ಮೈಸೂರು: ವಸತಿ ಸಚಿವ ವಿ.ಸೋಮಣ್ಣ ವಿರುದ್ಧ ಹಗುರವಾಗಿ ಮಾತನಾಡುವುದನ್ನು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಿಲ್ಲಿಸಬೇಕು ಎಂದು ವೀರಶೈವ ಲಿಂಗಾಯತ ಸಮಾಜದ ನಾಯಕರು ಎಚ್ಚರಿಕೆ ನೀಡಿದರು.
ಸೋಮಣ್ಣ ವಿರುದ್ಧ ಏಕವಚನದಲ್ಲಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಇದೇ ಧೋರಣೆಯನ್ನು ಅವರು ಮುಂದುವರಿಸಿದರೆ ಸಮಾಜದಿಂದ ರಾಜ್ಯಾದ್ಯಂತ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಮೈಮುಲ್ ನಿರ್ದೇಶಕ ಓಂಪ್ರಕಾಶ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ವೀರಶೈವ ಲಿಂಗಾಯತ ಸಮಾಜದ ನಾಯಕರನ್ನು ರಾಜಕೀಯವಾಗಿ ಮುಗಿಸಲು ಸಿದ್ದರಾಮಯ್ಯ ಹುನ್ನಾರ ನಡೆಸಿದ್ದಾರೆ. ಹೋದ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಏಕವಚನದಲ್ಲಿ ಮಾತನಾಡುತ್ತಿದ್ದ ಅವರಿಗೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಧರ್ಮವನ್ನು ಒಡೆಯಲು ಹೋದಾಗಲೂ ವ್ಯತಿರಿಕ್ತ ಪರಿಣಾಮ ಅನುಭವಿಸಿದ್ದಾರೆ. ಆದಾಗ್ಯೂ ಪಾಠ ಕಲಿಯದಿದ್ದರೆ ಮತ್ತೆ ಮುಂದಿನ ದಿನಗಳಲ್ಲಿ ಅನುಭವಿಸಬೇಕಾಗುತ್ತದೆ ಎಂದರು.
ಮುಖಂಡರಾದ ಎಸ್.ಎಂ.ಶಿವಪ್ರಕಾಶ್, ಆಲನಹಳ್ಳಿ ಮಹದೇವಸ್ವಾಮಿ, ಸದಾನಂದ, ಖಂಡೇಶ್ ಹಾಜರಿದ್ದರು.