ಜಿಲ್ಲೆ

ಸಿದ್ಧರಾಮೇಶ್ವರರ ರಥೋತ್ಸವಕ್ಕೆ ಭಕ್ತಿಯ ನೆರಳು - ಕಳೆ ತಂದಿತ್ತ ಕಲಾತಂಡಗಳು - ನಾನಾ ಮಠಾಧೀಶರ ಸಮ್ಮುಖ

ದಾವಣಗೆರೆ: ಶ್ರೀಶೈಲ ಮಠದ ಗಜರಾಜನ ಸಾರಥ್ಯ, ಕಲಾ ತಂಡಗಳ ಹಿಮ್ಮೇಳ, ವಿವಿಧ ಮಠಾಧೀಶರ ಸಮ್ಮುಖ, ಕುಂಭ ಹೊತ್ತು ಹೆಜ್ಜೆಯಿಟ್ಟ ಮಹಿಳೆಯರ ಸಾಲು, ಬಿಸಿಲಲ್ಲೂ ಭಕ್ತಿಯ ನೆರಳು..

ದಾವಣಗೆರೆಯಲ್ಲಿ ಸೋಮವಾರ ಜರುಗಿದ ಶಿವಯೋಗಿ ಸಿದ್ಧರಾಮೇಶ್ವರದೇವರ 61ನೆಯ ರಥೋತ್ಸವದಲ್ಲಿ ಕಂಡುಬಂದ ಚಿತ್ರಣಗಳಿವು.

ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ನೇತೃತ್ವದ ರಥೋತ್ಸವದಲ್ಲಿ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿಗಳ ಭಾವಚಿತ್ರ, ಅಲಂಕೃತ ವಾಹನಗಳಲ್ಲಿ ಮಹಾಪುರುಷರ ಚಿತ್ರಪಟಗಳು ರಾರಾಜಿಸಿದವು. ವಿವಿಧ ಸಮಾಜದ ಭಕ್ತರು, ಮುಖಂಡರು ಭಾಗಿಯಾಗಿ ಭಕ್ತಿ ಸಮರ್ಪಿಸಿದರು.

ಕಾವಿಧಾರಿಗಳ ಸಮಾಗಮ:

ಕುಂಚಿಟಿಗ ಮಹಾಸಂಸ್ಥಾನದ ಶ್ರೀ ಶಾಂತವೀರ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಚಿತ್ರದುರ್ಗ ಮುರುಘಾಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ, ರೇಣುಕಾನಂದ ಸ್ವಾಮೀಜಿ, ಬಸವಪ್ರಸಾದ ಸ್ವಾಮೀಜಿ, ತಂಗಡಗಿಯ ಶ್ರೀ ಅನ್ನದಾನಿ ಭಾರತೀ ಅಪ್ಪಣ್ಣ ಸಾಮೀಜಿ, ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ, ಇಮ್ಮಡಿ ಬಸವಪ್ರಭು ಕೇತೇಶ್ವರ ಸ್ವಾಮೀಜಿ, ಹಾವೇರಿಯ ಬಸವ ಶಾಂತಲಿಂಗ ಸ್ವಾಮೀಜಿ, ಸಿದ್ಧ ಬಸವ ಕಬೀರ ಸ್ವಾಮೀಜಿ, ಮರುಳಶಂಕರ ಸ್ವಾಮೀಜಿ, ಜಯದೇವ ಸ್ವಾಮೀಜಿ, ಬಸವ ಮಹಾಲಿಂಗ ಸ್ವಾಮೀಜಿ, ಶಿಕಾರಿಪುರದ ಚನ್ನಬಸವ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಸರ್ದಾರ್ ಸೇವಾಲಾಲ್ ಸ್ವಾಮೀಜಿ ಭಾಗಿಯಾಗಿದ್ದರು.

ಸದ್ದು ಮಾಡಿದ ಕಲಾವಿದರು:

ರಥೋತ್ಸವದಲ್ಲಿ 24 ತಂಡಗಳ ಸದ್ದೇ ಹೆಚ್ಚಿತ್ತು. ಉಡುಪಿಯ ಚಂಡೆ, ಮೈಸೂರಿನ ಕಂಸಾಳೆ, ಬಾಗಲಕೋಟೆಯ ಕರಡಿಮಜಲು, ಶಿವಮೊಗ್ಗದ ಮಹಿಳಾ ಡೊಳ್ಳು, ಬಳ್ಳಾರಿಯ ಮರಗಾಲು ಕುಣಿತ, ಹುಬ್ಬಳ್ಳಿಯ ಜಗ್ಗಲಿಗೆ, ಚಾಮರಾಜನಗರದ ಗೊರವರ ಕುಣಿತ, ಚಿತ್ರದುರ್ಗದ ಗಾರುಡಿಗೊಂಬೆ, ಮಂಡ್ಯದ ಪೂಜಾ ಕುಣಿತ, ಹರಪನಹಳ್ಳಿಯ ಹಗಲುವೇಷ ಹಾಗೂ ಚಿಲಿಪಿಲಿ ಗೊಂಬೆ, ಚಳ್ಳಕೆರೆಯ ನಂದಿಧ್ವಜ, ದಾವಣಗೆರೆಯ ನಾಸಿಕ್ ಡೋಲು, ಜಗಳೂರಿನ ಕರಡಿಮಜಲು, ನಲ್ಕುದುರೆ ಹಾಗೂ ಬಿದರಕೆರೆಯ ಕಹಳೆ, ಹರಿಹರದ ಪುರವಂತಿಕೆ, ಬನ್ನಿಕೋಡಿನ ಪುರುಷರ ಡೊಳ್ಳು ತಂಡಗಳು ರಥೋತ್ಸವಕ್ಕೆ ಕಳೆ ತಂದುಕೊಟ್ಟವು. ರಥೋತ್ಸವ ನಗರದ ಹಳೆ ಭಾಗದಲ್ಲಿ ಸಂಚರಿಸಿತು. ಮಾರ್ಗಮಧ್ಯೆ ಶಾಸಕ ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಇತರರು ದರ್ಶನ ಪಡೆದರು.