ಜಿಲ್ಲೆ

ಸಿದ್ಧಾರೂಢ ಮಠದಲ್ಲಿ ರಾಜ್ಯ ಮಟ್ಟದ ಭಜನಾ ಸ್ಪರ್ಧೆ

ಹುಬ್ಬಳ್ಳಿ: ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಯವರ ಜಯಂತ್ಯುತ್ಸವದ ಅಂಗವಾಗಿ ಮಠದಲ್ಲಿ ಮಾರ್ಚ್ 23ರಿಂದ 28ರವರೆಗೆ ರಾಜ್ಯ ಮಟ್ಟದ ಭಜನಾ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಶ್ರೀ ಸಿದ್ಧಾರೂಢ ಸ್ವಾಮಿ ಮಠ ಟ್ರಸ್ಟ್ ಕಮಿಟಿಯ ಧರ್ಮದರ್ಶಿ ಹಾಗೂ ಭಜನಾ ಸ್ಪರ್ಧೆ ಸಮಿತಿಯ ಅಧ್ಯಕ್ಷ ಶಾಮಾನಂದ ಪೂಜೇರಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು 8ನೇ ವರ್ಷದ ಭಜನಾ ಸ್ಪರ್ಧೆಯಾಗಿದೆ. ವಿವಿಧ ಜಿಲ್ಲೆಗಳಿಂದ 300ಕ್ಕೂ ಹೆಚ್ಚು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಪ್ರತಿ ತಂಡವೂ 18 ನಿಮಿಷಗಳಲ್ಲಿ 3 ಭಜನೆ ಹಾಡಬೇಕು. ಕೈವಲ್ಯ ಸಾಹಿತ್ಯದ ಮೇಲೆ ಎರಡು ಪದ್ಯಗಳನ್ನು ಕಡ್ಡಾಯವಾಗಿ, ಜಗದ್ಗುರು ಶ್ರೀ ಸಿದ್ಧಾರೂಢರ, ದಾಸರ, ಶಿಶುನಾಳ ಶರೀಫ್​ರ ಹಾಗೂ ವಚನ ಸಾಹಿತ್ಯ ಇವುಗಳಲ್ಲಿ ಯಾವುದಾದರೂ ಒಂದು ಪದ್ಯವನ್ನು ಹಾಡಬಹುದು. ಜಾನಪದ ಹಾಗೂ ಸಿನಿಮಾ ಶೈಲಿಯಲ್ಲಿ ಹಾಡುವವರಿಗೆ ಅವಕಾಶ ಇರುವುದಿಲ್ಲ ಎಂದು ವಿವರಿಸಿದರು.

ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿ ತಂಡದಲ್ಲಿ 6ರಿಂದ 10 ಕಲಾವಿದರು ಇರಬೇಕು. ನಿತ್ಯ 25ತಂಡಗಳಿಗೆ ಹಾಡಲು ಅವಕಾಶ ಕಲ್ಪಿಸಲಾಗುವುದು. ಮಾ. 23ರಿಂದ 26ರವರೆಗೆ ಪ್ರಾಥಮಿಕ ಸುತ್ತು, 27ರಂದು ಫೈನಲ್ ಸುತ್ತಿನ ಸ್ಪರ್ಧೆ ನಡೆಯಲಿದೆ. ಸಾಹಿತ್ಯ, ಸಂಗೀತ ಹಾಗೂ ತಾಳ-ಲಯಕ್ಕೆ ತಲಾ 30 ಅಂಕಗಳನ್ನು, ಸಮಯ ಪಾಲನೆಗೆ 10 ಅಂಕಗಳನ್ನು ನಿಗದಿಪಡಿಸಲಾಗಿದೆ. 70ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ಫೈನಲ್​ಗೆ ಆಯ್ಕೆ ಮಾಡಲಾಗುವುದು. ಮಾ. 28ರಂದು ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು.