ಜಿಲ್ಲೆ

ಸಿದ್ದರಾಮಯ್ಯನಿಗೆ ಸಿಎಂ ಭ್ರಮೆ.


ಹಾಸನ: ‘ಅವನು ಯಾವೂರ ದಾಸ ಎಂದು ಅವನ ಬಗ್ಗೆ ಮಾತನಾಡಲಿ’ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕುರಿತು ಶಿವಮೊಗ್ಗ ಕ್ಷೇತ್ರದ ಶಾಸಕ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಕಿಡಿಕಾರಿದರು.

ಹಾಸನಾಂಬೆ ದರ್ಶನಕ್ಕೆಂದು ಸೋಮವಾರ ನಗರಕ್ಕಾಗಮಿಸಿದ ಅವರು ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ, ‘ಬಿಜೆಪಿ ನಾಯಕರು ಮಾತನಾಡುವಾಗ ಕನಿಷ್ಠ 5 ನಿಮಿಷ ನನ್ನ ಬಗ್ಗೆ ಮಾತನಾಡದೇ ಇರಲು ಸಾಧ್ಯವಾ ಕೇಳಿ’ ಎಂಬುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ವ್ಯಂಗ್ಯವಾಡಿರುವ ಕುರಿತು ಪ್ರಸ್ತಾಪಿಸಿದಾಗ, ಕೆ.ಎಸ್. ಈಶ್ವರಪ್ಪ ಅವರ ಸಿಟ್ಟು ನೆತ್ತಿಗೇರಿತು.

‘ಅವನು ಯಾವೂರ ದಾಸ ಎಂದು ಅವನ ಬಗ್ಗೆ ಮಾತನಾಡಬೇಕ್ರೀ’ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುತ್ತೇನೆ ಎಂಬ ಭ್ರಮೆಯಲ್ಲಿದ್ದಾರೆ. ಅವರು ಮುಖ್ಯಮಂತ್ರಿ ಆಗಿದ್ದಾಗ ಹಿಂದುಳಿದವರು, ದಲಿತರ ಉದ್ಧಾರ ಮಾಡಿದ್ದರೆ ಏಕೆ ಸೋಲುತ್ತಿದ್ದರು? ಅವರ ಸರ್ಕಾರ ಏಕೆ ಮತ್ತೆ ಅಧಿಕಾರಕ್ಕೆ ಬರಲಿಲ್ಲ ಎಂದು ಪ್ರಶ್ನಿಸಿದರು.

ಇಡೀ ವಿಶ್ವವೇ ಮೆಚ್ಚಿರುವಂತಹ ವಿಶ್ವನಾಯಕ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡಲು ಸಿದ್ದರಾಮಯ್ಯಗೆ ಯಾವುದೇ ನೈತಿಕತೆ ಇಲ್ಲ, ಅವನೊಬ್ಬ ದೊಡ್ಡ ಮನುಷ್ಯ ಅಂದುಕೊಂಡಿದ್ದಾನೆ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ಏನು ಮಾಡಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ. ನಾವು ಈ ಸಮಾಜದ ಅಭಿವೃದ್ಧಿಗೆ ಯಾವೆಲ್ಲಾ ಕಾರ‌್ಯಕ್ರಮ ಮಾಡಿದ್ದೇವೆ ಎಂಬುದನ್ನು ಬಿಡುಗಡೆ ಮಾಡುತ್ತೇವೆ ಎಂದು ಸವಾಲು ಹಾಕಿದರು.

ನಾನೇ ಮುಂದಿನ ಮುಖ್ಯಮಂತ್ರಿ ಎಂದು ಹಗಲು ಕನಸು ಕಾಣುತ್ತಿರುವ ಕಾಂಗ್ರೆಸ್‌ನವರು ಮೊದಲು ತಮ್ಮ ಪಕ್ಷದ ಹುಳುಕನ್ನು ಸರಿಪಡಿಸಿಕೊಳ್ಳಲಿ. ಯಾವ ಕೆಲಸ ಮಾಡಿದ್ದಾರೆ ಎಂಬುದಕ್ಕೆ ರಾಜ್ಯದ ಜನರು ಇವರ ಕೈ ಹಿಡಿಯುತ್ತಾರೆ. ಇವರ ಯೋಜನೆಗಳೇನಿದ್ದರೂ ಘೋಷಣೆಯಷ್ಟೇ, ಆದರೆ ಕೆಲಸಗಳಲ್ಲ. ನಮ್ಮದು ಕೆಲಸ ಮಾಡಿ ತೋರಿಸುವ ಸರ್ಕಾರ ಎಂದು ಹೇಳಿದರು.

