ಚಿತ್ರದುರ್ಗ: ಬೆಂಗಳೂರಿನ ಸ್ವತಂತ್ರ ಉದ್ಯಾನದಲ್ಲಿ ಆ. 28ರಂದು ಸಿದ್ದರಾಮಯ್ಯ ಹಠಾವೋ ದಲಿತ್ ಬಚವೋ ಹೋರಾಟ ಹಮ್ಮಿಕೊಂಡಿದ್ದೇವೆ ಎಂದು ಕರ್ನಾಟಕ ಅಹಿಂದ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಮೋಹನ್ ದಾಸರಿ ತಿಳಿಸಿದರು.
ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಸಭೆ, ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಧಾನಸಭಾ ಚುನಾವಣೆಗೂ ಮುನ್ನ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಭಾಷಣದಲ್ಲಿ ದಲಿತರ ಏಳಿಗೆಗಾಗಿ ಶ್ರಮಿಸುವುದಾಗಿ, ರಕ್ಷಣೆ ಮಾಡುವುದಾಗಿ ಹೇಳಿದ್ದರು. ಅದ್ಯಾವುದನ್ನು ಮಾಡುತ್ತಿಲ್ಲ ಎಂದು ದೂರಿದರು.
ದಲಿತರಾಮಯ್ಯ ಎಂಬುದಾಗಿ ಘೋಷಿಸಿಕೊಂಡ ಅವರು ರಕ್ಷಣೆ ಬದಲು ಇಡೀ ಸಮುದಾಯಕ್ಕೆ ಭಕ್ಷಕರಾಗಿದ್ದಾರೆ. ವಿಶೇಷ ಯೋಜನೆ ರೂಪಿಸಿ, ದಲಿತರ ಶ್ರೇಯೋಭಿವೃದ್ಧಿಗಾಗಿ ಎಸ್ಸಿಎಸ್ಟಿ-ಟಿಎಸ್‌ಪಿ ಅನುದಾನ ಬಳಸಬೇಕಿತ್ತು. ಆದರೆ, ಅಂದಾಜು 25ಸಾವಿರ ಕೋಟಿ ರೂ. ಗ್ಯಾರಂಟಿ ಯೋಜನೆಗಳಿಗೆ ಬಳಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
11 ಬಾರಿ ಹಣಕಾಸು ಸಚಿವನಾಗಿ ಬಜೆಟ್ ಮಂಡಿಸಿರುವ ಅನುಭವವಿದ್ದು, ಗ್ಯಾರಂಟಿಗಳಿಗೆ ಅನುದಾನ ಕ್ರೋಢಿಕರಿಸುವುದು ತುಂಬಾ ಚೆನ್ನಾಗಿ ಗೊತ್ತಿದೆ ಎಂದವರಿಗೆ ದಲಿತರ ಅನುದಾನದ ಮೇಲೇಕೆ ಕಣ್ಣು ಬಿತ್ತು. ಇದನ್ನು ಲೂಟಿ ಅನ್ನದೆ, ಮತ್ತೇಗೆ ಕರೆಯಬೇಕು ಎಂದರು.
ಸುಪ್ರೀಂ ಕೋರ್ಟ್ ಒಳಮೀಸಲಿಗೆ ಸಮ್ಮತಿಸಿದ್ದರೂ ಸದಾಶಿವ ಆಯೋಗ ಜಾರಿಗೆ ಹಿಂದೇಟು ಹಾಕುತ್ತಿದ್ದಾರೆ. ಸಂವಿಧಾನ ವಿರೋಧಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರಿಗಿಂತ ದಲಿತ ಸಮುದಾಯದ ಹಲವು ಸಂಘಟನೆಗಳ ಪಾತ್ರ ಬಹುದೊಡ್ಡದಿದೆ. ಹೀಗಿದ್ದರೂ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಪ್ರಬುದ್ಧ ಯೋಜನೆಯಡಿ ಒಬಿಸಿ ವಿದ್ಯಾರ್ಥಿಗಳಿಗೆ ವಿಶ್ವದ 1ಸಾವಿರ ರ್ಯಾಂಕ್, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 500 ರ್ಯಾಂಕ್ ಪಟ್ಟಿಯಲ್ಲಿರುವ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯಲು ಅವಕಾಶ ನೀಡಲಾಗಿದೆ. ಆದರೆ, ದಲಿತ ವಿದ್ಯಾರ್ಥಿಗಳಿಗೆ 100 ರ್ಯಾಂಕ್ ಒಳಗಿನ ವಿವಿಗಳಲ್ಲಿ ಮಾತ್ರ ಅವಕಾಶವಿದೆ. ಇದು ಸಮುದಾಯ ವಿರೋಧಿಯಲ್ಲದೆ, ಮತ್ತೇನು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್ ಸರ್ಕಾರದಲ್ಲೇ ಪ್ರತಿ ನಿತ್ಯ ದಲಿತರ ಮೇಲೆ ಕೊಲೆ ಮತ್ತು ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಆದರೆ, ಸೂಕ್ತ ಕ್ರಮಕ್ಕೆ ಮುಂದಾಗುತ್ತಿಲ್ಲ. ಸಮುದಾಯದ ವಿರುದ್ಧವಿದೆ. ಹೀಗಾಗಿ ಹೋರಾಟ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ. ಆದರೆ, ನಮ್ಮ ಹಕ್ಕುಗಳನ್ನು ಪಡೆಯಲು, ಸಮುದಾಯದವರಲ್ಲಿ ಜಾಗೃತಿ ಮೂಡಿಸಲಿಕ್ಕಾಗಿ ಎಂದರು.
ಪದಾಧಿಕಾರಿಗಳಾದ ರಮೇಶ್, ಸಿದ್ಧಾಪುರ ಮಂಜುನಾಥ, ಪಿ.ಎಂ.ತಿಪ್ಪೇಸ್ವಾಮಿ, ಕೆ.ಎನ್.ತಿಪ್ಪೇಶ ಕಡೂರು, ದಾದಾಪೀರ್, ಕಣಮೇಶ್ ಇತರರಿದ್ದರು.