ಗುಂಡ್ಲುಪೇಟೆ: ಧಾನ್ಯಗಳ ಪರಿಚಯವೇ ಇಲ್ಲದ ಸಂದರ್ಭದಲ್ಲಿ ಉತ್ತರದಿಂದ ಬಂದ ಅಗಸ್ತ್ಯ ಮುನಿಗಳು ದಕ್ಷಿಣ ಭಾರತಕ್ಕೆ ಅದರಲ್ಲೂ ತಮಿಳುನಾಡಿನಲ್ಲಿ ಧಾನ್ಯಗಳನ್ನು ಪರಿಚಯಿಸಿದರು ಎಂದು ಹಿರಿಯ ವಕೀಲ ಶ್ಯಾಮ್‌ಭಟ್ ಹೇಳಿದರು.
ಪಟ್ಟಣದ ಜೆಎಸ್‌ಎಸ್ ಕಲ್ಯಾಣ ಮಂಪಟದಲ್ಲಿ ಚಾಮರಾಜನಗರ ವಿಶ್ವವಿದ್ಯಾಲಯ, ವಿವೇಕ ಸಿರಿ ಸೇವಾ ಸೌಹರ್ದ ಸಹಕಾರ ಸಂಘ ಹಾಗೂ ಜೆಎಸ್‌ಎಸ್ ಕಲಾ ಮತ್ತು ವಾಣಿಜ್ಯ ಕಾಲೇಜು ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ಭಾರತೀಯ ಭಾಷೆಗಳ ಮೂಲಕ ಭಾರತೀಯ ಜ್ಞಾನ ಪರಂಪರೆ, ಸಾಹಿತ್ಯ ಮತ್ತು ವೈದ್ಯ ಪದ್ಧತಿಗೆ ಅಗಸ್ತ್ಯ ಮುನಿಗಳ ಕೊಡುಗೆ’ ಎಂಬ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಆಯುರ್ವೇದ ಮೊದಲಿಗೆ ಅಗಸ್ತ್ಯ ಆಶ್ರಮದಲ್ಲಿ ಹುಟ್ಟಿಕೊಂಡಿತ್ತು. ಇದು ಹಿಮಾಲಯದ ತಪ್ಪಲಲ್ಲಿ ಬೆಳೆಯುವ ವನಸ್ಪತಿಯಿಂದ ತಯಾರಿಸಲಾಗುತ್ತಿತ್ತು. ಆಶ್ರಮದಲ್ಲಿ ಆಯುರ್ವೇದ ಔಷಧ ತಯಾರಿಸುವ ಕೇಂದ್ರವಾಗಿತ್ತು. ಇದನ್ನು ದಕ್ಷಿಣಕ್ಕೆ ತಂದು ಸಿದ್ಧೌಷಧವಾಗಿ ಪರಿಚಯಿಸಿದರು ಎಂದರು.
ವಿವೇಕ ಸಿರಿ ಸೇವಾ ಸೌಹರ್ದ ಸಹಕಾರ ಸಂಘದ ಅಧ್ಯಕ್ಷ ಸ್ವಾಮಿ ಮರಳಾಪುರ ಮಾತನಾಡಿ, ಅಗಸ್ತ್ಯ ಮುನಿಗಳ ನೀಡಿರುವ ಕೊಡುಗೆ ಹಾಗೂ ಕರ್ನಾಟಕ ಮತ್ತು ಅಗಸ್ತ್ಯ ಮುನಿಗಳಿಗೆ ಇರುವ ಸಂಬಂಧವನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವ ಅಗತ್ಯವಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ವಿಚಾರ ಮಂಥನ ಕಾರ್ಯಕ್ರಮ ಇದಾಗಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ಭಾರತೀಯ ಭಾಷಾ ಸಮಿತಿ ಪ್ರಧಾನ ಸಂಯೋಜಕ ಪವನ್‌ಕುಮಾರ್ ಶರ್ಮಾ, ಚಾಮರಾಜನಗರ ವಿ.ವಿ.ಕುಲಪತಿ ಎಂ.ಆರ್. ಗಂಗಾಧರ್, ಕುಲಸಚಿವ ಆರ್. ಲೋಕನಾಥ್, ಪರೀಕ್ಷಾಂಗ ಕುಲಸಚಿವ ವಿ.ಜಿ. ವೆಂಕಟರಮಣ, ಪಿಎಂಇಬಿ ನಿರ್ದೇಶಕ ವಿ.ಜಿ. ಸಿದ್ದರಾಜು, ಜೆಎಸ್‌ಎಸ್ ಕಲಾ, ವಾಣಿಜ್ಯ ಕಾಲೇಜು ಪ್ರಾಂಶುಪಾಲೆ ಪಿ. ಮಹದೇವಮ್ಮ ಹಾಗೂ ವಿದ್ಯಾರ್ಥಿಗಳು ಇದ್ದರು.