ಜಿಲ್ಲೆ

ಸಿದ್ದಿಸದ ವಿಶೇಷ ಕ್ರೀಡಾ ವಲಯ

ಸುಭಾಸ ಧೂಪದಹೊಂಡ ಕಾರವಾರ

ಸಿದ್ದಿ ಜನಾಂಗದ ಕ್ರೀಡಾಪಟುಗಳ ಪೋ›ತ್ಸಾಹಕ್ಕಾಗಿ ಜಿಲ್ಲೆಯ ದಾಂಡೇಲಿಯಲ್ಲಿ ಕೇಂದ್ರ ಸರ್ಕಾರ ನಿರ್ವಿುಸಲು ಯೋಜಿಸಿದ್ದ ವಿಶೇಷ ಕ್ರೀಡಾ ತರಬೇತಿ ವಲಯ (ಎಸ್​ಎಜಿ) ಯೋಜನೆ ನನೆಗುದಿಗೆ ಬಿದ್ದಿದೆ.

ಭಾರತೀಯ ಕ್ರೀಡಾ ಪ್ರಾಧಿಕಾರದಿಂದ (ಎಸ್​ಎಐ) ದಾಂಡೇಲಿ ಸೇರಿ ದೇಶದ ಎಂಟು ಸ್ಥಳಗಳಲ್ಲಿ ವಿಶೇಷ ವಲಯ ನಿರ್ಮಾಣ ಮಾಡುವುದಾಗಿ ಆಗಿನ ಕೇಂದ್ರ ಕ್ರೀಡಾ ಮತ್ತು ಯುವಜನ ಸೇವಾ ಸಚಿವ ಸಬ್ರಾನಂದ ಸೋನೋವಾಲ್ 2016ರ ಮಾರ್ಚ್ 1ರಂದು ಲೋಕಸಭೆಯಲ್ಲಿ ಘೊಷಿಸಿದ್ದರು.

ಭಾರತೀಯ ಕ್ರೀಡಾ ಪ್ರಾಧಿಕಾರದ ಬೆಂಗಳೂರು ಪ್ರಾದೇಶಿಕ ಕಚೇರಿಯ ಮೂಲಕ ದಾಂಡೇಲಿಯಲ್ಲಿ ವಿಶೇಷ ಕ್ರೀಡಾ ವಲಯ ಸ್ಥಾಪನೆಗೆ ಸಿದ್ಧತೆ ನಡೆಸಲಾಗಿತ್ತು. ಜಿಲ್ಲಾಡಳಿತ ಇದಕ್ಕಾಗಿ ದಾಂಡೇಲಿಯಲ್ಲಿ 10 ಎಕರೆ ಜಾಗವನ್ನೂ ಗುರುತಿಸಿತ್ತು. ಅಲ್ಲಿ ಹಾಸ್ಟೆಲ್ ಕಟ್ಟಡ ಹಾಗೂ ಇತರ ಸೌಲಭ್ಯಗಳನ್ನು ನಿರ್ಮಾಣ ಮಾಡುವವರೆಗೆ ತಾತ್ಕಾಲಿಕವಾಗಿ ಕ್ರೀಡಾ ತರಬೇತಿ ವಲಯ ಪ್ರಾರಂಭಿಸಲು ಸರ್ಕಾರಿ ಕಾಲೇಜ್​ನ ಹಾಸ್ಟೆಲ್​ನಲ್ಲಿ ಜಾಗ ನೀಡಲು ನಿರ್ಧರಿಸಲಾಗಿತ್ತು. ಈ ಸಂಬಂಧ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ತಾತ್ಕಾಲಿಕವಾಗಿ ಹಾಸ್ಟೆಲ್ ಹಸ್ತಾಂತರಿಸಲು ಕಾಲೇಜ್ ಶಿಕ್ಷಣ ಇಲಾಖೆ ಆದೇಶ ಕೂಡ ಹೊರಡಿಸಿತ್ತು. ಅಲ್ಲದೆ, ದಾಂಡೇಲಿ ನಗರಸಭೆಯ ಆಡಳಿತದಲ್ಲಿರುವ ಕ್ರೀಡಾಂಗಣ, 200 ಮೀಟರ್ ಟ್ರ್ಯಾಕ್, ವಾಲಿಬಾಲ್ ಕೋರ್ಟ್, ಕುಸ್ತಿ ಅಂಕಣಗಳನ್ನು ಬಳಸಿಕೊಳ್ಳಲು ಅನುಮತಿಯನ್ನೂ ಪಡೆಯಲಾಗಿತ್ತು. ಇಷ್ಟೆಲ್ಲ ಆದ ನಂತರ ಎಸ್​ಎಜಿ ನಿರ್ವಣದಿಂದ ಎಸ್​ಎಐ ಹಿಂದೆ ಸರಿದುಬಿಟ್ಟಿದೆ. ಸಾಕಷ್ಟು ಪತ್ರ ವ್ಯವಹಾರ, ಫೋನ್ ಮಾಡಿದರೂ ಸ್ಪಂದನೆಯೇ ಇಲ್ಲ ಎಂಬುದು ದಾಂಡೇಲಿ-ಹಳಿಯಾಳ ಶಾಸಕ ಆರ್.ವಿ. ದೇಶಪಾಂಡೆ ಅವರ ಅಭಿಪ್ರಾಯ.

