ಜಿಲ್ಲೆ

ಸಿದ್ದು, ಡಿಕೆಶಿ ದೊಡ್ಡ ಜಾತಿವಾದಿಗಳು: ಕೆ.ಎಸ್.ಈಶ್ವರಪ್ಪ ಕಿಡಿ

ಶಿವಮೊಗ್ಗ: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಬ್ಬರೂ ದೊಡ್ಡ ಜಾತಿವಾದಿಗಳು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಕಿತ್ತಾಟ ನಡೆಯುತ್ತಿದೆ. ಡಿಕೆಶಿ ಒಕ್ಕಲಿಗ ಸಮುದಾಯದ ಹೆಸರಲ್ಲಿ ಸಿಎಂ ಆಗಲು ಜಾತಿ ಬಳಕೆ ಮಾಡಿಕೊಂಡರೆ, ಇತ್ತ ಸಿದ್ದರಾಮಯ್ಯ ಕುರುಬ ಸಮಾಜದ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

ಇಬ್ಬರೂ ದೊಡ್ಡ ಜಾತಿವಾದಿಗಳು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮಾತ್ರವಲ್ಲದೆ, ಇದೀಗ ಜಮೀರ್ ಅಹಮ್ಮದ್, ಎಂ.ಬಿ.ಪಾಟೀಲ್ ಕೂಡ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಜಮೀರ್ ಅವರು ಸ್ವಾಮೀಜಿಗಳಿಂದ ಸಿಎಂ ಆಕಾಂಕ್ಷಿ ಎಂದು ಹೇಳಿಸುವುದು ದೊಡ್ಡ ವಿಷಯವಲ್ಲ ಎಂದರು.

ಬೆಳಗಾವಿ ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಕೇಸ್‌ನಲ್ಲಿ ಪೊಲೀಸರು ಈಗಾಗಲೇ ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಸಚಿವ ಸಂಪುಟಕ್ಕೆ ತಮ್ಮ ಸೇರ್ಪಡೆ ಮಾಡುವುದು ಸಿಎಂ ಮತ್ತು ವರಿಷ್ಠರಿಗೆ ಬಿಟ್ಟ ವಿಚಾರ. ಪಕ್ಷದ ಕಾರ್ಯಕರ್ತನಾಗಿ ಯಾವುದೇ ನಿರ್ಧಾರಕ್ಕೂ ನಾನು ಬದ್ಧನಿದ್ದೇನೆ ಎಂದು ಹೇಳಿದರು.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಚುನಾವಣೆ ನಿವೃತ್ತಿ ಘೋಷಣೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಯಡಿಯೂರಪ್ಪ ಅವರು ಅನುಭವಿ ಮತ್ತು ನನಗಿಂತ ಹಿರಿಯರು. ಅವರು ಆಲೋಚನೆ ಮಾಡಿಯೇ ನಿರ್ಧಾರ ಕೈಗೊಂಡಿದ್ದಾರೆ. ಪುತ್ರ ಬಿ.ವೈ.ವಿಜಯೇಂದ್ರಗೆ ಪಕ್ಷದ ವರಿಷ್ಠರು ಟಿಕೆಟ್ ನೀಡುತ್ತಾರೆ ಎನ್ನುವ ವಿಶ್ವಾಸದಲ್ಲಿ ಹೇಳಿಕೆ ನೀಡಿರಬಹುದು. ಆದರೆ ಪಕ್ಷದ ವರಿಷ್ಠರು ಟಿಕೆಟ್ ವಿಚಾರವಾಗಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಈ ಬೆಳವಣಿಗೆ ನಂತರ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದ್ದರೂ ಅದನ್ನು ಸರಿಪಡಿಸುವ ಶಕ್ತಿ ಪಕ್ಷಕ್ಕೆ ಇದೆ ಎಂದು ಹೇಳಿದರು.