ಸಿಪಿಐ ಜಿಲ್ಲಾ ಕಾರ್ಯದರ್ಶಿ ರಾಧ ಸುಂದರೇಶ್  
ಜಿಲ್ಲೆ

ಸಿಪಿಐ ಶತಮಾನೋತ್ಸವ ಆ.7, 8ಕ್ಕೆ

ಚಿಕ್ಕಮಗಳೂರು: ಭಾರತ ಕಮಿನಿಸ್ಟ್ ಪಕ್ಷದ ಶತಮಾನೋತ್ಸವ ಹಾಗೂ ಪ್ರತಿನಿಧಿ ಸಮಾವೇಶವನ್ನು ಆ. 7ಮತ್ತು 8ರಂದು ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಆಯೋಜಿಸಲಾಗಿದೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ರಾಧ ಸುಂದರೇಶ್ ತಿಳಿಸಿದರು.

ನಗರದ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಪಿಐ ಶತಮಾನೋತ್ಸವದ ಅಂಗವಾಗಿ ಆ. 7ರಂದು ಬೆಳಗ್ಗೆ 11:00 ಗಂಟೆಗೆ ಭಾರತ ಕಮ್ಯುನಿಸ್ಟ್ ಪಕ್ಷದ ಕಚೇರಿಯಿಂದ ಅಜಾದ್ ಪಾರ್ಕ್ ವೃತ್ತದವರೆಗೆ ಮೆರವಣಿಗೆ ನಡೆಸಲಾಗುವುದು. ಬಳಿಕ ಅಜಾದ್ ಪಾರ್ಕ್ ನಲ್ಲಿ ಬಹಿರಂಗ ಸಭೆ ನಡೆಸಲಾಗುವುದು ಎಂದು ಹೇಳಿದರು.

ಬಹಿರಂಗ ಸಭೆಯ ಅಧ್ಯಕ್ಷತೆಯನ್ನು ಸಿಪಿಐ ಜಿಲ್ಲಾ ಕಾರ್ಯದರ್ಶಿ ರಾಧ ಸುಂದರೇಶ್ ವಹಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಸಿದ್ದನಗೌಡ ಪಾಟೀಲ್, ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್, ರಾಜ್ಯ ಮುಖಂಡ ಪಿ.ವಿ. ಲೋಕೇಶ್ ಆಗಮಿಸಲಿದ್ದಾರೆ. ಇದಲ್ಲದೆ ಪಕ್ಷದ ಜಿಲ್ಲಾ ಮುಖಂಡರು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.

ಆ. 7ರ ಮಧ್ಯಾಹ್ನದಿಂದ ಆ. 8ರ ಮಧ್ಯಾಹ್ನ 3 ಗಂಟೆವರೆಗೆ ನಗರದ ಅಂಬೇಡ್ಕರ್ ಭವನದಲ್ಲಿ ಪ್ರತಿನಿಧಿ ಸಮಾವೇಶ ನಡೆಯಲಿದೆ. ಈ ಸಮಾವೇಶದ ವಿವಿಧ ಗೋಷ್ಠಿಗಳಲ್ಲಿ ಸುಮಾರು 100 ಜನ ಮುಖಂಡರು ಭಾಗವಹಿಸಲಿದ್ದಾರೆ. ಇಲ್ಲಿ ಜಿಲ್ಲೆಯಲ್ಲಿರುವ ಸಮಸ್ಯೆಗಳು, ಮುಂದೆ ಪಕ್ಷವನ್ನು ಹೇಗೆ ಕಟ್ಟಬೇಕು ಎಂಬ ಬಗ್ಗೆ ಚರ್ಚಿಸಲಾಗುವುದು. ಜೊತೆಗೆ ರಾಜ್ಯ ಮಂಡಳಿ ಅಧಿವೇಶನದಲ್ಲಿ ಭಾಗವಹಿಸಲು ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುವುದು ಎಂದರು.

ಪ್ರತಿನಿಧಿ ಸಮಾವೇಶದಲ್ಲಿ ಸರ್ಕಾರ ಕೂಡಲೇ ಜಿಪಂ ತಾಪಂ ಚುನಾವಣೆ ನಡೆಸುವಂತೆ ಒತ್ತಾಯಿಸುವುದು ಸೇರಿದಂತೆ, ನಿವೇಶನ ರೈತರಿಗೆ ನಿವೇಶನ, ಮನೆ ರೈತರಿಗೆ ಮನೆ, ಸಾರಿಗೆ ಇಲಾಖೆ ನೌಕರರ ಸಮಸ್ಯೆ ಪರಿಹಾರಕ್ಕೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಸಿಪಿಐ ಜಿಲ್ಲಾ ಮಂಡಳಿ ಸದಸ್ಯ ವಸಂತ್ ಕುಮಾರ್, ಪ್ರಮುಖರಾದ ಕೆರೆಮಕ್ಕಿ ರಮೇಶ್ ಮತ್ತಿತರರಿದ್ದರು.