ಜಿಲ್ಲೆ

ಸಿದ್ದಾಪುರದಲ್ಲಿ ಕೃಷಿ ಚಟುವಟಿಕೆ ಚುರುಕು

ಸಿದ್ದಾಪುರ: ತಾಲೂಕಿನಾದ್ಯಂತ ಹದಮಳೆ ಸುರಿದಿದೆ. ಮಳೆಗಾಲ ಆರಂಭದ ಮುನ್ಸೂಚನೆ ನೀಡಿದೆ. ಹೀಗಾಗಿ ತಾಲೂಕಿನ ಪೂರ್ವಭಾಗದಲ್ಲಿ ಬಿತ್ತನೆ ಕೃಷಿ ಚಟುವಟಿಕೆ ಚುರುಕುಗೊಂಡಿದೆ.

ತಾಲೂಕಿನಲ್ಲಿ ಅಂದಾಜು 5,965 ಹೆಕ್ಟೇರ್ ಭತ್ತದ ಕ್ಷೇತ್ರ ಇದ್ದು, ಇದರಲ್ಲಿ 230 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆ ಕೃಷಿ ನಡೆಯಲಿದೆ. ಈಗಾಗಲೇ ಕೃಷಿಕರು ಗದ್ದೆ ಹದ ಮಾಡುವ ಪೂರ್ವದಲ್ಲಿ ದಡ್ಡಿ (ಸಗಣಿ) ಗೊಬ್ಬರವನ್ನು ಗದ್ದೆಗೆ ಹಾಕಿ, ಅದನ್ನು ಹರಡಿ ಗದ್ದೆಯನ್ನು ಹದ ಮಾಡುವುದಕ್ಕೆ ಮುಂದಾಗಿದ್ದಾರೆ. ತಾಲೂಕಿನಲ್ಲಿ ಮುಂಗಾರು ಮಳೆಯ ಸಿಂಚನ ಆಗಿದ್ದು, ಬಿತ್ತನೆ ಕೃಷಿ ಮಾಡುವುದಕ್ಕೆ ಇದು ಉತ್ತಮ ಸಮಯ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ತಾಲೂಕಿನಲ್ಲಿ ಅತಿ ಹೆಚ್ಚು ಭತ್ತ ಬೆಳೆಯುವ ಭತ್ತದ ಕಣಜ ಎಂದೇ ಗುರುತಿಸಿಕೊಂಡಿರುವ ಕವಂಚೂರು, ನೆಜ್ಜೂರು, ಅರೆಂದೂರು, ಮಳಲವಳ್ಳಿ, ಅಕ್ಕುಂಜಿ ಮತ್ತಿತರ ಕಡೆಗಳಲ್ಲಿ ರೈತರು ಕಳೆದ ಹತ್ತು ದಿನಗಳಿಂದ ದಿನವಿಡಿ ಗದ್ದೆ ಕೆಲಸದಲ್ಲಿ ತೊಡಗಿದ್ದಾರೆ. ಈಗಾಗಲೆ ಭತ್ತ ಬೀಜ ಬಿತ್ತನೆ ಮಾಡುವ ಶೇ. 15ರಷ್ಟು ಕ್ಷೇತ್ರದಲ್ಲಿ ಬಿತ್ತನೆಯೂ ಮುಗಿದಿದೆ.

ಭತ್ತದ ಬೀಜ, ರಸಗೊಬ್ಬರ ಲಭ್ಯ: ಮುಂಗಾರು ಮಳೆ ಆರಂಭವಾಗುವ ಪೂರ್ವದಲ್ಲಿಯೇ ಕೃಷಿ ಇಲಾಖೆ ಜಾಗೃತಿ ವಹಿಸಿ ತಾಲೂಕಿಗೆ ಅವಶ್ಯವಿರುವ ಭತ್ತದ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಮಾಡಿ ಕೃಷಿಕರಿಗೆ ನೀಡುತ್ತಿದೆ. ಎಂಟಿಯು 1001, ಎಂಟಿಯು 1010, ಬಿಪಿಟಿ, ಪಿಎಸಿ, ಇಂಟಾನ್ ತಳಿಯ ಭತ್ತದ ಬೀಜಗಳು ಹಾಗೂ ಯೂರಿಯಾ, ಪೊಟ್ಯಾಷ್, ಡಿಎಪಿ ಹಾಗೂ ಇತರ ಸಂಯುಕ್ತ ಗೊಬ್ಬರಗಳು ಇಲಾಖೆಯಲ್ಲಿ ಲಭ್ಯ ಇವೆ.

ಮಳೆ ವಿವರ: ತಾಲೂಕಿನಲ್ಲಿ 2018ರಲ್ಲಿ 190.2 ಮಿ.ಮೀ. ಮಳೆಯಾಗಿದ್ದರೆ, ಕಳೆದ ವರ್ಷ (2019) ಜೂ. 1ರ ವೇಳೆಗೆ 15.0 ಮಿ.ಮೀ. ಮಳೆಯಾಗಿತ್ತು, ಈ ವರ್ಷ ಜೂ. 1ರ ವೇಳೆಗೆ 136.4 ಮಿ.ಮೀ. ಮಳೆಯಾಗಿದೆ.

ತಾಲೂಕಿನಲ್ಲಿ ಮುಂಗಾರು ಮಳೆಯ ಸಿಂಚನ ಆಗಿದೆ. ಭತ್ತ ಬೀಜ ಬಿತ್ತನೆಗೆ ಇದು ಹೆಚ್ಚು ಅನುಕೂಲಕರ. ಈಗಾಗಲೇ ಕೃಷಿಕರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಒಂದು ವಾರದಲ್ಲಿ ಮತ್ತಷ್ಟು ಕೃಷಿ ಕೆಲಸ ಹೆಚ್ಚಾಗುವ ಸಾಧ್ಯತೆ ಇದೆ. ಕೃಷಿಕರು ಯಾವುದೇ ಮಾಹಿತಿ ಬೇಕಿದ್ದರೂ ಇಲಾಖೆಯನ್ನು ಸಂರ್ಪಸಬಹುದು. | ಪ್ರಶಾಂತ ಜಿ.ಎಸ್. ಕೃಷಿ ಅಧಿಕಾರಿ ಸಿದ್ದಾಪುರಹದ ಮಳೆ ಬಿದ್ದು ನಂತರ ಮುಂಗಾರು ಮಳೆ ಆರಂಭಗೊಂಡರೆ ಕೃಷಿ ಚಟುವಟಿಕೆಗಳನ್ನು ನಡೆಸಲು ಹೆಚ್ಚು ಅನುಕೂಲವಾಗುತ್ತದೆ. ಈ ವರ್ಷ ಮೇ ತಿಂಗಳಲ್ಲಿ ಒಂದೆರಡು ಹದ ಮಳೆ ಬಿದ್ದಿವೆ. ಜೂನ್ ತಿಂಗಳ ಆರಂಭದ ದಿನದಲ್ಲಿಯೇ ಮಳೆ ಬಿದ್ದಿರುವುದರಿಂದ ಕೃಷಿ ಕೆಲಸ ಪ್ರಾರಂಭಿಸುವುದಕ್ಕೆ ಸೂಕ್ತವಾದ ಸಮಯವಾಗಿದೆ.| ಪಿ.ವಿ. ಹೆಗಡೆ ಅಲವಳ್ಳಿ ಕೃಷಿಕ