ಕಲಬುರಗಿ: ಚಿಂಚೋಳಿಯಲ್ಲಿನ ಸಿದ್ಧಸಿರಿ ಎಥೆನಾಲ್ ಕಾರ್ಖಾನೆ ಆರಂಭವಾಗದಿದ್ದರೆ ಕಾರ್ಖಾನೆ ನಂಬಿ ಕಬ್ಬು ಬೆಳೆದಿರುವ ಸಾವಿರಾರು ರೈತರು, ಅಲ್ಲಿನ ಉದ್ಯೋಗಿಗಳು ಸಂಕಷ್ಟಕ್ಕೆ ಸಿಲುಕಲಿದ್ದು, ತಾಲೂಕಿನಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತವೆ ಎಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಜಗದೀಶ ಪಾಟೀಲ್ ರಾಜಾಪುರ ಕಳವಳ ವ್ಯಕ್ತಪಡಿಸಿದರು.
೨೦ ವರ್ಷದಿಂದ ನೆನೆಗುದಿಗೆ ಬಿದ್ದಿರುವ ಕಾರ್ಖಾನೆಯನ್ನು ನಿರಂತರ ಹೋರಾಟದಿಂದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಕಾರ್ಖಾನೆ ಆರಂಭಿಸಿದ್ದಾರೆ. ಆದರೆ ಕಳೆದ ವರ್ಷ ಪರಿಸರ ಹಾನಿ ನೆಪದಲ್ಲಿ ಬಂದ್ ಮಾಡಿದ್ದು, ಅರ್ಧ ಕಬ್ಬು ಕಡಿಮೆ ದರದಲ್ಲಿ ಮಾರಾಟ ಮಾಡಲಾಗಿತ್ತು. ಇದೀಗ ಕಾರ್ಖಾನೆ ನಂಬಿದ ರೈತರು ಕಂಗಾಲಾಗಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾರ್ಖಾನೆ ಆರಂಭಕ್ಕೆ ಹೈಕೋರ್ಟ್ ಆದೇಶಿಸಿದ್ದರೂ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸುಪ್ರೀಂ ಕೋರ್ಟ್ಗೆ ಹೋಗಿ ತಪ್ಪು ಮಾಡಿದೆ. ಜಿಲ್ಲೆಯಲ್ಲಿನ ಸಿಮೆಂಟ್ ಫ್ಯಾಕ್ಟರಿಗಳಿಂದ ಸುತ್ತಲಿನ ಹತ್ತಾರು ಹಳ್ಳಿಗಳು ಧೂಳುಮಯ ಆಗಿವೆ. ಅದರ ಬಗ್ಗೆ ಮಾತನಾಡುವವರಿಲ್ಲ. ನಿಯಮ ಉಲ್ಲಂಘನೆ ಆಗಿದ್ದರೆ ದಂಡ ವಸೂಲಿ ಮಾಡಲಿ, ನಿಯಮಬದ್ಧ ಕ್ರಮಕ್ಕೆ ನಿರ್ದೇಶನ ನೀಡಲಿ. ಅದನ್ನು ಬಿಟ್ಟು ಬಂದ್ ಮಾಡಿದರೆ ರೈತರು ಎತ್ತ ಹೋಗಬೇಕು ಎಂದು ಪ್ರಶ್ನಿಸಿದರು.
ಚಿಂಚೋಳಿ ರೈತ ಹಿತರಕ್ಷಣಾ ಸಂಘದ ಅಧ್ಯಕ್ಷ ಶಿವಶರಣಪ್ಪ ಜಾಪಟ್ಟಿ, ಶಾಂತವೀರ ಹೆಬ್ಬಾಳ, ಶಾಂತವೀರ ದಸ್ತಾಪುರ, ಶರಣು ಬಿಲ್ಲಾಡ, ನಾಗೀಂದ್ರ ದೇಶಮುಖ. ಶರಣಬಸಪ್ಪ ರಟಕಲ್, ಕರಬಸಪ್ಪ ಹರಸೂರ, ಚಂದ್ರಕಾAತ ಸೂಗೂರ ಇತರರಿದ್ದರು.