ಜಿಲ್ಲೆ

ಸಿದ್ಧಾರ್ಥ ಬಡಾವಣೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ

ಮೈಸೂರು: ನಾಡಹಬ್ಬ ದಸರಾ ಸಮೀಪಿಸುತ್ತಿದ್ದರೂ ನಗರದಲ್ಲಿ ಗುಂಡಿ ಬಿದ್ದಿರುವ ರಸ್ತೆಗಳನ್ನು ಸರಿಪಡಿಸಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಸಿದ್ಧಾರ್ಥ ಬಡಾವಣೆಯಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ಬಹುತೇಕ ರಸ್ತೆಗಳು ಸಂಪೂರ್ಣ ಗುಂಡಿಮಯವಾಗಿದ್ದು ವಾಹನಗಳು ಸಂಚರಿಸಲು ಆಗದಂತಾಗಿದೆ. ರಸ್ತೆ ದುರಸ್ತಿಪಡಿಸುವಂತೆ ಹಲವು ಬಾರಿ ಒತ್ತಾಯಿಸಿದ್ದರೂ ಪ್ರಯೋಜನವಾಗಿಲ್ಲ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಶೇ. 40 ಕಮಿಷನ್ ಆಸೆಗಾಗಿ ಯಾವುದೇ ಕಾಮಗಾರಿ ನಡೆಸುತ್ತಿಲ್ಲ ಎಂದು ದೂರಿದರು.
ಅಭಿವೃದ್ಧಿ ಕಾಮಗಾರಿಯ ಕುರಿತು ಕೇಳಿದರೆ ಭಾವನಾತ್ಮಕ ವಿಷಯ ಮುಂದಿಡುತ್ತಿದ್ದಾರೆ. ಅಭಿವೃದ್ಧಿ ಎಂಬುದನ್ನೇ ಮರೆತು ಕುಳಿತಿದ್ದು, ಕೇವಲ ಮೋದಿ ಜಪದಲ್ಲಿಯೇ ಜನರನ್ನು ದಿಕ್ಕು ತಪ್ಪಿಸಲಾಗುತ್ತಿದೆ. ಕೂಡಲೇ ರಸ್ತೆಗುಂಡಿ ಮುಚ್ಚಿಸಬೇಕು. ಸಾರ್ವಜನಿಕರ ಸಮಸ್ಯೆಗೆ ಮುಕ್ತಿ ನೀಡಬೇಕೆಂದು ಒತ್ತಾಯಿಸಿದರು.
ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಮಾಜಿ ಮೇಯರ್ ಪುಷ್ಪಲತಾ ಜಗನ್ನಾಥ್, ಮಾಜಿ ಉಪಮೇಯರ್ ಸಿ.ಶ್ರೀಧರ್, ಮುಖಂಡರಾದ ಭಾಸ್ಕರ್, ಗೋಪಿನಾಥ್, ಪ್ರತಿಧ್ವನಿ ಪ್ರಸಾದ್, ಸೋಮಶೇಖರ್, ಗುಣಶೇಖರ ಇತರರು ಇದ್ದರು.