದು ತಂದೆ ಕಾಶಿನಾಥಯ್ಯ ಶಿವನಗೌಡ್ರು ಕಣ್ಣೀರಿಟ್ಟರು.
ನನಗೆ ಪೆನ್‌ಶನ್ ಬರುತ್ತದೆ, ಆದರೆ, ಗರ್ಭಿಣಿ ಸೊಸೆ ಗತಿ ಏನು? ಆಕೆಗೆ ಸರ್ಕಾರಿ ಉದ್ಯೋಗ ಕೊಡಿಸಬೇಕು. ಯಾವುದೇ ಕಾರಣಕ್ಕೂ ಪ್ರಕರಣದಿಂದ ಆರೋಪಿಗಳು ತಪ್ಪಿಸಿಕೊಳ್ಳಬಾರದು. ಹಾಸಿಗೆ ಹಿಡಿದಿರುವ ಅಜ್ಜಿಯ ಸೇವೆ ರೇಣುಕಸ್ವಾಮಿಯದ್ದಾಗಿತ್ತು. ಈಗ ಅಜ್ಜಿಗೂ ಆಸರೆ ಇಲ್ಲದಂತಾಗಿದೆ ಎಂದರು.
ಆರೋಪಿತರ ಪೈಕಿ, ದುರ್ಗದ ರಘು ನಿಮ್ಮ ಹುಡುಗನಿಗೆ ಪರಿಚಯವಿದ್ದನೇ? ಸಿನಿಮಾ ನೋಡುತ್ತಿದ್ದನೆ ಎಂದು ಸಚಿವರು ವಿಚಾರಿಸಿದರು. ಸಿನಿಮಾ ನೋಡ್ತಾ ಇರಲಿಲ್ಲ, ಕ್ರಿಕೆಟ್ ನೋಡ್ತಿದ್ದ ಎಂದು ತಾಯಿ ರತ್ನಪ್ರಭ ಹೇಳಿದರು. ಆತ ಯಾರ ಸಹವಾಸಕ್ಕೂ ಹೋದವನಲ್ಲ. ಸ್ವಾಮೀಜಿಗಳು ತಂಗುವುದಕ್ಕೆಂದೇ ಪ್ರತ್ಯೇಕ ಕೊಠಡಿ ಕೂಡ ಈ ಮನೆಯಲ್ಲಿದೆ ಎಂದು ಹಾಜರಿದ್ದವರು ತಿಳಿಸಿದರು.
ಮೃತನ ಪತ್ನಿ ಏನು ಓದಿದ್ದಾರೆ ಎಂದು ಸಚಿವರು ಕೇಳಿದರು. ಪರಿಹಾರ, ಉದ್ಯೋಗ ಕೊಡಿಸುವ ಕುರಿತು ಸಿಎಂ ಸಿದ್ದರಾಮಯ್ಯರೊಂದಿಗೆ ಚರ್ಚಿಸುತ್ತೇನೆ, ಅವರ ಭೇಟಿಗೆ ಸಮಯ ನಿಗದಿಪಡಿಸುತ್ತೇನೆ ಎಂದು ಭರವಸೆ ನೀಡಿದರು. ಪ್ರಕರಣ ಹೈಕೋರ್ಟ್, ಸುಪ್ರೀಂಕೋರ್ಟ್ ಮೆಟ್ಟಿಲೇರಿದರೆ ಬೇಕಾಗಬಹುದಾದ ಕಾನೂನು ತಜ್ಞರ ನೆರವನ್ನು ಸರ್ಕಾರ ಒದಗಿಸಬೇಕೆಂದು ಸಚಿವರನ್ನು ಕೋರಲಾಯಿತು.
ಯಾವುದೇ ಮುಲಾಜಿಗೂ ಒಳಗಾಗುವುದಿಲ್ಲ: ಯಾವುದೇ ಮುಲಾಜಿಲ್ಲದೇ, ಒತ್ತಡಕ್ಕೂ ಒಳಗಾಗದೇ ತನಿಖೆ ನಡೆಯಲಿದೆ ಎಂದು ಸಚಿವ ಪರಮೇಶ್ವರ್ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿ, ಈ ಘಟನೆ ಎಲ್ಲರಿಗೂ ನೋವುಂಟುಮಾಡಿದೆ. ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣವನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು. ಸಿಬಿಐ ತನಿಖೆ ಅಗತ್ಯವಿಲ್ಲ. ಪೊಲೀಸರು ಉತ್ತಮವಾಗಿ ಕಾರ‌್ಯ ನಿರ್ವಹಿಸುತ್ತಿದ್ದಾರೆ. ಉದ್ಯೋಗ, ಪರಿಹಾರದ ಕುರಿತು ಸಿಎಂ ಜತೆ ಚರ್ಚಿಸುವುದಾಗಿ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕರಾದ ಟಿ. ರಘುಮೂರ್ತಿ, ಕೆ.ಸಿ. ವೀರೇಂದ್ರ ಪಪ್ಪಿ, ಮಾಜಿ ಸಚಿವ ಎಚ್. ಆಂಜನೇಯ, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ಐಜಿಪಿ ತ್ಯಾಗರಾಜನ್, ಎಸ್‌ಪಿ ಧರ್ಮೇಂದರ್ ಕುಮಾರ್‌ಮೀನಾ, ಎಸಿ ಎಂ.ಕಾರ್ತಿಕ್, ತಹಸೀಲ್ದಾರ್ ಡಾ. ನಾಗವೇಣಿ, ಡಿಸಿಸಿ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಕರ್ನಾಟಕ ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಯೋಗೇಶ್‌ಬಾಬು, ಮರುಳಾರಾಧ್ಯ, ಹಾಲಸ್ವಾಮಿ, ಮುರುಳೀಧರ ಹಾಲಪ್ಪ, ಜೆಜೆಹಟ್ಟಿ ತಿಪ್ಪೇಸ್ವಾಮಿ, ಒ. ಶಂಕರ್, ಸಂಪತ್‌ಕುಮಾರ್, ಅಂಜಿನಪ್ಪ, ಗೀತಾನಂದಿನಿಗೌಡ, ನರಸಿಂಹಮೂರ್ತಿ, ಮೈಲಾರಪ್ಪ ಇತರರು ಇದ್ದರು.


ನಿಷ್ಠೆಯಿಂದ ಹರ-ಗುರುಗಳ ಸೇವೆ ಮಾಡಿದ್ದಕ್ಕೆ ನಮಗೆ ಈ ದುರ್ಗತಿ ಬಂತೇ ಎಂದು ,ಬಿ.ವೈ. ವಿಜಯೇಂದ್ರ, ಡಾ.ಜಿ. ಪರಮೇಶ್ವರ ಅವರೆದುರು ಕಾಶಿನಾಥಯ್ಯ ಶಿವನಗೌಡ್ರು ದುಃಖ ತೋಡಿಕೊಂಡರು. ದೇವರು ಅನ್ಯಾಯ ಮಾಡಿದ. ಆತನ ಮೇಲೆ ನಂಬಿಕೆ ಹೊರಟು ಹೋಗಿದೆ ಎಂದು ಬೇಸರಿಸಿದರು. ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಅನಿಲ್‌ಕುಮಾರ್‌ನ ತಂದೆ ಸಾವಿಗೂ ಮರುಗಿದ ಶಿವಣ್ಣಗೌಡ್ರು, ಇನ್ನೆಷ್ಟು ಅಮಾಯಕ ಜೀವಗಳಿಗೆ ಹೀಗೆ ಆಗಬೇಕೆಂದು ನೋವಿನಿಂದ ಕೇಳಿದರು.