ಸಿಪಿಐ ತಾಲೂಕು ಕಾರ್ಯದರ್ಶಿ ಕೆರೆಮಕ್ಕಿ ರಮೇಶ್  
ಜಿಲ್ಲೆ

ಸಿಪಿಐ ತಾಲೂಕು ಸಮಾವೇಶ ಜೂ. ೧೮ಕ್ಕೆ

ಚಿಕ್ಕಮಗಳೂರು: ಭಾರತ ಕಮ್ಯುನಿಸ್ಟ್ ಪಕ್ಷದ ಚಿಕ್ಕಮಗಳೂರು ತಾಲೂಕು ಸಮಿತಿ ಸಮಾವೇಶವನ್ನು ಜೂ. ೧೮ರಂದು ಸಿಪಿಐ ಕಚೇರಿಯ ಬಿ.ಕೆ.ಸುಂದರೇಶ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಿಪಿಐ ತಾಲೂಕು ಕಾರ್ಯದರ್ಶಿ ಕೆರೆಮಕ್ಕಿ ರಮೇಶ್ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಮ್ಯುನಿಷ್ಟ್ ಪಕ್ಷ ನೂರು ವರ್ಷ ಪೂರೈಸುತ್ತಿದೆ. ಈ ಹಿನ್ನೆಲೆಯಲ್ಲಿ ರಾಷ್ಟö್ರ ಹಾಗೂ ರಾಜ್ಯ ಸಮ್ಮೇಳನಗಳು ನಡೆಯಲಿವೆ. ಅದಕ್ಕಿಂತಲೂ ಮೊದಲು ಪೂರ್ವಭಾವಿಯಾಗಿ ಜಿಲ್ಲಾ ಹಾಗೂ ತಾಲೂಕು ಸಮಾವೇಶ ನಡೆಸಲಾಗುತ್ತಿದೆ ಎಂದು ಹೇಳಿದರು.

ತಾಲೂಕು ಸಮಾವೇಶದಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದಿರುವ ಸಿಪಿಐನ ಶಾಖೆಗಳಿಂದ ಆಯ್ಕೆಗೊಂಡ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ರಾಧಾ ಸುಂದರೇಶ್, ಪ್ರಮುಖರಾದ ಎಚ್.ಎಂ.ರೇಣುಕಾರಾಧ್ಯ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.

ಸಮಾವೇಶದಲ್ಲಿ ದೇಶ ಮತ್ತು ರಾಜ್ಯದ ರಾಜಕೀಯ ಪರಿಸ್ಥಿತಿಯ ಕುರಿತು ವಿಶ್ಲೇಷಿಸಿ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಿರುವ ರಾಜಕೀಯ ನಿಲುವುಗಳ ಬಗ್ಗೆ ಚರ್ಚಿಸಿ ಕಾರ್ಯಕ್ರಮ ರೂಪಿಸಲಾಗುವುದು. ಪ್ರಸ್ತುತ ರಾಜ್ಯ ಕಾಂಗ್ರೆಸ್ ಹಾಗೂ ಕೇಂದ್ರ ಬಿಜೆಪಿ ಸರ್ಕಾರಗಳು ಜನರ ಮೂಲಭೂತ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿವೆ. ಜನಸಾಮನ್ಯರಿಗೆ ಪೂರಕವಾದ ಕಾರ್ಯಕ್ರಮಗಳನ್ನು ಜಾರಿಗೊಳಿಸುವಲ್ಲಿ ವಿಫಲವಾಗಿವೆ. ಹೀಗಾಗಿ ದಿನೇ ದಿನೇ ನಿರುದ್ಯೋಗ, ಬಡತನ ವೃದ್ಧಿಯಾಗುತ್ತಿದೆ. ಈ ಎಲ್ಲ ಸಮಸ್ಯೆಗಳ ಬಗ್ಗೆ ಹೋರಾಟ ರೂಪಿಸುವ ಬಗ್ಗೆ ಸಮಾವೇಶದಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.

ಶ್ರೀಮಂತರ ಪರವಾದ ಧೋರಣೆಗಳನ್ನು ಅನುಸರಿಸುತ್ತಿರುವ ಸರ್ಕಾರಗಳು ಬಡವರಿಗೆ ವಾಸಿಸಲು ನಿವೇಶನ ಮತ್ತು ವಸತಿ ಸೌಲಭ್ಯ ಕಲ್ಪಿಸಲು ನಿರಾಸಕ್ತಿ ತಾಳಿವೆ. ಜೀವನೋಪಾಯಕ್ಕಾಗಿ ಕೃಷಿ ಮಾಡಿಕೊಂಡಿರುವ ಸಣ್ಣ ರೈತರಿಗೆ ಹಾಗೂ ವಸತಿ ರಹಿತರಿಗೆ ಭೂಮಿ, ನಿವೇಶನ ನೀಡದೆ ಇರುವ ಸರ್ಕಾರಗಳು ಶ್ರೀಮಂತರಿಗೆ ಮತ್ತು ಕಾರ್ಪೊರೇಟ್ ಕಂಪನಿಗಳಿಗೆ ಭೂಮಿ ನೀಡಲು ಉತ್ಸುಕವಾಗಿವೆ. ಈ ಬಗ್ಗೆಯೂ ಹೋರಾಟ ರೂಪಿಸಲು ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಸಿಪಿಐ ತಾಲೂಕು ಸಹಕಾರ್ಯದರ್ಶಿ ಕೆರೆಮಕ್ಕಿ ರಮೇಶ್, ನಗರ ಕಾರ್ಯದರ್ಶಿ ರಮೇಶ್, ಜಿಲ್ಲಾ ಮಂಡಳಿ ಸದಸ್ಯ ವಸಂತ್ ಕುಮಾರ್ ಉಪಸ್ಥಿತರಿದ್ದರು.