ಭಾರತ್ ಜೋಡೋ ಯಾತ್ರೆಯಿಂದ ಇಡೀ ರಾಜ್ಯದ ಜನರ ಮನಸ್ಸು ಗೆಲ್ಲುತ್ತೇವೆ , ಅವರೆಲ್ಲರ ಬೆಂಬಲ ನಮಗೆ ಸಿಗುತ್ತದೆ ಎಂಬ ಭ್ರಮೆಯಲ್ಲಿದ್ದಾರೆ. ಇದು ಕರ್ನಾಟಕದಲ್ಲಿ ಡಿಕೆಶಿ ಮತ್ತು ಸಿದ್ದು ಅವರನ್ನು ಜೋಡಿಸುವ ಯಾತ್ರೆ. ಜಾತಿವಾದ ಎಂಬುದು ಕಾಂಗ್ರೆಸ್‌ನಲ್ಲಿ ತುಂಬು ತುಳುಕುತ್ತಿದೆ. ಸಿದ್ದರಾಮಯ್ಯ ತನ್ನ ಹೆಸರಿನಲ್ಲಿ ಉತ್ಸವ ಮಾಡಿ 75 ಕೋಟಿ ರೂ. ಖರ್ಚು ಮಾಡಿದ್ದಾರೆ. ಡಿ.ಕೆ. ಶಿವಕುಮಾರ್ ಒಕ್ಕಲಿಗ ಜಾತಿಯ ಟ್ರಂಪ್ ಕಾರ್ಡ್ ಬಳಸಿಕೊಂಡು ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ. ಇಂತಹ ಜಾತಿವಾದಿತನದಿಂದ ಕಾಂಗ್ರೆಸ್ ಪಕ್ಷ ಸಂಪೂರ್ಣ ನಾಶವಾಗುತ್ತದೆ ಎಂದರು.

ರಾಜ್ಯದ ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಬಾರ್‌ನಲ್ಲಿ ಗೂಂಡಾನಂತೆ ವರ್ತಿಸಿ ಜೈಲಿಗೆ ಹೋಗಿ ಬಂದಿದ್ದಾನೆ, ಕೆಪಿಸಿಸ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಜೈಲಿಗೆ ಹೋಗಿ ಬಂದಿದ್ದಾರೆ. ಇಂತಹವರನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವೇ? ಮುಂದಿನ ದಿನಗಳಲ್ಲಿ ಇಡೀ ದೇಶದಲ್ಲಿ ಕಾಂಗ್ರೆಸ್ ನಿರ್ನಾಮವಾಗಲಿದೆ ಎಂದು ವ್ಯಂಗ್ಯವಾಡಿದರು.

ನಮ್ಮದು ಎಂಕ, ನಾಣಿ, ಸೀನ ಪಕ್ಷ ಅಲ್ಲ:
ನಮ್ಮದು ಎಂಕ, ನಾಣಿ, ಸೀನ ಇರುವ ಪಕ್ಷ ಅಲ್ಲ. ದೇಶಭಕ್ತ ಕಾರ್ಯಕರ್ತರು ಕಟ್ಟಿ ಬೆಳೆಸುತ್ತಿರುವ ಪಕ್ಷ. ನಮ್ಮ ಕಾರ್ಯಕರ್ತರು ಪಕ್ಷ ಗೆಲ್ಲಿಸಲು ಕೆಲಸ ಮಾಡುತ್ತಾರೆಯೇ ಹೊರತು, ಅವರಂತೆ ವ್ಯಕ್ತಿ ಆಧಾರಿತ ರಾಜಕೀಯ ಮಾಡುವುದಿಲ್ಲ ಎಂದು ಕಾಂಗ್ರೆಸ್ ಕುರಿತು ಟೀಕಾ ಪ್ರಹಾರ ನಡೆಸಿದರು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟೀಷರ ಜೊತೆ ಆರ್‌ಎಸ್‌ಎಸ್ ಶಾಮೀಲಾಗಿತ್ತು ಎಂಬುದಾಗಿ ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಸೇರಲು ವಿಮಾನ ನಿಲ್ದಾಣದವರೆಗೂ ಬಂದಿದ್ದಾಗ ರಾಮಲಿಂಗಾರೆಡ್ಡಿ ಅವರಿಗೆ ಈ ವಿಚಾರ ತಿಳಿದಿರಲಿಲ್ಲವೇ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.
ಆರ್‌ಎಸ್‌ಎಸ್ ರಾಷ್ಟ್ರಭಕ್ತ ಸಂಘಟನೆಯಾಗಿದೆ. ಆದರೆ ದೇಶದ್ರೋಹಿ ಸಂಘಟನೆ ಪಿಎ್ಯ ಪರ ಇರುವ ಕಾಂಗ್ರೆಸ್‌ನವರಿಗೆ ಆರ್‌ಎಸ್‌ಎಸ್ ವಿರುದ್ಧ ಸುಳ್ಳು ಆರೋಪ ಮಾಡುವುದು ಕೆಟ್ಟ ಚಾಳಿ ಆಗಿದೆ ಎಂದು ಟೀಕಿಸಿದರು.

