ಜಿಲ್ಲೆ

ಸಿದ್ದು ಸಿಎಂ ಆಗಬೇಕೆಂಬುದು ಹಿಂದುಳಿದವರ ಬೇಡಿಕೆ

ಲಲಾಟಾಕ್ಷ ಎಸ್

ಬೇಲೂರು: ರಾಜ್ಯದಲ್ಲಿ ಅಭಿವೃದ್ಧಿ ಹಾಗೂ ಬಡತನ ನಿರ್ನಾಮಕ್ಕೆ ಸಿದ್ದರಾಮಯ್ಯ ಅವರ ಅಗತ್ಯವಿದ್ದು ಅವರನ್ನೇ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಬೇಕು ಎಂಬುದು 22 ಹಿಂದುಳಿದ ಜಾತಿಗಳ ಬೇಡಿಕೆಯಾಗಿದೆ ಎಂದು ಕೆಪಿಸಿಸಿ ಸದಸ್ಯ ಬಿಎಲ್ ಧರ್ಮೇಗೌಡ ಹೇಳಿದರು.


ಕಾಂಗ್ರೆಸ್‌ಗೆ ಹೆಚ್ಚಿನ ಸೀಟು ಬರಲು ಕುರುಬರು ಕಾರಣ. ಸಿದ್ದರಾಮಯ್ಯ ಸಿಎಂ ಆಗಲಿದ್ದು, ಅದಕ್ಕಾಗಿ ಕಾಂಗ್ರೆಸ್‌ಗೆ ಮತ ಹಾಕಬೇಕು ಎಂದು ಮನವಿ ಮಾಡಿದ್ದೆವು. ಟಿಕೆಟ್ ಸಿಗದಿದ್ದಾಗ ಬಂಡಾಯವೆದ್ದ ಕುರುಬ ಅಭ್ಯರ್ಥಿಗಳನ್ನು ಹಿಂದೆ ಸರಿಯುವಂತೆ ಮಾಡಲಾಯಿತು. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರಿಗೆ ಸಿಎಂ ಸ್ಥಾನ ನೀಡಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.


ಸಿದ್ದರಾಮಯ್ಯ ಅವರ ಅಹಿಂದ ಹೋರಾಟದಿಂದಾಗಿ ವಿರೋಧ ಪಕ್ಷಗಳು ಧೂಳಿಪಟವಾಗಿವೆ. ಅಲ್ಲದೆ, 101 ಸ್ಥಾನಗಳಲ್ಲಿ ಅಹಿಂದ ಅಭ್ಯರ್ಥಿಗಳು ಗೆದ್ದಿರುವುದು ಈ ಬಾರಿಯ ವಿಶೇಷವಾಗಿದ್ದು, ಇದರ ಹಿಂದೆ ಸಿದ್ದರಾಮಯ್ಯನವರ ಪರಿಶ್ರಮವಿದೆ. ಅವರು ಉತ್ತಮ ಆರ್ಥಿಕ ತಜ್ಞರಾಗಿದ್ದು, ಉತ್ತಮ ಬಜೆಟ್ ಮಂಡಿಸಿದ್ದಾರೆ ಎಂದರು.


ಕುರುಬ ಸಮುದಾಯದ ಶೇ.80ರಷ್ಟು ಜನರು ಈ ಬಾರಿ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ಯಾವುದೇ ಭ್ರಷ್ಟಚಾರವಿಲ್ಲದೆ ಕಳಂಕ ರಹಿತವಾಗಿ ಸರ್ವರಿಗೂ ಸಮಪಾಲು ಎಂಬ ಸೂತ್ರದಡಿ ರಾಜ್ಯ ಆಳಿದ ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಗೆ ಅರ್ಹ ವ್ಯಕ್ತಿ. ಈ ಬಾರಿ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಒಗ್ಗಟ್ಟಿನ ಕೊರತೆಯಿಂದಾಗಿ ಶಿವರಾಂ ಅವರು ಸೋಲು ಕಾಣಬೇಕಾಯಿತು ಹೇಳಿದರು.


ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ವಲಯದ ಉಪಾಧ್ಯಕ್ಷ. ಜಾಕಿರ್ ಪಾಷಾ, ಪಕ್ಷದ ತಾಲೂಕು ಅಸಂಘಟಿತ ಕಾರ್ಮಿಕ ಉಪಾಧ್ಯಕ್ಷೆ ಖುರ್ಷೀದ್, ತಿಗಳ ಸಮಾಜದ ಕಾರ್ಯದರ್ಶಿ ಸಿದ್ದೇಶ್ ಸುದ್ದಿಗೋಷ್ಠಿಯಲ್ಲಿದ್ದರು.