ಜಿಲ್ಲೆ

ಸಿಪಿಐಗೆ ಇದೆ ಹೋರಾಟ,ತ್ಯಾಗದ ಇತಿಹಾಸ

ಚಿತ್ರದುರ್ಗ: ಕಮ್ಯುನಿಸ್ಟ್ ಪಾರ್ಟಿಗೆ ಹೋರಾಟ, ತ್ಯಾಗ, ಬಲಿದಾನದ ಇತಿಹಾಸವಿದೆ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಹೇಳಿದರು.

ಸಿಪಿಐ ಹಾಗೂ ಎಐಟಿಯುಸಿ ವತಿಯಿಂದ ನಗರದ ಯೂನಿಯನ್ ಪಾರ್ಕ್ ಬಳಿ ನಿರ್ಮಿಸಿರುವ ಕಾಮ್ರೆಡ್ ಕೆ.ಚಂದ್ರಪ್ಪ ಭವನವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದ ಅವರು, ಈ ಭವನ ಜನ ಚಳವಳಿಯ ಕೇಂದ್ರವಾಗಬೇಕು ಎಂದು ತಿಳಿಸಿದರು.

ಕಮ್ಯುನಿಸ್ಟ್ ಪಕ್ಷ ಶತಮಾನೋತ್ಸವದ ಹೊಸ್ತಿಲಿನಲ್ಲಿದೆ. ಭವನದಲ್ಲಿ ಸಭೆ, ಸಮಾರಂಭರಗಳೊಂದಿಗೆ ರೈತರು, ಮಹಿಳೆಯರು, ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಸರ್ಕಾರಗಳ ವಿರುದ್ಧ ಕಾರ್ಯಕರ್ತರು ಹೋರಾಟ ನಡೆಸಬೇಕು. ಚಳವಳಿ ಮುನ್ನಡೆಸುವ ನಿಷ್ಠಾವಂತ ಕಾರ್ಯಕರ್ತರು, ನಾಯಕರ ಅಗತ್ಯವಿದೆ ಎಂದರು.

ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಕುಟುಂಬ ರಾಜಕಾರಣಕ್ಕೆ ಅಂಟಿಕೊಂಡಿವೆ. ಜಿಲ್ಲೆಯ ಎಲ್ಲ ಬಡವರ ವಸತಿ ಸೌಲಭ್ಯಕ್ಕಾಗಿ ನಿರಂತರ ಹೋರಾಟ ನಡೆಸೋಣ ಎಂದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಜಿ.ಸಿ. ಸುರೇಶ್‌ಬಾಬು, ರಾಜ್ಯ ಮಂಡಳಿ ಸದಸ್ಯ ಸಿ.ವೈ. ಶಿವರುದ್ರಪ್ಪ, ಎಐಟಿಯುಸಿ ರಾಜ್ಯ ಸಮಿತಿ ಉಪಾಧ್ಯಕ್ಷ ಟಿ.ಆರ್. ಉಮಾಪತಿ, ಜಿಲ್ಲಾ ಮಂಡಳಿ ಅಧ್ಯಕ್ಷ ಬಿ. ಬಸವರಾಜ್, ದೊಡ್ಡುಳ್ಳಾರ್ತಿ ಕರಿಯಣ್ಣ, ಇ. ಸತ್ಯಕೀರ್ತಿ ಮತ್ತಿತರರು ಇದ್ದರು. ದಾವಣಗೆರೆ ಇಷ್ಟಾ ಸಂಘಟನೆ ಸದಸ್ಯರು ಕ್ರಾಂತಿ ಗೀತೆಗಳನ್ನು ಹಾಡಿದರು.