ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಾದಾಮಿ ಕ್ಷೇತ್ರಕ್ಕೆ ಸೋಮವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ದಿಢೀರ ಭೇಟಿ ನೀಡಿ ಹೋಗಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಕಿತ್ತೂರ ಕಾರ್ಯಕ್ರಮಕ್ಕೆ ಆಗಮಿಸಿದ್ದ ಡಿಕೆಶಿ, ಬೆಳಗಾವಿ ವಿಮಾನ ನಿಲ್ದಾಣದಿಂದ ನೇರವಾಗಿ ರಸ್ತೆ ಮಾರ್ಗವಾಗಿ ಬಾದಾಮಿ ತಾಲೂಕಿನ ಕೆರೂರ ಪಟ್ಟಣಕ್ಕೆ ಆಗಮಿಸಿದ್ದರು. ಆದರೆ, ಈ ಬಗ್ಗೆ ಯಾರಿಗೂ ಮಾಹಿತಿ ನೀಡಿರಲಿಲ್ಲ. ಸ್ವತಃ ತಮ್ಮ ಬೆಂಬಲಿಗರು, ಕಾಂಗ್ರೆಸ್ ಮುಖಂಡರಿಗೂ ಈ ಬಗ್ಗೆ ಸುಳಿವು ಬಿಟ್ಟಿಲ್ಲ. ಗೌಪ್ಯವಾಗಿಯೇ ಬಂದು ಹೋಗಿರುವುದು ಯಾಕಾಗಿ ಎನ್ನುವುದು ನಿಗೂಢವಾಗಿದೆ.
ಕೆರೂರ ಬಸ್ ನಿಲ್ದಾಣದಲ್ಲಿ ಕೆಲ ಯುವಕರ ಜೊತೆ ವಾಹನದಲ್ಲಿ ಕುಳಿತು ಮಾತನಾಡುತ್ತಿರುವ ಪೋಟೋ ಲಭ್ಯವಾಗಿದ್ದು, ಉಳಿದಂತೆ ಡಿಕೆಶಿ ಆಗಮನ ಯಾಕಾಗಿ ಎನ್ನುವುದು ಗೌಪ್ಯವಾಗಿಯೇ ಉಳಿದಿದೆ. ತಮ್ಮ ಖಾಸಗಿ ವ್ಯವಹಾರಕ್ಕಾಗಿ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಕೆರೂರ ಮಾರ್ಗದಲ್ಲಿ ಜಮೀನು ನೋಡಿಕೊಂಡು ಹೋಗಿದ್ದಾರೆ ಎನ್ನಲಾಗುತ್ತಿದೆ. ಕೆರೂರ ಪಟ್ಟಣದಿಂದ ಕಿತ್ತೂರಗೆ ಹೋಗಿದ್ದಾರೆ. ಪೊಲೀಸರಿಗೂ ಸಹ ಈ ಮಾಹಿತಿ ಇರಲಿಲ್ಲ ಎಂದು ತಿಳಿದು ಬಂದಿದೆ.