ಜಿಲ್ಲೆ

ಸಿದ್ದು ಸಿಎಂ ಸ್ಥಾನದ ಮೇಲೆ ಕಾಂಗ್ರೆಸ್ ಮುಂದಿನ ಭವಿಷ್ಯ

ಬಾಗಲಕೋಟೆ: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಸ್ಥಾನ ಏನಾಗುತ್ತದೆ ಎನ್ನುವುದರ ಮೇಲೆ ಕಾಂಗ್ರೆಸ್ ಮುಂದಿನ ಭವಿಷ್ಯ ನಿಂತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಕಡೆಗೂ ಬಣ ರಾಜಕೀಯ ನಡೆಯುತ್ತಿದ್ದು, ರಥಸಪ್ತಮಿ ದಿನಿಂದ ರಾಜಕೀಯದಲ್ಲಿ ಬದಲಾವಣೆ ಆಗುತ್ತದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ರಾಜ್ಯ ರಾಜಕೀಯದ ವಿಶ್ಲೇಷಣೆ ಮಾಡಿದರು.

ಬಾಗಲಕೋಟೆಯಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಈಶ್ವರಪ್ಪ, ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಯಾವಾಗ ರಾಜೀನಾಮೆ ಕೊಡುತ್ತಾರೆ ಎಂದು ಕಾಯುತ್ತಿದ್ದಾರೆ. ಸಿದ್ದರಾಮಯ್ಯ ಬೆನ್ನಿಗೆ ನಾವು ಇದ್ದೇವೆ ಎಂದು ಸುಮ್ಮನೆ ಹೇಳುತ್ತಿದ್ದಾರೆ. ಸಿಎಂ ಬೆಂಬಲಕ್ಕೆ ಯಾರೆಲ್ಲ ನಿಂತಿದ್ದಾರೋ ಅವರೆಲ್ಲ ಸಿಎಂ ಕುರ್ಚಿಗೆ ಟಾವಲ್ ಹಾಕಿದ್ದಾರೆ ಎಂದು ಲೇವಡಿ ಮಾಡಿದರು.

ಸಿದ್ದರಾಮಯ್ಯ ಅವರ ಭವಿಷ್ಯದ ಮೇಲೆ ಕಾಂಗ್ರೆಸ್ ಭವಿಷ್ಯವೂ ನಿರ್ಧಾರವಾಗುತ್ತದೆ. ಕಾಂಗ್ರೆಸ್‌ನಲ್ಲಿ ಮೂರು ಬಣಗಳು ಆಗುತ್ತವೆಯೋ ಅಥವಾ ಮೂರು ಪಕ್ಷಗಳು ಆಗುತ್ತದೆಯೋ? ಕಾಂಗ್ರೆಸ್ ಪಕ್ಷವನ್ನು ತಪಸ್ಸು ಮಾಡಿ ಕಟ್ಟಿದ್ದಲ್ಲ. ಇದರಿಂದ ದೇಶದಲ್ಲಿ ಹತ್ತಾರು ಕಾಂಗ್ರೆಸ್ ಪಕ್ಷಗಳು ಆಗಿವೆ. ರಾಜ್ಯದಲ್ಲೂ ಕಾಂಗ್ರೆಸ್ ಸರ್ಕಾರ ಬಹಳ ದಿನ ಇರಲ್ಲ. ಮುಂದೆ ಯಾವ ಪಕ್ಷ ಅಽಕಾರಕ್ಕೆ ಬರುತ್ತದೆಯೋ ಗೊತ್ತಿಲ್ಲ ಎಂದರು.

ಇನ್ನು ಬಿಜೆಪಿ ಗುಂಪುಗಾರಿಕೆ ಬಗ್ಗೆ ಮಾತನಾಡಿದ ಈಶ್ವರಪ್ಪ, ಗುಂಪುಗಾರಿಕೆ ಮಾಡುತ್ತಿರುವವರು ಯಾರು ಬಿಜೆಪಿ ಕಟ್ಟಿದವರಲ್ಲ. ಹಿರಿಯರು ತಪಸ್ಸು ಮಾಡಿ ಪಕ್ಷ ಕಟ್ಟಿದ್ದಾರೆ. ಹೀಗಾಗಿ ಈಗ ಅಧಿಕಾರಕ್ಕಾಗಿ ನಡೆದಿರುವ ಗುಂಪುಗಾರಿಕೆಯನ್ನು ಪಕ್ಷದ ಹಿರಿಯರು ತಡೆಯುತ್ತಾರೆ. ಈಗ ಪಕ್ಷದಲ್ಲಿ ಇರುವ ಗುಂಪುಗಾರಿಕೆ ಸರಿ ಆಗಬೇಕು. ಬಿಜೆಪಿಯಲ್ಲಿ ಗುಂಪುಗಾರಿಕೆ ನಡೆಯಲ್ಲ. ಇದನ್ನು ಚಿವುಟಿ ಹಾಕುತ್ತಾರೆ ಎಂದು ಹೇಳಿದರು.

ಬಿಎಸ್‌ವೈ ಹುಟ್ಟಿದಬ್ಬದ ಅಂಗವಾಗಿ ಸಮಾವೇಶ ನಡೆಸುತ್ತಿರುವುದು ಶಕ್ತಿ ಪ್ರದರ್ಶನವಲ್ಲ. ಅದು ಗುಂಪುಗಾರಿಕೆ ಪ್ರದರ್ಶನವಷ್ಟೆ. ಬಿಎಸ್‌ವೈ ಅವರದ್ದು ಪ್ರತಿ ವರ್ಷ ಹುಟ್ಟಿದ ಹಬ್ಬ ಇರುತ್ತದೆ. ಹಿಂದೆ ಯಾಕೆ ಈ ರೀತಿ ಸಮಾವೇಶ ಮಾಡಿರಲಿಲ್ಲ. ರೇಣುಕಾಚಾರ್ಯ ಅವರ ಗುಂಪು ಸಮಾವೇಶ ಮಾಡುತ್ತಿದೆ. ಇದಕ್ಕೆ ಬಿಎಸ್‌ವೈ ಒಪ್ಪಿಗೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಗುಂಪುಗಾರಿಕೆ ಆಗಲು ಯಡಿಯೂರಪ್ಪ ಒಪ್ಪಿಗೆ ಕೊಡುತ್ತಾರೆ ಎಂದು ನನಗೆ ಅನ್ನಿಸಲ್ಲ ಎಂದರು.