ಚನ್ನರಾಯಪಟ್ಟಣ: ಆಷಾಢ ಮಾಸದ ಅಷ್ಟಾನಿಕ ಪರ್ವದ ನಿಮಿತ್ತ ಶ್ರವಣಬೆಳಗೊಳದ ಜೈನ ಮಠದ ಚಾವುಂಡರಾಯ ಸಭಾ ಮಂಟಪದಲ್ಲಿ ಸ್ವಸ್ತಿ ಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಸೋಮವಾರ ಸಿದ್ಧಚಕ್ರ ಮಹಾಮಂಡಲ ಆರಾಧನಾ ಮಹೋತ್ಸವ ನಡೆಯಿತು.
ಬೆಳಗ್ಗೆ 24 ತೀರ್ಥಂಕರರಿಗೆ ಅಭಿಷೇಕ ಹಾಗೂ ಧ್ವಜಾರೋಹಣದೊಂದಿಗೆ ಧಾರ್ಮಿ ವಿಧಿವಿಧಾನ ಆರಂಭವಾಯಿತು. ಮಧ್ಯಾಹ್ನ ಸಿದ್ಧಚಕ್ರ ಮಹಾಮಂಡಲ ರಚಿಸಿ ರಜತ ಪೀಠದಲ್ಲಿ ಚತುರ್ಮಖ ಜಿನಬಿಂಬ, ತ್ರಿಮೇಕಲ ಸಿದ್ಧಪರಮೇಷ್ಠಿಗಳ ಮೂರ್ತಿಯನ್ನು ಸ್ಥಾಪಿಸಿ ಆರಾಧನೆ ನೆರವೇರಿಸಲಾಯಿತು.
ಯುಗಲ ಮುನಿ ಶ್ರೀ ಅಮೋಘಕೀರ್ತಿ ಮಹಾರಾಜರು, ಶ್ರೀ ಅಮರಕೀರ್ತಿ ಮಹಾರಾಜರು, ಶ್ರೀ ಪಾವನಕೀರ್ತಿ ಮಹಾರಾಜರು, ಶ್ರೀ ನಿರ್ಧೋಷಸಾಗರ ಮಹಾರಾಜರು ಮಹಾಮಂಡಲ ಆರಾಧನೆಯ ಸಾನ್ನಿಧ್ಯ ವಹಿಸಿದ್ದರು. ಗಣನಿ ಆರ್ಯಿಕಾ ಕೀರ್ತಿಮತಿ ಮಾತಾಜಿ ಹಾಗೂ ಸಂಘ, ಆರ್ಯಿಕಾ ಶಿವಮತಿ ಮಾತಾಜಿ, ಆರ್ಯಿಕಾ ನಿರ್ಮಲಮತಿ ಮಾತಾಜಿ ಉಪಸ್ಥಿತರಿದ್ದರು.
ಎಸ್.ಪಿ.ನಂದಕುಮಾರ್ ಶಾಸ್ತ್ರಿ ಹಾಗೂ ಪ್ರತಿಷ್ಠಾಚಾರ್ಯ ಎಸ್.ಪಿ.ಜಿನೇಶ್‌ಕುಮಾರ್ ಪೂಜಾ ಕಾರ್ಯದ ನೇತೃತ್ವ ವಹಿಸಿದ್ದರು. 8 ದಿನಗಳು ಜರುಗುವ ಆರಾಧನೆಯ ಮೊದಲ ದಿನ 8 ಅರ್ಘ್ಯ ಸಮರ್ಪಣೆ ಮಾಡಲಾಯಿತು. ಆರಾಧನೆಯಲ್ಲಿ 100 ಋತ್ವಿಕರು ಪಾಲ್ಗೊಂಡಿದ್ದರು. ಹೊರನಾಡಿನ ಜಯಶ್ರೀ ಮತ್ತು ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.