ಭಾರತದ ಬೋಲ್ಟ್​ಗಳು: ಕಟ್ಟುಮಸ್ತಾದ ಎತ್ತರದ ಕಪ್ಪು ನಿಲುವು, ತೊಲೆಯಂತಹ ಕಾಲುಗಳು, ಕಬ್ಬಿಣದ ಸಲಾಕೆಯಂಥ ಕೈಗಳು, ಗಾಳಿ ಬಂದರೂ ಮಿಸುಕಾಡದೆ ಅಂಟಿಕೊಂಡಿರುವ ಗುಂಗುರು ಕೂದಲು… ಇಷ್ಟು ಹೇಳುವಾಗಲೇ ಅರ್ಥವಾಗುತ್ತದೆ. ಇದು ನಿಗ್ರೋಗಳ ಚಿತ್ರಣ. ನಿಗ್ರೋ ಎಂದಾಗ ಮಿಂಚಿನ ಓಟಗಾರ ಉಸೇನ್ ಬೋಲ್ಟ್ ನೆನಪಾಗುತ್ತಾರೆ. ಆದರೆ, ನಮ್ಮಲ್ಲಿಯೂ ಇರುವ ಎಷ್ಟೋ ಉಸೇನ್ ಬೋಲ್ಟ್ ಗಳು ಸೂಕ್ತ ಪೋ›ತ್ಸಾಹವಿಲ್ಲದೆ ಬಳಲುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಹಳಿಯಾಳ, ಅಂಕೋಲಾ, ಮುಂಡಗೋಡ ತಾಲೂಕುಗಳಲ್ಲಿ ಮಾತ್ರ ನೆಲೆಸಿರುವ ಸಿದ್ದಿಗಳು ಕ್ರೀಡೆಯಲ್ಲಿ ಯಾರಿಗೇನೂ ಕಡಿಮೆ ಇಲ್ಲ. ಓಡಲು, ಜಿಗಿಯಲು ನಿಂತರೆ ಅವರನ್ನು ಮಣಿಸುವವರು ಯಾರೂ ಇಲ್ಲ. ಆದರೆ, ಅವರಿಗೆ ವಿಶೇಷ ತರಬೇತಿ ಸಿಗದೇ ಉತ್ತರ ಕನ್ನಡದ ಕಾಡಿನಲ್ಲೇ ಆಡಿಕೊಂಡಿದ್ದಾರೆ. ಸದ್ಯ ರಾಜ್ಯದ ವಿವಿಧ ಕ್ರೀಡಾ ಹಾಸ್ಟೆಲ್​ಗಳಲ್ಲಿ 70ಕ್ಕೂ ಅಧಿಕ ಸಿದ್ದಿ ಹುಡುಗರು ಕ್ರೀಡಾ ಸಾಧನೆಯಲ್ಲಿ ತೊಡಗಿದ್ದಾರೆ. ಶಾರದಾ ಸಿದ್ದಿ, ಆಗ್ನೆಲ್ ಮಿಂಗೆಲ್, ರೊನಾಲ್ಡ್, ಪೆದ್ರೂ ಸಿದ್ದಿ, ಕೃಷ್ಣ ಸಿದ್ದಿ ಮುಂತಾದವರು ಕ್ರೀಡಾ ಸಾಧನೆ ಮಾಡಿದ್ದಾರೆ. ಇತ್ತೀಚೆಗೆ ಹಳಿಯಾಳದ ಬಾಲಕಿಯೊಬ್ಬಳು ಅಥ್ಲೆಟಿಕ್ಸ್​ನಲ್ಲಿ ಫ್ರಾನ್ಸ್ ವರೆಗೂ ಹೋಗಿ ಬಂದಿದ್ದಳು.

