ಶಿಕಾರಿಪುರ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಸಿ.ಟಿ.ರವಿ ಬಹಿರಂಗವಾಗಿ ಕೂಡಲೇ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿ ತಾಲೂಕು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಬಸ್ ನಿಲ್ದಾಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಲೂಟಿ ರವಿ ಎಂದು ಪ್ರತಿಭಟನಾಕಾರರು ಧಿಕ್ಕಾರ ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ್ ಮಾತನಾಡಿ, ಸಿ.ಟಿ.ರವಿ ಮಾತನಾಡುವಾಗ ನಾಲಗೆಯ ಮೇಲೆ ಹಿಡಿತವಿರಬೇಕು. ಸಿದ್ದರಾಮಯ್ಯ ಹಿರಿಯರು ಮತ್ತು ಮಾಜಿ ಮುಖ್ಯಮಂತ್ರಿಗಳು. ಆರೋಪ ಮಾಡಿದರೆ ತಪ್ಪಲ್ಲ. ಆದರೆ, ವ್ಯಕ್ತಿಗತವಾಗಿ ಚಾರಿತ್ರೃ ವಧೆ ಮಾಡುವುದು ಸರಿಯಲ್ಲ. ನಾವು ಬಳಸುವ ಭಾಷೆ ಕೀಳುಮಟ್ಟದ್ದಾಗದಂತೆ ಎಚ್ಚರಿಕೆ ವಹಿಸಬೇಕು. ಪರಸ್ಪರ ಮಾತಿನ ಆರೋಪ ಪ್ರತ್ಯಾರೋಪಗಳು ಸದಭಿರುಚಿಯಲ್ಲಿರಬೇಕು ಎಂದರು.
ಸಿ.ಟಿ.ರವಿ ಹೇಳಿಕೆಯನ್ನು ಪ್ರಬಲವಾಗಿ ವಿರೋಧಿಸುತ್ತೇವೆ. ಉನ್ನತ ಸ್ಥಾನದಲ್ಲಿದ್ದೂ ಇಂತಹ ಮಟ್ಟಕ್ಕೆ ಇಳಿದಿರುವುದು ಸರಿಯಲ್ಲ ಎಂದು ಟೀಕಿಸಿದರು.