ಜಿಲ್ಲೆ

ಸಿಪೆಟ್ ಅಧಿಕಾರಿಗಳಿಂದ ಜಾಗೃತಿ

ಬೀದರ್: ಮೈಸೂರಿನ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ(ಸಿಪೆಟ್)ಯ ಅಧಿಕಾರಿಗಳು ಸಂಸ್ಥೆ ಎಲ್ಲ ವರ್ಗಗಳ ನಿರುದ್ಯೋಗಿ ಯುವಕ, ಯುವತಿಯರಿಗೆ ಹಮ್ಮಿಕೊಂಡಿರುವ ವಿವಿಧ ತರಬೇತಿಗಳ ಕುರಿತು ಜಿಲ್ಲೆಯಲ್ಲಿ ಅರಿವು ಮೂಡಿಸಿದರು.
ಸಂಸ್ಥೆಯ ಅಧಿಕಾರಿ ಸದಾಶಿವಪ್ಪ ಅವರ ನೇತೃತ್ವದಲ್ಲಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಪಾಲಕರು ಹಾಗೂ ವಿದ್ಯಾರ್ಥಿಗಳನ್ನು ಭೇಟಿ ಮಾಡಿ, ಊಟ, ವಸತಿ ಸಹಿತ ಅಲ್ಪಾವಧಿಯ ತರಬೇತಿ ಹಾಗೂ ಉದ್ಯೋಗಕ್ಕೆ ನೆರವು ಕಾರ್ಯಕ್ರಮದ ಮಾಹಿತಿ ನೀಡಿದರು.
ರಾಜ್ಯ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಪ್ರಾಯೋಜಕತ್ವದಲ್ಲಿ 10ನೇ ಪಾಸಾದವರಿಗೆ ಬೇಸಿಕ್ ಕಂಪ್ಯೂಟರ್‍ನೊಂದಿಗೆ ಆರು ತಿಂಗಳ ಮಷೀನ್ ಆಪರೇಟ್-ಪ್ಲಾಸ್ಟಿಕ್ ಪ್ರೊಸೆಸಿಂಗ್, ಸ್ಪೊಕನ್ ಇಂಗ್ಲಿಷ್ ಜತೆಗೆ ಮಷೀನ್ ಆಪರೇಟರ್-ಇಂಜೆಕ್ಷನ್ ಮೌಲ್ಡಿಂಗ್, ಮಷೀನ್ ಆಪರೇಟರ್ ಆ್ಯಂಡ್ ಪ್ರೊಗ್ರಾಮರ್ ಹಾಗೂ ಪ್ಲಾಸ್ಟಿಕ್ ಪ್ರಾಡಕ್ಟ್ಸ್ ಆ್ಯಂಡ್ ಮೌಲ್ಡ್ ಡಿಸೈನ್ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 18 ರಿಂದ 30 ವರ್ಷ, ಹಿಂದುಳಿದ ವರ್ಗದವರಿಗೆ 33, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ 18 ರಿಂದ 35 ವಯೋಮಿತಿ ಇದೆ ಎಂದು ಹೇಳಿದರು.
ಕೋರ್ಸ್‍ಗಳ ಹೆಚ್ಚಿನ ಮಾಹಿತಿ ಮತ್ತು ಪ್ರವೇಶಕ್ಕಾಗಿ ದೂರವಾಣಿ ಸಂಖ್ಯೆ 0821-2510619, ಮೊಬೈಲ್ ಸಂಖ್ಯೆ 9483431968, 9483431968ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.
ಭಾಲ್ಕಿಯಲ್ಲಿ ಸಿಪೆಟ್‍ನ ಉಚಿತ ತರಬೇತಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದ್ದೇವರು, ಈ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಪ್ರವೀಣ ಹಾಲಹಳ್ಳೆ ಮಾಸಿಮಾಡ ಮತ್ತಿತರರು ಇದ್ದರು.