ಮುಂದಿನ ಚುನಾವಣೆಯಲ್ಲಿ ರಾಷ್ಟ್ರಭಕ್ತರು ಗೆಲ್ಲುತ್ತಾರೊ, ರಾಷ್ಟ್ರದ್ರೋಹಿಗಳು ಗೆಲ್ಲುತ್ತಾರೊ ಎಂಬುದನ್ನು ಜನ ತೀರ್ಮಾನ ಮಾಡುತ್ತಾರೆ.

ಕಾಶ್ಮೀರದಲ್ಲಿ ತಿರಂಗಾ ಯಾತ್ರೆ ಮಾಡುವ ಸಂದರ್ಭದಲ್ಲಿ ಪಾಕಿಸ್ತಾನದ ಧ್ವಜ ಕಿತ್ತು ತ್ರಿವರ್ಣ ಧ್ವಜ ಹಾರಿಸಿದ್ದು ಸಂಘ ಪರಿವಾರ ಮತ್ತು ಬಿಜೆಪಿ ಕಾರ್ಯಕರ್ತರು. ಉಗ್ರಗಾಮಿಗಳು ಹಾಕಿದ್ದ ಸವಾಲನ್ನು ಕಾಂಗ್ರೆಸ್‌ನವರು ಸ್ವೀಕರಿಸಲಿಲ್ಲ. ಈಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಸುಭದ್ರವಾಗಿದ್ದು, ಒಬ್ಬನೇ ಒಬ್ಬ ಉಗ್ರಗಾಮಿ ದೇಶದೊಳಗೆ ನುಸುಳಲು ಸಾಧ್ಯವಿಲ್ಲ ಎಂದರು.

ಸಚಿವ ಸ್ಥಾನದ ಆಕಾಂಕ್ಷಿ:
ನಾನು ಸಚಿವ ಸ್ಥಾನದ ಆಕಾಂಕ್ಷಿ, ಆದರೆ ಮುಖ್ಯಮಂತ್ರಿಗಳು ಮತ್ತು ಪಕ್ಷದ ವರಿಷ್ಠರು ಯಾವ ತೀರ್ಮಾನ ಕೈಗೊಳ್ಳುತ್ತಾರೆ ಅದಕ್ಕೆ ಬದ್ಧನಾಗಿರುತ್ತೇನೆ. ಸಚಿವ ಸ್ಥಾನ ನೀಡಿದರೆ ಕೆಲಸ ಮಾಡುವೆ, ಇಲ್ಲವೆಂದರೆ ಸಾಮಾನ್ಯ ಕಾರ‌್ಯಕರ್ತನೆಂದು ಪಕ್ಷ ಸಂಘಟನೆ ಮಾಡುವೆ, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಹಿಂದುಳಿದ ವರ್ಗಗಳ ಸಮಾವೇಶ:
ರಾಜ್ಯಾದ್ಯಂತ ಹಿಂದುಳಿದ ವರ್ಗಗಳನ್ನು ಸಂಘಟನೆ ಮಾಡಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನ ಗೆಲ್ಲುವ ಉದ್ದೇಶದಿಂದ ಅ.30 ರಂದು ಕಲಬುರಗಿಯಲ್ಲಿ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶ ಮಾಡಲಾಗುತ್ತಿದೆ ಎಂದು ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಮೈಸೂರಿನಲ್ಲಿ ಪರಿಶಿಷ್ಟ ಜಾತಿಗಳ ಸಮಾವೇಶ, ಬೆಂಗಳೂರಿನಲ್ಲಿ ಮಹಿಳೆಯರ ಸಮಾವೇಶ, ಶಿವಮೊಗ್ಗದಲ್ಲಿ ಯುವಜನ ಸಮಾವೇಶ ಮತ್ತು ಬಳ್ಳಾರಿಯಲ್ಲಿ ಪರಿಶಿಷ್ಟ ಜಾತಿಗಳ ಸಮಾವೇಶ ನಡೆಸಲಾಗುವುದು ಎಂದು ಹೇಳಿದರು.

ಶಾಸಕ ಪ್ರೀತಂಗೌಡ, ಬಿಜೆಪಿ ಮುಖಂಡ ಪ್ರಸನ್ನಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.