ವಿಶೇಷ ವಲಯವೇಕೆ?: ಸರಿಯಾಗಿ ತರಬೇತಿ ಸಿಕ್ಕರೆ ಸಿದ್ದಿ ಮಕ್ಕಳು ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡುವರು ಎಂಬುದರಲ್ಲಿ ಎರಡು ಮಾತಿಲ್ಲ. ಸದ್ಯ ಕಾರವಾರ ಕ್ರೀಡಾ ಹಾಸ್ಟೆಲ್​ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿದ್ದಿಗಳೇ ಇದ್ದಾರೆ. ಆದರೆ, ಈ ಜನಾಂಗದ ಮಕ್ಕಳು ಒಂದು ರೀತಿಯ ನಾಚಿಕೆ ಸ್ವಭಾವದವರು. ಮನೆ ಬಿಟ್ಟು ದೂರು ಹೋಗುವುದಿಲ್ಲ. ಇದರಿಂದ ಅವರಿಗೆ ಊರಿನ ಸಮೀಪವೇ ಹಾಸ್ಟೆಲ್ ಮಾಡಿ ಇಲ್ಲೇ ತರಬೇತಿ ನೀಡಿದರೆ ಉತ್ತಮ ಸಾಧನೆ ಮಾಡಬಲ್ಲರು ಎಂಬುದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ತರಬೇತುದಾರ ಪ್ರಕಾಶ ರೇವಣಕರ್ ಅವರ ಅಭಿಪ್ರಾಯ.

ಸಿದ್ದಿ ಜನಾಂಗದ ಕ್ರೀಡಾಪಟುಗಳಿಗೆ ಪೋ›ತ್ಸಾಹ ಬೇಕಿದೆ. ಈ ಸಂಬಂಧ ಕೇಂದ್ರ ಸರ್ಕಾರ ಖಾಸಗಿ ಕಂಪನಿಯೊಂದರ ಸಾಮಾಜಿಕ ಜವಾಬ್ದಾರಿ ನಿಧಿ ಪಡೆದು, ನಮ್ಮ ದಾಂಡೇಲಿಯಲ್ಲಿ ವಿಶೇಷ ಕ್ರೀಡಾ ವಲಯ ನಿರ್ವಣಕ್ಕೆ ಮುಂದಾಗಿದ್ದು, ಖುಷಿಯ ವಿಷಯವಾಗಿತ್ತು. ಈ ಸಂಬಂಧ ಸಾಕಷ್ಟು ಪತ್ರ ವ್ಯವಹಾರ ಮಾಡಿ ಕ್ರೀಡಾ ಪ್ರಾಧಿಕಾರಕ್ಕೆ ಬೇಕಾದ ಎಲ್ಲ ಸಹಕಾರ ನೀಡಿದ್ದೇವು. ನಂತರ ಪ್ರಾಧಿಕಾರ ಮುಂದಡಿ ಇಡಲೇ ಇಲ್ಲ. ಈ ಬಗ್ಗೆ ಗಮನಿಸಿ ಯೋಜನೆ ಮರು ರೂಪಿಸಬೇಕು ಎಂಬುದು ನಮ್ಮ ಆಗ್ರಹ. | ಆರ್.ವಿ. ದೇಶಪಾಂಡೆ ಹಳಿಯಾಳ ಶಾಸಕ