ಬಾಗಲಕೋಟೆ: ಕಳೆದ ಮೂರು ದಶಕಗಳಿಂದ ದಲಿತ ಸಮುದಾಯ ಒಳಮೀಸಲಾತಿಗಾಗಿ ಹೋರಾಟ ಮಾಡಿದೆ. ಸುಪ್ರೀಂಕೋರ್ಟ್ ಆ.1 ರಂದು ಒಳಮೀಸಲಾತಿ ನೀಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ ಎಂದು ತೀರ್ಪು ನೀಡಿದೆ. ಆದರೆ, ಸಿಎಂ ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಪರ ನಿಲ್ಲುತ್ತಿಲ್ಲ. ಕೂಡಲೇ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರೃ ಬಂದ ಬಳಿಕ ಮಹಾತ್ಮ ಗಾಂಧೀಜಿ, ಬಾಬಾಸಾಹೇಬ ಅಂಬೇಡ್ಕರ್, ನೆಹರು, ಸರ್ದಾರ ಪಟೇಲ್ ಅಸ್ಪಶ್ಯತೆ ಹೋಗಲಾಡಿಸುವ ನಿಟ್ಟಿನಲ್ಲಿ ಮೀಸಲಾತಿ ಜಾರಿಗೆ ತಂದರು. ಆದರೆ, ಮೂಲ ದಲಿತರಿಗೆ ಸಾಮಾಜಿಕ ನ್ಯಾಯ ಮರೀಚಿಕೆಯಾಗಿತ್ತು. ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ನಡೆದು ಅಂತಿಮ ಘಟ್ಟ ತಲುಪಿದೆ. ಇನ್ನು ಮುಂದೆ ವಿಳಂಬ ನೀತಿ ಅನುಸರಿಸಬಾರದು ಎಂದು ತಿಳಿಸಿದರು.
ರಾಜ್ಯದಲ್ಲಿ ಒಳಮೀಸಲಾತಿಗಾಗಿ ಎಸ್.ಎಂ.ಕೃಷ್ಣ ಸರ್ಕಾರ ನ್ಯಾ.ಎ.ಜೆ.ಸದಾಶಿವ ಆಯೋಗ ರಚನೆ ಮಾಡಿತು. ಆದರೆ ಆಯೋಗಕ್ಕೆ ಬಿಡಿಗಾಸು ಹಣ ನೀಡಲಿಲ್ಲ. ಆಯೋಗದ ಅಧ್ಯಕ್ಷರಿಗೆ ಟೇಬಲ್, ಕುರ್ಚಿ ಸಹ ಇರಲಿಲ್ಲ. ನಂತರ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಆಯೋಗದ ಕಾರ್ಯಚಟುವಟಿಕೆಗೆ 13.5 ಕೋಟಿ ರೂ. ಅನುದಾನ ನೀಡಿತು.
ಯೋಗ ಅಧ್ಯಯನ ನಡೆಸಿ ವರದಿ ಸ್ವೀಕರಿಸುವ ಹೊತ್ತಿಗೆ ನಮ್ಮ ಸರ್ಕಾರ ಅಧಿಕಾರ ಕಳೆದುಕೊಂಡಿತು. 2013 ರಲ್ಲಿ ಒಳ ಮೀಸಲಾತಿಗಾಗಿ ಆಗ್ರಹಿಸಿ ಹೋರಾಟ ನಡೆದಾಗ ಸಿಎಂ ಸಿದ್ದರಾಮಯ್ಯ ಜಾರಿಗೊಳಿಸುವ ಭರವಸೆ ನೀಡಿದರು. ಆಗಲೂ ಮಾಡಲಿಲ್ಲ. ವರದಿ ಕೂಡ ಸ್ವೀಕರಿಸಲಿಲ್ಲ. ಬಳಿಕ ಬಿಜೆಪಿಕ ಸರ್ಕಾರ ವರದಿ ಸ್ವೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತು.
