ಹಾಸನ: ಶಿವಯೋಗಿ ಸಿದ್ದರಾಮೇಶ್ವರರು ಕೇವಲ ಶಿವಯೋಗಿ ಮಾತ್ರವಲ್ಲ, ಕಾಯಕ ಯೋಗಿಯಾಗಿ ಕಾಯಕದಿಂದ ಬಂದಿದ್ದನ್ನು ಮಾತ್ರ ಸ್ವೀಕರಿಸಿ ಅದರಲ್ಲಿ ಉಳಿದಿದ್ದನ್ನು ದಾಸೋಹ ಮಾಡುವಂತೆ ಕರೆ ಕೊಟ್ಟವರು ಎಂದು ನಿವೃತ್ತ ಪ್ರಾಂಶುಪಾಲ ತಿರುಪತಿಹಳ್ಳಿ ಶಿವಶಂಕರಪ್ಪ ಹೇಳಿದರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಯಾವಾಗಲು ನೆಲ ಮೂಲವನ್ನು ಗಟ್ಟಿಗೊಳಿಸಬೇಕು. ಅಂತಹವರಲ್ಲಿ ಸಿದ್ದರಾಮೇಶ್ವರರು ಸೇರುತ್ತಾರೆ. ಸಾಲಮುಕ್ತಿ ಕೇಂದ್ರವನ್ನು 12ನೇ ಶತಮಾನದಲ್ಲೇ ಸ್ಥಾಪನೆ ಮಾಡುತ್ತಾರೆ. ಸಮಾಜದ ಒಳಿತಿಗಾಗಿ ಮಠವನ್ನು ಕಟ್ಟುತ್ತಾರೆ. ಇವತ್ತು ಕೂಡ ಅವರು ಕಟ್ಟಿದ ಶಿವಾಲಯಗಳಿವೆ. ತಮ್ಮ ಜೀವನವನ್ನೇ ಜನರ ಸೇವೆಗಾಗಿ ಮುಡುಪಾಗಿಟ್ಟರು ಎಂದರು.
ಹಳ್ಳಿಗಳ ಉದ್ಧಾರಕ್ಕಾಗಿ ಪ್ರಥಮ ಬಾರಿಗೆ ಸಿದ್ದರಾಮೇಶ್ವರರು ಮುಂದಾದರು. 12ನೇ ಶತಮಾನದಲ್ಲಿ ಕೆರೆ- ಕಟ್ಟೆ ಕಟ್ಟಿಸಿದರು. ಕಾಯಕದಿಂದ ಬಂದಿದ್ದು ಮಾತ್ರ ಸ್ವೀಕರಿಸಿ ಅದರಲ್ಲಿ ಉಳಿದಿದ್ದನ್ನು ದಾಸೋಹ ಮಾಡಬೇಕು ಎಂದು ಕರೆ ಕೊಟ್ಟವರು. ಮನಶುದ್ಧ ಇಲ್ಲದೆ ಸಾರ್ಥಕತೆಯ ಯಾವ ಕೆಲಸ ಮಾಡಲು ಸಾಧ್ಯವಿಲ್ಲ. ಚಿತ್ತಶುದ್ಧದಿಂದ ಮಾಡುವ ಕೆಲಸಕ್ಕೆ ಎಲ್ಲಾ ಕಡೆಯಿಂದ ಸಹಾಯಾಸ್ತ ಸಿಗುತ್ತದೆ. ನಿನ್ನ ಸರ್ವಾಂಗವು ಇಷ್ಟಲಿಂಗವಾದಾಗ ಮಾತ್ರ ಗುರಿ ಸಾಧ್ಯ ಎಂದು ಜನರಿಗೆ ಮನವರಿಕೆ ಮಾಡಿಕೊಟ್ಟವರು ಎಂದು ತಿಳಿಸಿದರು.
