ಸಿದ್ದಾಪುರ ಗ್ರಾಪಂ ಅಧ್ಯಕ್ಷೆಯಾಗಿ ಪ್ರೇಮಾ, ಉಪಾಧ್ಯಕ್ಷರಾಗಿ ಪಳನಿಸ್ವಾಮಿ ಆಯ್ಕೆಯಾದರು. 
ಜಿಲ್ಲೆ

ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ

ಸಿದ್ದಾಪುರ: ಸಿದ್ದಾಪುರ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಅಧ್ಯಕ್ಷೆಯಾಗಿ ಪ್ರೇಮಾ ಗೋಪಾಲ ಹಾಗೂ ಉಪಾಧ್ಯಕ್ಷರಾಗಿ ಎಚ್.ಎನ್. ಪಳನಿಸ್ವಾಮಿ ಚುನಾಯಿತರಾದರು.

ಒಟ್ಟು 25 ಸದಸ್ಯ ಬಲವಿರುವ ಪಂಚಾಯಿತಿಯಲ್ಲಿ 15 ಬಿಜೆಪಿ, 9 ಕಾಂಗ್ರೆಸ್ ಬೆಂಬಲಿತರು ಹಾಗೂ ಒಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನ ಎಸ್‌ಸಿ(ಪರಿಶಿಷ್ಟ ಜಾತಿ) ಮಹಿಳೆಗೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಸಂಖ್ಯಾಬಲದ ಆಧಾರದಲ್ಲಿ ಎಲ್ಲವೂ ನಡೆದಿದ್ದರೆ ಬಿಜೆಪಿ ಬೆಂಬಲಿತರೆ ಮತ್ತೆ ಅಧಿಕಾರ ಹಿಡಿಯಬೇಕಾಗಿತ್ತು. ಆದರೆ, ಅಚ್ಚರಿಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ರಾಜಕೀಯ ತಂತ್ರಗಾರಿಕೆ ಬಳಸಿದ ಪರಿಣಾಮ ಚುನಾವಣೆಯಲ್ಲಿ ಬೆಂಬಲಿತರು ಗೆಲುವು ಸಾಧಿಸಿದ್ದಾರೆ.

ಗುಪ್ತ ಮತದಾನದಲ್ಲಿ ಪ್ರೇಮಾ ಅವರಿಗೆ 14 ಮತ್ತು ಬಿಜೆಪಿ ಬೆಂಬಲಿತೆ ಎಚ್.ಧನಲಕ್ಷ್ಮೀ ಅವರಿಗೆ 11 ಮತ ಲಭಿಸಿದವು. ಉಪಾಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಪಳನಿಸ್ವಾಮಿ ಅವರಿಗೆ 14 ಮತ ಮತ್ತು ಬಿಜೆಪಿ ಬೆಂಬಲಿತ ಎಂ.ಎ.ಆನಂದ ಅವರಿಗೆ 11 ಮತ ದೊರೆಯಿತು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಪ್ರೀತಿ ಚಿಕ್ಕಮಾದಯ್ಯ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಕಾಂಗ್ರೆಸ್ ವಲಯ ಅಧ್ಯಕ್ಷ ಎಸ್.ಬಿ. ಪ್ರತೀಶ, ಮುಖಂಡರಾದ ಬಿಜೋಯ್, ಬಶೀರ್ ಮತ್ತಿತರರು ಇದ್ದರು.