2023 ಚುನಾವಣೆ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಮೊದಲ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದರು. ಅದು ಕೂಡ ಈಡೇರಲಿಲ್ಲ. ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಿದ ಬಳಿಕ ಆಗಸ್ಟ್ 1 ರಂದು ಸುಪ್ರೀಂಕೋರ್ಟ್ ಒಳಮೀಸಲಾತಿ ತೀರ್ಪು ಪ್ರಕಟಿಸಿದೆ. ಹರಿಯಾಣದಲ್ಲಿ ಬಿಜೆಪಿ ಸರ್ಕಾರ ಜಾರಿಗೊಳಿಸಿದೆ. ಎಲ್ಲವೂ ಗೊತ್ತಿದ್ದರೂ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರ ಒಳಮೀಸಲಾತಿ ಜಾರಿಗೊಳಿಸುತ್ತಿಲ್ಲ. ಮತ್ತೊಂದು ಆಯೋಗ ರಚನೆ ಮಾಡಿ ಕಾಲಹರಣ ಮಾಡುತ್ತಿದ್ದಾರೆ ಎಂದು ಸಂಸದರು ದೂರಿದರು.
ಶಾಂತಿಯುತ ಹೋರಾಟ ನಡೆಸಿ: ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಡಿ.16 ರಂದು ಒಳಮೀಸಲಾತಿಗಾಗಿ ಹೋರಾಟ ಆರಂಭವಾಗಲಿದೆ. ಯಾವುದೇ ಕಾರಣಕ್ಕೂ ಅಶಾಂತಿ ಸೃಷ್ಟಿಸಬಾರದು. ಶಾಂತಿಯುತವಾಗಿ ಹೋರಾಟ ನಡೆಸಬೇಕು. ಸದನ ಒಳಗೆ-ಹೊರಗೆ ಸತ್ಯಾಂಶ ಹೊರಬರಬೇಕು. ಈ ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಅವಧಿಯಲ್ಲಿ ಎಸ್‌ಸಿ 15 ರಿಂದ 17 ರವರೆಗೆ ಹಾಗೂ ಎಸ್ಟಿ ಮೀಸಲಾತಿ 3 ರಿಂದ 7 ರವರೆಗೆ ಹೆಚ್ಚಿಸಿತು.
ಒಳಮೀಸಲಾತಿ ಜಾರಿಗೆ ಕೇಂದ್ರಕ್ಕೆ ಶಿಫಾರಸು ಮಾಡಿತು. ಯಾವುದೇ ಕಾರಣಕ್ಕೂ ಇದು ಇನ್ನೊಬ್ಬರಿಗೆ ಮಾಡುತ್ತಿರುವ ಅನ್ಯಾಯವಲ್ಲ. ಅಣ್ಣ ತಮ್ಮಂದಿರಿಗೆ ಜನಸಂಖ್ಯಾ ಅನುಗುಣವಾಗಿ ಮೀಸಲು ಪ್ರಮಾಣದಲ್ಲಿ ಪಾಲು ಹಂಚಿಕೆಯಾಗಿದೆ. ಇದರಲ್ಲಿ ಯಾರನ್ನೂ ಮೀಸಲಾತಿಯಿಂದ ಕೈಬಿಡಲ್ಲ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ.ಪಾಟೀಲ, ಮುಖಂಡರಾದ ಮುತ್ತಣ್ಣ ಬೆಣ್ಣೂರ, ಶಿವಾನಂದ ಟವಳಿ, ಮಲ್ಲಯ್ಯ ಮುಗುನೂರಮಠ, ಸತ್ಯಾನಾರಾಯಣ ಹೇಮಾದ್ರಿ, ಕೆಎಂಎಫ್ ನಿರ್ದೇಶಕ ವಿವೇಕಾನಂದ ಪಾಟೀಲ(ರಾಜು ಗೌಡ) ಇತರರು ಇದ್ದರು.