ಇಂದು ಸಿಗುತ್ತಿರುವ ಶುದ್ಧವಾದ ಗಾಳಿ ಮುಂದೆ ಸಿಗುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಗಿಡ-ಮರಗಳ ಪೋಷಣೆ ಕಡಿಮೆ ಆಗಿರುವುದು. ದುಂಬಿಗಳು ಯಾವತ್ತು ನಾಶವಾಗುತ್ತವೆ ಅಂದೇ ಒಳ್ಳೆ ವಾತಾವರಣ ನಾಶವಾಗುತ್ತದೆ. ಸಮಾಜದ ಕೆಲಸ ಎಂದರೆ ಎಲ್ಲಾ ಜೀವಿಗಳಿಗೂ ಒಳಿತು ಮಾಡುವ ಕೆಲಸ ಎಂದು ಸಲಹೆ ನೀಡಿದರು. ಗಿಡ- ಮರ, ಪ್ರಾಣಿ- ಪಕ್ಷಿ ನಮ್ಮದೆಂದು ಭಾವನೆ ಇರಬೇಕು. ನಮಗೆ ಆತ್ಮ ಜ್ಞಾನ ಕೊಟ್ಟವರು ಋಷಿ ಮುನಿಗಳು. ನಾವು ಮಾಡುವ ಉತ್ತಮ ಕೆಲಸಗಳಲ್ಲಿ ಟೀಕೆಗಳು ಬರುವುದು ಸಹಜ. ಟೀಕೆಯು ಬಸವಣ್ಣನವರನ್ನೇ ಬಿಡಲಿಲ್ಲ. ನಾವು ಮಾಡುವ ಕೆಲಸ ವ್ಯರ್ಥ ಎಂದುಕೊಳ್ಳಬಾರದು ಎಂದು ಹೇಳಿದರು.
ನಳಂದ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಎಚ್.ಎಸ್. ರಾಜಶೇಖರ್ ಮಾತನಾಡಿ, ಮಕ್ಕಳಿಗೆ ನಾವು ಕಲಿಸುವ ಪಾಠದಲ್ಲಿ ಮುಂದಿನ ಭವಿಷ್ಯ ಅಡಗಿದೆ. ತಾಯಿ ತನ್ನ ಮಗ ಸಿದ್ದರಾಮೇಶ್ವರ ಅವರಿಗೆ ಕಲಿಸಿದ ಸಂಸ್ಕೃತಿಯು ಇಂದು ಪ್ರಜ್ವಲಿಸುತ್ತಿದೆ. ಇಂದು ಮೊಬೈಲ್, ಟಿವಿಯಿಂದ ಯುವ ಜನತೆಗೆ ಮಾರಕವಾಗುತ್ತಿದೆ. ಡಿಜಿಟಲ್ ಯುಗವನ್ನು ನಾವು ಒಳ್ಳೆಯದಕ್ಕೂ ಬಳಸಬಹುದು ಹಾಗೆ ಕೆಟ್ಟದಕ್ಕೂ ಬಳಸಬಹುದು. ಉತ್ತಮ ಸಮಾಜ ನಿರ್ಮಾಣಕ್ಕಾಗಿ ನಾವು ಬದುಕಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮೋಹನ್ ಕುಮಾರ್, ಅಖಿಲ ಕರ್ನಾಟಕ ಭೋವಿ ಮಹಾಸಭಾದ ಅಧ್ಯಕ್ಷ ಎಚ್. ಮಂಜಪ್ಪ, ಜಿಲ್ಲಾ ವೀರಶೈವ ಸಂಘದ ಉಪಾಧ್ಯಕ್ಷ ಭುವನಾಕ್ಷ, ಅಖಿಲ ಭಾರತ ವೀರಶೈವ ಲಿಂಗಾಯತ ತಾಲೂಕು ಅಧ್ಯಕ್ಷ ಕಟ್ಟಾಯಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ತಾರಾನಾಥ್, ಸ್ವಾತಂತ್ರೃ ಹೋರಾಟಗಾರ ಎಚ್.ಎಂ. ಶಿವಣ್ಣ, ಬಸವ ಕೇಂದ್ರದ ಅಧ್ಯಕ್ಷ ಯು.ಎಸ್. ಬಸವರಾಜು ಇತರರು ಉಪಸ್ಥಿತರಿದ್ದರು.