ಕೆ.ಎಂ.ದೊಡ್ಡಿ: ಗೃಹಸಚಿವ ಡಾ.ಜಿ.ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ)ಸಂಸ್ಥೆ ಅಧಿಕಾರಿಗಳು ನಡೆಸಿರುವ ದಾಳಿ ಖಂಡಿಸಿ ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ವೇದಿಕೆ ವತಿಯಿಂದ ಕೆ.ಎಂ.ದೊಡ್ಡಿಯ ವಿಶ್ವೇಶ್ವರಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.
ಮದ್ದೂರು-ಮಳವಳ್ಳಿ ಮುಖ್ಯರಸ್ತೆಯಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆಯ ಮುಂಭಾಗ ಕರ್ನಾಟಕ ಶೋಷಿತ ಸಸಮುದಾಯಗಳ ವೇದಿಕೆಯ ಅಧ್ಯಕ್ಷ ಸುರೇಶ್ ಕಂಠಿ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ರಸ್ತೆ ಸಂಚಾರ ತಡೆ ನಡೆಸಿ ಕೇಂದ್ರ ಸರ್ಕಾರದ ಇ.ಡಿ. ಸಂಸ್ಥೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸುರೇಶ್ ಕಂಠಿ ಮಾತನಾಡಿ, ಗೃಹಸಚಿವ ಡಾ.ಜಿ. ಪರಮೇಶ್ವರ್ ದಲಿತ ಸಮುದಾಯದ ಪ್ರಭಾವಿ ರಾಜಕಾರಣಿ, ರಾಜ್ಯದ ಮುಖ್ಯಮಂತ್ರಿಯಾಗುವ ಅವಕಾಶವಿರುವ ಹಿನ್ನೆಲೆಯಲ್ಲಿ ಅವರ ರಾಜಕೀಯ ಏಳಿಗೆಯನ್ನು ಸಹಿಸದೆ ಅವರ ಹೆಸರಿಗೆ ಕಳಂಕ ತರುವ ದುರುದ್ದೇಶದಿಂದ ಕೇಂದ್ರದ ಬಿಜೆಪಿ ಸರ್ಕಾರ ಅವರ ಶಿಕ್ಷಣ ಸಂಸ್ಥೆಗಳ ಮೇಲೆ ರಾಜಕೀಯ ಪ್ರೇರಿತವಾಗಿ ದಾಳಿ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಾ.ಜಿ ಪರಮೇಶ್ವರ್ ಅವರ ತಂದೆ ಎಚ್.ಎಂ.ಗಂಗಾಧರಯ್ಯ ಅವರು ತುಮಕೂರಿನಲ್ಲಿ ಸಿದ್ದಾರ್ಥ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬಡ ವಿದ್ಯಾರ್ಥಿಗಳ ಉಚಿತವಾಗಿ ಶಿಕ್ಷಣ ನೀಡಿ ಸಾವಿರಾರು ಜನರಿಗೆ ದಾರಿದೀಪವಾಗಿದ್ದಾರೆ. ತಂದೆಯ ಆದರ್ಶಗಳನ್ನು ಮೈಗೂಡಿಸಿಕೊಂಡು ಅವರ ಶಿಕ್ಷಣ ಸಂಸ್ಥೆಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತಿದ್ದು, ಅವರನ್ನು ರಾಜಕೀಯವಾಗಿ ದುರ್ಬಲಗೊಳಿಸಲು ಕೇಂದ್ರ ಸರ್ಕಾರ ಸಂಚು ರೂಪಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿ.ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಹುದ್ದೆಯನ್ನು ತಪ್ಪಿಸಲು ಕೇಂದ್ರದ ಬಿಜೆಪಿ ಸರ್ಕಾರ ನಟಿ ರನ್ಯಾರಾವ್ ಕೇಸಿನಲ್ಲಿ ಸಿಲುಕಿಸುವ ಹುನ್ನಾರ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಒಬ್ಬ ದಲಿತನ ನಾಯಕನ ಗೌರವಕ್ಕೆ ಧಕ್ಕೆ ತರಲು ಯತ್ನಿಸುತ್ತಿರುವ ಕೇಂದ್ರ ಬಿಜೆಪಿ ಸರ್ಕಾರ ವಿರುದ್ಧ ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ದಲಿತ ಮುಖಂಡ ಕೆ.ಕಬ್ಬಾಳಯ್ಯ ಮಾತನಾಡಿ, ಡಾ.ಜಿ.ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆಗಳ ಮೇಲೆ ದುರುದ್ದೇಶಪೂರ್ವಕ ದಾಳಿ ನಡೆಸಿ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಹುದ್ದೆಗೇರುವ ಅವಕಾಶದಿಂದ ದೂರವಿರಿಸಲು ಹಾಗೂ ರಾಜಕೀಯವಾಗಿ ಪರಮೇಶ್ವರ್ ಅವರ ಜನಪ್ರಿಯತೆ ಕುಗ್ಗಿಸಲು ಕೇಂದ್ರ ಬಿಜೆಪಿ ಸರ್ಕಾರ ಇ.ಡಿ. ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ದೂರಿದರು.
ಕರ್ನಾಟಕ ಶೋಷಿತ ಸಮುದಾಯದ ತಾಲೂಕು ಅಧ್ಯಕ್ಷ ಕರಡಕೆರೆ ಯೋಗೇಶ್, ಭಾರತಿನಗರ ಎಸ್ಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಮೀನ್ ಶಿವಲಿಂಗಯ್ಯ, ಮುಖಂಡರಾದ ಮುಡೀನಹಳ್ಳಿ ತಿಮ್ಮಯ್ಯ, ಕೆ.ಕೆ.ಹಳ್ಳಿ ಮರಿಸ್ವಾಮಿ, ರುದ್ರಯ್ಯ, ಪರಮೇಶ್, ಓಂಪ್ರಕಾಶ್, ಟಿ.ಬಿ.ಹಳ್ಳಿ ಸಂತೋಷ್, ಕ್ಯಾತಘಟ್ಟ ಸುನೀಲ್, ಬೊಪ್ಪಸಮುದ್ರ ಅನಿಲ್‌ಕುಮಾರ್, ಅಣ್ಣೂರು ನಿರಂಜನ್, ಕೆ.ಕೆ.ಹಳ್ಳಿ ಅಪ್ಪು ಮತ್ತಿತರರು ಪಾಲ್ಗೊಂಡಿದ್ದರು.