ಜಿಲ್ಲೆ

ಸಿದ್ಧಾರೂಢ ಮಠದ ಪ್ರಸಾದ ನಿಲಯಕ್ಕೆ ಭೋಗ್ ಪ್ರಮಾಣಪತ್ರ

ಹುಬ್ಬಳ್ಳಿ: ನಗರದ ಶ್ರೀ ಸದ್ಗರು ಸಿದ್ಧಾರೂಢ ಸ್ವಾಮಿ ಮಠದಲ್ಲಿ ನಿತ್ಯ ನಡೆಯುವ ನಿರಂತರ ಮಹಾ ದಾಸೋಹದ ಪ್ರಸಾದ ನಿಲಯಕ್ಕೆ ಕೇಂದ್ರ ಸರ್ಕಾರದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಪ್ರಮಾಣಿಸಿದ ಭೋಗ್ (ಬಿಎಚ್​ಒಜಿ-ದೇವರಿಗೆ ಆನಂದದಾಯಕ ನೈರ್ಮಲ್ಯದ ಅರ್ಪಣೆ) ಪ್ರಮಾಣಪತ್ರ ಲಭಿಸಿದೆ.

ಆಹಾರ ಸುರಕ್ಷತಾ ಅಧಿಕಾರಿ ಸಿ.ಬಿ. ಬೆಂಗೇರಿ ಅವರು ಮಠದ ಟ್ರಸ್ಟ್ ಕಮಿಟಿ ಚೇರ್ಮನ್ ಧರಣೇಂದ್ರ ಜವಳಿ ಅವರಿಗೆ ಪ್ರಮಾಣಪತ್ರವನ್ನು ಗುರುವಾರ ವಿತರಿಸಿದರು. ಗುಣಮಟ್ಟದ ಪ್ರಸಾದ ಹಾಗೂ ಸ್ವಚ್ಛ ಪರಿಸರಕ್ಕಾಗಿ ಈ ಪ್ರಮಾಣಪತ್ರ ನೀಡಲಾಗುತ್ತದೆ. ಉತ್ತರ ಕರ್ನಾಟಕದ ದೇವಸ್ಥಾನ, ಮಠಗಳಲ್ಲಿ ಈ ಪ್ರಮಾಣಪತ್ರ ಪಡೆದ ಮೊದಲ ಮಠವಾಗಿದೆ ಎಂದು ಜವಳಿ ತಿಳಿಸಿದ್ದಾರೆ.

ಉಪಾಧ್ಯಕ್ಷ ಡಾ. ಗೋವಿಂದ ಮಣ್ಣೂರ, ಕಾರ್ಯದರ್ಶಿ ಎಸ್.ವೈ. ಕೋಳಕೂರ, ಧರ್ಮದರ್ಶಿಗಳಾದ ಜಗದೀಶ ಮಗಜಿಕೊಂಡಿ, ಜಿ.ಎಸ್. ನಾಯಕ, ಮಠದ ವ್ಯವಸ್ಥಾಪಕ ಈರಣ್ಣ ತುಪ್ಪದ, ಇತರರು ಇದ್ದರು.